ನವದೆಹಲಿ,ಜು.4- ಸುಮಾರು 17 ವರ್ಷಗಳ ನಂತರ ವೆಸ್ಟ್ ಇಂಡೀಸ್‌ನ ಬಾರ್ಬೋಡಸ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ 20-20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಗೆದ್ದು ವಿಶ್ವ ಚಾಂಪಿಯನ್ ಆಗಿ ಹೊರಹೊಮಿದ ಟೀಂ ಇಂಡಿಯಾದ ಆಟಗಾರರು ಇಂದು ತಾಯ್ನಾಡಿಗೆ ಆಗಮಿಸಿದರು.
ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮುಂಜಾನೆ ವಿಶೇಷ ವಿಮಾನದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮ ನೇತೃತ್ವದ ತಂಡ ಆಗಮಿಸುತ್ತಿದ್ದಂತೆ ಎಲ್ಲೆಲ್ಲೂ ಜಯಕಾರದ ಘೋಷಣೆಗಳು ಮೊಳಗಿದವು.ಮುಂಜಾನೆಯಿಂದಲೇ ವಿಮಾನ ನಿಲ್ದಾಣದ ಹೊರಭಾಗದಲ್ಲಿ ಜಮಾಯಿಸಿದ್ದ ಭಾರೀ ಸಂಖ್ಯೆಯ ಅಭಿಮಾನಿಗಳು ಟೀಂ ಇಂಡಿಯಾ ಪರ ಜೈಕಾರದ ಘೋಷಣೆಗಳನ್ನು ಕೂಗಿ ರಾಷ್ಟ್ರ ಧ್ವಜ ಹಿಡಿದು ಅಭಿಮಾನವನ್ನು ಮೆರೆದರು.
ದೆಹಲಿಯಲ್ಲಿ ಬೆಳಗಿನಿಂದಲೇ ಸುರಿಯುತ್ತಿದ್ದ ತುಂತುರು ಮಳೆಯನ್ನು ಲೆಕ್ಕಿಸದೆ ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ಈ ವೇಳೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಬೂಮ್ರ ಹಾರ್ದಿಕ್ ಪಾಂಡೆ, ರವೀಂದ್ರ ಜಡೇಜ ಸೇರಿದಂತೆ ಬಹುತೇಕ ಎಲ್ಲ ಆಟಗಾರರು ಅಭಿಮಾನಿಗಳ ಜೊತೆ ಕುಣಿದು ಕುಪ್ಪಳಿಸಿದರು.ಇದೀಗ ಭಾರತದ ಆಟಗಾರರು ದೆಹಲಿಯ ಐಟಿಸಿ ಮೌರ್ಯ ಹೋಟೆಲ್ ತಲುಪಿದ್ದಾರೆ. ಇಂದು ಎಲ್ಲಾ ಆಟಗಾರರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದರು.
ಸಂಜೆ ರೋಡ್ ಶೋ:
ಸಂಜೆ 5.30ಕ್ಕೆ ಮುಂಬೈನ ನಾರಿಮನ್ ಪಾಯಿಂಟ್‌ನಿಂದ ವಾಂಖೆಡೆ ಕ್ರೀಡಾಂಗಣದ ವರೆಗೆ ತೆರೆದ ವಾಹನದಲ್ಲಿ ವಿಶ್ವಕಪ್ ರೋಡ್ ಶೋ ನಡೆಯಲಿದೆ. ಇದರಲ್ಲಿ ನಾಯಕ ರೋಹಿತ್ ಶರ್ಮಾ ಸೇರಿದಂತೆ ಎಲ್ಲಾ ಆಟಗಾರರು ಭಾಗಿಯಾಗಲಿದ್ದಾರೆ. ಬಳಿಕ ಅಲ್ಲಿಂದ ತಮ ನಿವಾಸಕ್ಕೆ ಆಟಗಾರರು ಹಿಂತಿರುಗಲಿದ್ದಾರೆ.
ಕಳೆದ ನಾಲ್ಕು ದಿನಗಳಿಂದ ವೆಸ್ಟ್‌ಇಂಡೀಸ್‌ನ ಬಾರ್ಬೋಡಸ್‌ನಲ್ಲಿ ಭೀಕರ ಚಂಡಮಾರುತ ಅಪ್ಪಳಿಸಿದ ಹಿನ್ನಲೆಯಲ್ಲಿ ಟೀಂ ಇಂಡಿಯಾ ಆಟಗಾರರು ಸ್ವದೇಶಕ್ಕೆ ಮರಳಲು ವಿಳಂಬವಾಗಿತ್ತು. ಬಾರ್ಬೋಡಸ್‌ನಿಂದ ಅಮೆರಿಕಾಕ್ಕೆ ಆಗಮಿಸಿ, ಅಲ್ಲಿಂದ ದುಬೈಗೆ ಬಂದು ವಿಶೇಷ ವಿಮಾನದಲ್ಲಿ ದೆಹಲಿಗೆ ಆಗಮಿಸಿದರು.
ಪ್ರತಿಯೊಬ್ಬ ಆಟಗಾರರು ಕೊರಳಲ್ಲಿ ಪದಕವನ್ನು ಧರಿಸಿದ್ದರೆ, ರೋಹಿತ್ ಶರ್ಮಾ ಟ್ರೋಫಿಯನ್ನು ಎತ್ತಿ ಹಿಡಿದಿದ್ದರು. ಟಿ-20 ವಿಶ್ವಕಪ್ ಪಂದ್ಯದ ಗೆದ್ದು ವಿಶ್ವ ಚಾಂಪಿಯನ್ ಆಗಿರುವ ಭಾರತ ತಂಡಕ್ಕೆ ಬಿಸಿಸಿಐ 125 ಕೋಟಿ ಬಹುಮಾನವನ್ನು ಘೋಷಣೆ ಮಾಡಿದೆ.
ಅಮೆರಿಕ ಮತ್ತು ವೆಸ್ಟ್‌ಇಂಡೀಸ್ ಜಂಟಿಯಾಗಿ ಆಯೋಜಿಸಿದ್ದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ತಂಡ ಸೋಲಿಲ್ಲದೇ ಫೈನಲ್ ಪ್ರವೇಶಿಸಿತ್ತು.
ಫೈನಲ್‌ನಲ್ಲೂ ಭರ್ಜರಿ ಪ್ರದರ್ಶನ ತೋರಿದ್ದ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು ಮಣಿಸಿ ಕಪ್ ಗೆದ್ದುಕೊಂಡಿದೆ.ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಮ ನಿವಾಸದಲ್ಲಿ ವಿಶ್ವಚಾಂಪಿಯನ್‌ರಿಗೆ ಔತಣಕೂಟ ಏರ್ಪಡಿಸಿದ್ದರು.