ಕೊಡಗು,ಮಾ.21- ಕಾವೇರಿ ನದಿ ಮಲಿನತೆ ಹಾಗೂ ನದಿ ಪಾತ್ರಗಳ ಒತ್ತುವರಿ ತಡೆಯಲು ತಂಡ ರಚನೆ ಮಾಡಲು ಕ್ರಮ ವಹಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಸುದ್ದಿಗಾರರು ಕಾವೇರಿ ನದಿ ಮಲೀನತೆ ಹಾಗೂ ಒತ್ತುವರಿ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ನೆಲ,ಜಲ, ಇತಿಹಾಸ, ಪರಂಪರೆ ಉಳಿಸಲು ಏನು ಬೇಕೋ ಅದೆಲ್ಲವನ್ನು ನಾವು ಮಾಡುತ್ತೇವೆ. ನಿಮ್ಮ ಸಲಹೆ ಇದ್ದರೂ ಸ್ವೀಕರಿಸುತ್ತೇವೆ ಎಂದರು.
ವಿಶ್ವ ಜಲದಿನದ ಅಂಗವಾಗಿ ಒಂದು ಒಂದು ವಾರಗಳ ಕಾಲ ಜಲ ಸಂರಕ್ಷಣೆ ಅಭಿಯಾನ ನಡೆಯಲಿದೆ. ನೀರಿನ ದುರ್ಬಳಕೆ ತಡೆಗಟ್ಟಿ, ಸದ್ಬಳಕೆ ಮಾಡುವಂತೆ ಜಾಗೃತಿ ಮೂಡಿಸುವುದೇ ಕಾವೇರಿ ಆರತಿ ಉದ್ದೇಶ. ಕಳೆದ ವರ್ಷ ಉತ್ತಮ ಮಳೆಯಾದಂತೆ ಈ ವರ್ಷವೂ ಉತ್ತಮವಾಗಿ ಮಳೆಯಾಗಿ ಜನರ ಬದುಕು ಹಸನಾಗಲಿ ಎಂದು ತಲಕಾವೇರಿಯಲ್ಲಿ ಪೂಜೆ ಸಲ್ಲಿಸುತ್ತಿದ್ದೇನೆ ಎಂದರು.
ನದಿ ತೀರದಲ್ಲಿ ಕಾವೇರಿ ಆರತಿ ಆಯೋಜಿಸಲು ಈಗಾಗಲೇ ಹಣ ಮೀಸಲಿಡಲಾಗಿದೆ. ಎಷ್ಟು ದಿನಗಳಿಗೆ ಒಮ್ಮೆ ಆರತಿ ಮಾಡಬೇಕು ಎಂಬ ತೀರ್ಮಾನವನ್ನು ಮುಂದೆ ತಿಳಿಸಲಾಗುವುದು. ಆರತಿ ವೇಳೆ ಕೊಡಗಿನ ಕಲಾವಿದರೂ ಭಾಗವಹಿಸುವಂತೆ ನೋಡಿಕೊಳ್ಳಬೇಕು ಎಂದು ಮುಜರಾಯಿ, ನೀರಾವರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸೂಚಿಸಿರುವುದಾಗಿ ತಿಳಿಸಿದರು.
ಅಭಿಯಾನದಲ್ಲಿ ನೀರನ್ನು ದುರ್ಬಳಕೆ ಮಾಡುವುದಿಲ್ಲ, ಸುಖಾಸುಮ್ಮನೆ ಖರ್ಚು ಮಾಡುವುದಿಲ್ಲ ಎಂದು ಜನರಿಗೆ ಅರಿವು ಮೂಡಿಸಲಾಗುವುದು ಹಾಗೂ ಪ್ರತಿಜ್ಞಾವಿಧಿ ಬೋಧಿಸಲಾಗುವುದು. ಇದಕ್ಕೆ ಸ್ಯಾಂಕಿ ಕೆರೆಯಲ್ಲಿ ಕಾವೇರಿ ಆರತಿಯನ್ನು ಆಯೋಜಿಸಲಾಗಿದೆ. ಜನರು ಆನ್‌ಲೈನ್ ಮೂಲಕವೂ ನೀರನ್ನು ಉಳಿಸುತ್ತೇನೆ ಎಂದು ಪ್ರತಿಜ್ಞೆ ತೆಗೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಬಹುದು ಎಂದರು.
ಬೆಂಗಳೂರಿಗೆ ಕಾವೇರಿ ಕುಡಿಯುವ ನೀರಿನ 5ನೇ ಹಂತವೂ ಈಗ ಕಾರ್ಯರೂಪಕ್ಕೆ ಬಂದಿದೆ. ಇದೆಲ್ಲವೂ ಸಾಧ್ಯವಾಗಿರುವುದು ಕಾವೇರಿ ನದಿಯಿಂದ. ಕೆಆರ್‌ಎಸ್ ಬಾಗಿನ ಸಮರ್ಪಣೆ ವೇಳೆ ಕಾವೇರಿ ಆರತಿ ಮಾಡುವುದಾಗಿ ನಾನು ಮಾತು ಕೊಟ್ಟಿದ್ದೆ ಅದಕ್ಕೂ ಸಿದ್ದತೆಗಳು ನಡೆಯುತ್ತಿದೆ ಎಂದರು.
ಕೊಡಗು ಇಡೀ ರಾಜ್ಯಕ್ಕೆ, ತಮಿಳುನಾಡಿಗೆ ಆಶ್ರಯ. ದಕ್ಷಿಣ ಭಾರತದ ಜೀವನದಿ. ಆದ ಕಾರಣ ಮೊದಲ ಪೂಜೆ ತಲಕಾವೇರಿಯಲ್ಲಿ ಸಲ್ಲಬೇಕು. ಆದ್ದರಿಂದ ಇಲ್ಲಿಂದ ನೀರನ್ನು ತೆಗೆದುಕೊಂಡು ಹೋಗಿ ಕಾವೇರಿ ಆರತಿ ಮಾಡಲಾಗುತ್ತಿದೆ ಎಂದು ತಿಳಿಸಿದರು.
ನಾಳೆ ತಮಿಳುನಾಡಿಗೆ ಡಿಸಿಎಂ :
ಸಂಸತ್ ಕ್ಷೇತ್ರಗಳ ಪುನರ್ ವಿಂಗಡಣೆ ವಿರೋಧಿಸಿ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರು ನಾಳೆ ಕರೆದಿರುವ ಸಭೆಯಲ್ಲಿ ನಾನು ಹಾಗೂ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಭಾಗವಹಿಸುತ್ತಿದ್ದೇವೆ ಎಂದು ಇದೇ ಸಂದರ್ಭದಲ್ಲಿ ಅವರು ತಿಳಿಸಿದರು.