ನವದೆಹಲಿ, ಮಾ. 20- ಬಲಿಷ್ಠ ನ್ಯೂಜಿಲೆಂಡ್ ತಂಡವನ್ನು ಮಣಿಸಿ ಚಾಂಪಿಯನ್ಸ್ ಟ್ರೋಫಿ ಮುಕುಟವನ್ನು ಗೆದ್ದು ಸಂಭ್ರಮಿಸಿದ್ದ ಭಾರತದ ಆಟಗಾರರ ಸಾಧನೆ ಪ್ರೋತ್ಸಾಹಿಸುವ ಸಲುವಾಗಿ ಬಿಸಿಸಿಐ 58 ಕೋಟಿ ನಗದು ಬಹುಮಾನವನ್ನು ಬಿಸಿಸಿಐ ಘೋಷಿಸಿದೆ.
ಮಾರ್ಚ್ 9 ರಂದು ದುಬೈನಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ವಿಚೆಲ್ ಸ್ಟಾಂಟರ್ ಸಾರಥ್ಯದ ತಂಡವನ್ನು 4 ವಿಕೆಟ್ ಗಳಿಂದ ಮಣಿಸಿದ ರೋಹಿತ್ ಶರ್ಮಾ ಪಡೆ 2002 ಮತ್ತು 2013ರ ನಂತರ ಮೂರನೇ ಬಾರಿ ಚಾಂಪಿಯನ್ಸ್ ಟ್ರೋಫಿ ಗೆದ್ದು ಸಂಭ್ರಮಿಸಿತು.
ರೋಜರ್ ಬಿನ್ನಿ ಹರ್ಷ:
ಐಸಿಸಿ ಟೂರ್ನಿಯಲ್ಲಿ ಭಾರತ ತಂಡದ ಆಟಗಾರರು ಬ್ಯಾಕ್ ಟು ಬ್ಯಾಕ್ ಚಾಂಪಿಯನ್ ಪಟ್ಟ ಗೆದ್ದು ತಮ್ಮ ಸಾಮರ್ಥ್ಯ ತೋರಿಸಿದ್ದಾರೆ. ಟ್ರೋಫಿ ಗೆದ್ದಿರುವುದು ಆಟಗಾರರು ವಿಶ್ವ ಕ್ರಿಕೆಟ್ ನಲ್ಲಿ ತಾವು ಹೊಂದಿರುವ ಬದ್ಧತೆ ಹಾಗೂ ಸಾಮರ್ಥ್ಯವನ್ನು ತೋರಿಸುತ್ತದೆ.
ಅವರ ಕಠಿಣ ಶ್ರಮವನ್ನು ಪ್ರೋತ್ಸಾಹಿಸುವ ಸಲುವಾಗಿ ನಾವು ಅವರಿಗೆ ದೊಡ್ಡ ಮೊತ್ತದ ನಗದು ಬಹುಮಾನವನ್ನು ಘೋಷಿಸಲು ಹರ್ಷಿಸುತ್ತೇವೆ. 2025ರಲ್ಲಿ ಭಾರತ ತಂಡವು ಜಯಿಸುತ್ತಿರುವ ಎರಡನೇ ಐಸಿಸಿ ಟ್ರೋಫಿಯಾಗಿದೆ. ಇದಕ್ಕೂ ಮುನ್ನ ಅಂಡರ್ 19 ಮಹಿಳಾ ತಂಡವು ವಿಶ್ವಕಪ್ ಮುಕುಟವನ್ನು ಗೆದ್ದು ದೇಶದ ಕೀರ್ತಿ ಹೆಚ್ಚಿಸಿದೆ’ ಎಂದು ಬಿನ್ನಿ ಹೇಳಿದ್ದಾರೆ.
ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ನೀಡಿದ 252 ರನ್ ಗುರಿ ಬೆನ್ನಟ್ಟಿದ್ದ ಭಾರತ ತಂಡ ನಾಯಕ ರೋಹಿತ್ ಶರ್ಮಾ ಅರ್ಧಶತಕ (76 ರನ್) ನೆರವಿನಿಂದ 49 ಓವರ್‌ಗಳಲ್ಲಿ 254/6 ಗೆಲುವು ಸಾಧಿಸಿತ್ತು.