ಬೆಂಗಳೂರು, ಜು.20– ಸಹಸ್ರಾರು ಸಣ್ಣ ವ್ಯಾಪಾರಿಗಳಿಗೆ ಸಣ್ಣ ಸುಳಿವನ್ನೂ ನೀಡದೇ ರಾತ್ರೋರಾತ್ರಿ ಲಕ್ಷಾಂತರ ರೂ. ಜಿಎಸ್ ಟಿ ಕಟ್ಟಲು ನೋಟೀಸ್ ನೀಡುವ ಮೂಲಕ ಸಾವಿರಾರು ಕುಟುಂಬಗಳನ್ನು ಬೀದಿ ಪಾಲು ಮಾಡಲು ಹೊರಟಿರುವ ರಾಜ್ಯ ಸರ್ಕಾರದ ನಡೆ ದಮನಕಾರಿಯಾಗಿದೆ ಎಂದು ಎಂದು ವಿಧಾನ ಪರಿಷತ್ ಸದಸ್ಯ ಟಿ. ಎ. ಶರವಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂದಿನ ವ್ಯಾಪಾರ ಮಾಡಿ ಅಂದಿನ ಹೊಟ್ಟೆ ತುಂಬಿಸಿಕೊಳ್ಳಬೇಕಾದ ಸಣ್ಣ ವ್ಯಾಪಾರಿಗಳಿಗೆಲ್ಲ ಲಕ್ಷಾಂತರ ರೂಪಾಯಿ ಜಿಎಸ್‌ಟಿ ಕಟ್ಟಬೇಕೆಂಬ ನೋಟೀಸ್ ಜಾರಿ ಆಗಿರುವುದಂತೂ ಆಘಾತಕಾರಿಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಕಾಫಿ, ಟೀ, ತರಕಾರಿ, ಹಣ್ಣು ಮಾರಾಟ, ಬೀದಿ ಬದಿ ವ್ಯಾಪಾರಿಗಳು, ಬ್ಯೂಟಿ ಪಾರ್ಲರ್ ನಡೆಸುತ್ತಿರುವ ಸಾವಿರಾರು ವ್ಯಾಪಾರಿಗಳು ಇವತ್ತು ಕಂಗಾಲಾಗಿದ್ದಾರೆ. ಸಣ್ಣ ವ್ಯಾಪಾರಿಗಳ ನಿಯೋಗ ನನ್ನ ಜೊತೆಗೂ ತಮ್ಮ ದುಃಖ, ಅಸಹಾಯಕತೆ ತೋಡಿಕೊಂಡಿದ್ದಾರೆ. ನಾನು ಈ ಜನರ ಪರವಾಗಿದ್ದೇನೆ. ಇವರ ಬದುಕುಗಳ ಬಗ್ಗೆ ನನಗೆ ಸಹಾನುಭೂತಿ ಇದೆ ಎಂದವರು ನೊಂದ ವ್ಯಾಪಾರಿಗಳಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಕ್ಷಣ ಮಧ್ಯಪ್ರವೇಶ ಮಾಡಿ ಈ ಸಮಸ್ಯೆ ಬಗೆಹರಿಸಬೇಕು. ವ್ಯಾಪಾರಿಗಳಲ್ಲಿ ಜಿಎಸ್‌ಟಿ ಪದ್ಧತಿ ಬಗ್ಗೆ ಅರಿವು ಮೂಡಿಸಬೇಕು. ಈಗ ಯಾರಾದರೂ ಬಾಕಿ ಉಳಿಸಿಕೊಂಡಿದ್ದಾರೆ ಎಂದು ಇಲಾಖೆ ಭಾವಿಸಿದ್ದರೆ, ಅದನ್ನು ಸಂಪೂರ್ಣ ಮನ್ನಾ ಮಾಡಿ ಸಣ್ಣ ವ್ಯಾಪಾರಿಗಳಿಗೆ ರಕ್ಷಣೆ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.
- ಕಾವೇರಿ ನದಿಯಲ್ಲಿ ಈಜಲು ಹೋದ ಇಬ್ಬರು ಬಿಬಿಎಂ ವಿದ್ಯಾರ್ಥಿಗಳು ನೀರುಪಾಲು
- ಹೃದಯಾಘಾತದಿಂದ ರೌಡಿ ಸಾವು
- ಪೆಟ್ರೋಲ್, ಡೀಸೆಲ್ ಮದ್ಯವನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವ ಯಾವುದೇ ಯೋಜನೆ ಇಲ್ಲ : ನಿರ್ಮಲಾ
- ಶೀಘ್ರವೇ ಭಾರತದ ಸೇನಾಪಡೆಗಳ ವಿಲೀನ
- ಜನಾರ್ದನ ರೆಡ್ಡಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಸಶಿಕಾಂತ್ ಶೆಂಥಿಲ್