Monday, April 7, 2025
Homeರಾಜ್ಯವಿದ್ಯಾರ್ಥಿಗಳಿಂದ ಶಾಲೆಯ ಶೌಚಾಲಯ ಸ್ವಚ್ಛಗೊಳಿಸದಂತೆ ಶಿಕ್ಷಕರಿಗೆ ಎಚ್ಚರಿಕೆ

ವಿದ್ಯಾರ್ಥಿಗಳಿಂದ ಶಾಲೆಯ ಶೌಚಾಲಯ ಸ್ವಚ್ಛಗೊಳಿಸದಂತೆ ಶಿಕ್ಷಕರಿಗೆ ಎಚ್ಚರಿಕೆ

Teachers warned not to let students clean school toilets

ಬೆಂಗಳೂರು,ಏ.7- ಶಾಲೆಯ ಶೌಚಾಲಯ ಸ್ವಚ್ಛಗೊಳಿಸುವ ಕಾರ್ಯದಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಂಡಿರುವುದು ಕಂಡು ಬಂದರೆ ಅಂತಹ ಶಿಕ್ಷಕರ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳುವುದಾಗಿ ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯು ಎಲ್ಲಾ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಎಚ್ಚರಿಕೆ ನೀಡಿದೆ.

ಈ ಕುರಿತು ಶಿಕ್ಷಣ ಇಲಾಖೆಯೂ ಅಧಿಕೃತ ಅಧಿಸೂಚನೆ ಹೊರಡಿಸಿದ್ದು, ಎಲ್ಲಾ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಶೌಚಾಲಯ ಸ್ವಚ್ಛಗೊಳಿಸುವ ಕಾರ್ಯದಲ್ಲಿ ವಿದ್ಯಾರ್ಥಿಗಳನ್ನು ಬಳಕೆ ಮಾಡಿಕೊಳ್ಳಬೇಡಿ ಎಂದು ನಿರ್ದೇಶನ ನೀಡಿದೆ.

ನಿಯಮ ಉಲ್ಲಂಘಿಸಿದರೆ ಇದಕ್ಕೆ ಕಾರಣರಾದ ಸಿಬ್ಬಂದಿ ವಿರುದ್ಧ ಎಫ್‌ಐಆರ್‌ ದಾಖಲಿಸುವುದು ಸೇರಿದಂತೆ ಶಿಸ್ತು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಇಲಾಖೆ ತಿಳಿಸಿದೆ. ಬೇಗೂರು ಪೊಲೀಸ್‌‍ ವ್ಯಾಪ್ತಿಯಲ್ಲಿರುವ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳನ್ನು ಶೌಚಾಲಯ ಸ್ವಚ್ಛಗೊಳಿಸುವಂತೆ ಒತ್ತಾಯಿಸಿದ ಘಟನೆಯ ನಂತರ ಈ ಸುತ್ತೋಲೆ ಹೊರಡಿಸಲಾಗಿದೆ.

ಮಕ್ಕಳ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆದ ನಂತರ ಈ ವಿಷಯ ಬೆಳಕಿಗೆ ಬಂದಿದೆ. ಸಾಮಾಜಿಕ ಕಾರ್ಯಕರ್ತ ನಾಗೇಶ್‌ ದೂರು ದಾಖಲಿಸಿದ ನಂತರ ಮಾ.29 ರಂದು ಶಾಲಾ ಮುಖ್ಯೋಪಾಧ್ಯಾಯಿನಿ ಮತ್ತು ದೈಹಿಕ ಶಿಕ್ಷಣ ಶಿಕ್ಷಕರ ವಿರುದ್ಧ ಬಾಲ ನ್ಯಾಯ ಕಾಯ್ದೆಯಡಿ ಪೊಲೀಸ್‌‍ ಪ್ರಕರಣ ದಾಖಲಿಸಲಾಗಿದೆ.

2023ರಲ್ಲಿ ಶಾಲೆಗಳಿಗೆ ಮಕ್ಕಳನ್ನು ಶೌಚಾಲಯ ಸ್ವಚ್ಛಗೊಳಿಸಿದ ಬಳಕೆ ಮಾಡಿಕೊಳ್ಳದಂತೆ ಸೂಚಿಸಿ ಸುತ್ತೋಲೆ ಹೊರಡಿಸಿದ್ದರೂ, ಕೆಲವು ಶಾಲೆಗಳು ಆದೇಶವನ್ನು ಉಲ್ಲಂಘಿಸುತ್ತಲೇ ಇವೆ ಎಂದು ಇಲಾಖೆ ಗಮನಿಸಿದೆ.

ಪ್ರಕರಣದ ಹಿನ್ನಲೆ :
ಶಾಲಾ ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸಲು ಆರೋಪದ ಮೇಲೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಇಬ್ಬರು ಶಿಕ್ಷಕರನ್ನು ಅಮಾನತುಗೊಳಿಸಲಾಗಿತ್ತು. ಬೇಗೂರು ಪೊಲೀಸ್‌‍ ಠಾಣೆ ವ್ಯಾಪ್ತಿಯ ಶಾಲೆಯಲ್ಲಿ ಜನವರಿಯಲ್ಲಿ ಘಟನೆ ನಡೆದಿತ್ತು. ವಿದ್ಯಾರ್ಥಿಗಳು ಶಾಲೆಯ ಶೌಚಾಲಯ ಸ್ವಚ್ಛಗೊಳಿಸುತ್ತಿರುವ ವಿಡಿಯೋ ವೈರಲ್‌ ಆಗಿತ್ತು.

ಸಾಮಾಜಿಕ ಕಾರ್ಯಕರ್ತ ನಾಗೇಶ್‌ ಅವರು ನೀಡಿದ ದೂರಿನ ಆಧಾರದ ಮೇಲೆ, ಮಾ.29 ರಂದು ಶಾಲಾ ಮುಖ್ಯೋಪಾಧ್ಯಾಯಿನಿ ಸಾಕಮ ಮತ್ತು ದೈಹಿಕ ಶಿಕ್ಷಣ ಶಿಕ್ಷಕಿ ಸುಮಿತ್ರಮ ವಿರುದ್ಧ ಬಾಲ ನ್ಯಾಯ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಪ್ರಾದೇಶಿಕ ಸುದ್ದಿವಾಹಿನಿಯಲ್ಲಿ ಸುದ್ದಿ ಪ್ರಸಾರವಾಗಿತ್ತು. ಬಳಿಕ ಘಟನೆಯ ಬಗ್ಗೆ ನಾಗೇಶ್‌ ಅವರು ಪೊಲೀಸರಿಗೆ ದೂರು ನೀಡಿದ್ದರು. ಫೆಬ್ರವರಿ ಅಂತ್ಯದಲ್ಲಿ ಇಬ್ಬರು ಶಿಕ್ಷಕರನ್ನು ಅಮಾನತುಗೊಳಿಸಲಾಗಿದೆ ಮತ್ತು ಶಿಕ್ಷಣ ಇಲಾಖೆ ಆಂತರಿಕ ವಿಚಾರಣೆ ನಡೆಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

RELATED ARTICLES

Latest News