ಥಾಣೆ, ಫೆ.7 (ಪಿಟಿಐ) ಅಪ್ರಾಪ್ತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಖಾಸಗಿ ಆಂಗ್ಲ ಮಾಧ್ಯಮ ಶಾಲೆಯೊಂದರ ಶಿಕ್ಷಕರೊಬ್ಬರನ್ನು ಬಂಧಿಸಲಾಗಿದೆ.
ಆರೋಪಿಯನ್ನು ಶಿಕ್ಷಕ ನವೀನ್ ರಾಮಚಂದ್ರ ನಾಯರ್ (42) ಎಂದು ಗುರುತಿಸಲಾಗಿದೆ. ಈತ ಬದ್ಲಾಪುರ ಪ್ರದೇಶದ ಶಾಲೆಯೊಂದರಲ್ಲಿ ಪಾಠ ಮಾಡುತ್ತಿದ್ದು, ಕಳೆದ ವರ್ಷ ಅಕ್ಟೋಬರ್‌ನಿಂದ 14 ವರ್ಷದ ತನ್ನ ವಿದ್ಯಾರ್ಥಿನಿಗೆ ಕಿರುಕುಳ ನೀಡುತ್ತಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಾಯರ್ ಅವರು ಪರೀಕ್ಷೆ ಬರೆಯುತ್ತಿದ್ದಾಗ, ನತ್ಯ ತರಗತಿಗಳಲ್ಲಿ ಮತ್ತು ಕಾರ್ಯಕ್ರಮವೊಂದಕ್ಕೆ ವೇಷಭೂಷಣವನ್ನು ವಿತರಿಸುವ ಸಂದರ್ಭದಲ್ಲಿ ಅನುಚಿತವಾಗಿ ಸ್ಪರ್ಶಿಸಿದ್ದಾರೆ ಎಂದು ಎಫ್‌ಐಆರ್ ಉಲ್ಲೇಖಿಸಿ ಅಧಿಕಾರಿ ತಿಳಿಸಿದ್ದಾರೆ.
ಅಪ್ರಾಪ್ತೆ ಆರಂಭದಲ್ಲಿ ಕಿರುಕುಳವನ್ನು ಸಹಿಸಿಕೊಂಡಳು ಆದರೆ ನಾಯರ್ ತನ್ನ ಧೋರಣೆಯನ್ನು ನಿಲ್ಲಿಸದಿದ್ದಾಗ ಪೋಷಕರೊಂದಿಗೆ ಪೊಲೀಸರನ್ನು ಸಂಪರ್ಕಿಸಿದ ವಿದ್ಯಾರ್ಥಿನಿ ದೂರು ನೀಡಿದ್ದರು. ಶಿಕ್ಷಕನ ವಿರುದ್ಧ ಭಾರತೀಯ ನ್ಯಾಯ ಸಂಹಿತೆ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಲೈಂಗಿಕ ಕಿರುಕುಳ ಮತ್ತು ಇತರ ಆರೋಪಗಳನ್ನು ದಾಖಲಿಸಲಾಗಿದೆ.