ಮಳವಳ್ಳಿ,ಏ.25-ಬಹು ಕೋಟಿ ಚಿನ್ನದ ಒಡವೆಗಳ ವಂಚನೆ ಆರೋಪದ ಮೇಲೆ ವಿವಿಧ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿ ವಿಚಾರಣೆ ಎದುರಿಸುತ್ತಿರುವ ತಾಲೂಕಿನ ಕಿರುಗಾವಲು ಗ್ರಾಮದ ಐಶ್ವರ್ಯಗೌಡ ಮನೆ ಮೇಲೆ ಇಡಿ ಅಧಿಕಾರಿಗಳ ತಂಡ ದಾಳಿ ನಡೆಸಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ನಿನ್ನೆ ಬೆಳಗ್ಗೆ ಸುಮಾರು 9 ಗಂಟೆ ಸಮಯದಲ್ಲಿ ಮೂರು ಕಾರುಗಳಲ್ಲಿ ಕಿರುಗಾವಲು ಗ್ರಾಮಕ್ಕೆ ಆಗಮಿಸಿದ ಇಡಿ ಅಧಿಕಾರಿಗಳ ತಂಡ, ಆಕೆಯ ತವರು ಮನೆ ಸೇರಿದಂತೆ ಗ್ರಾಮದ ವಿವಿಧ ಬ್ಯಾಂಕ್‌ಗಳಲ್ಲಿರುವ ಐಶ್ವರ್ಯ ಬ್ಯಾಂಕ್ ಖಾತೆಗಳ ಪರಿಶೀಲನೆ ನಡೆಸಿದರು.
ಸಿಆರ್‌ಪಿಎಫ್ ನ ಇಬ್ಬರು ಮಹಿಳಾ ಸಿಬ್ಬಂದಿ ಸೇರಿ ನಾಲ್ವರು ಸಿಬ್ಬಂದಿಗಳ ಜತೆ ಸುಮಾರು 12 ಅಧಿಕಾರಿಗಳ ತಂಡ ಮೊದಲಿಗೆ ಐಶ್ವರ್ಯಗೌಡ ತಾಯಿ ಮನೆಯ ಮೇಲೆ ದಾಳಿ ನಡೆಸಿದರು. ಮನೆಯಲ್ಲಿದ್ದ ಆಕೆಯ ತಾಯಿ, ಸೋದರ ಹಾಗೂ ಸೋದರನ ಪತ್ನಿಯ ಬಳಿ ಇದ್ದ ಮೊಬೈಲ್ ಫೋನ್ ಪಡೆದುಕೊಂಡು ತನಿಖೆಗೆ ಸಹಕರಿಸಲು ಸೂಚಿಸಿದರು.
ನಂತರ ಮನೆಯ ಮೂಲೆ- ಮೂಲೆಯನ್ನು ಜಾಲಾಡುವ ಮೂಲಕ ಅಲ್ಲಿ ಸಿಕ್ಕಂತಹ ದಾಖಲೆಗಳನ್ನು ವಶಕ್ಕೆ ಪಡೆದರು. ಮಧ್ಯಾಹ್ನದ ವೇಳೆಗೆ ಒಂದು ತಂಡ ಕಾರೊಂದರಲ್ಲಿ ಬೇರೆಡೆಗೆ ತೆರಳಿದರೆ, ಉಳಿದವರಲ್ಲಿ ಮೂವರು ಅಧಿಕಾರಿಗಳು ಗ್ರಾಮದಲ್ಲಿನ ಕಾವೇರಿ ಗ್ರಾಮೀಣ ಬ್ಯಾಂಕ್ ಹಾಗೂ ಇತರೆ ಬ್ಯಾಂಕ್‌ಗಳಿಗೆ ತೆರಳಿ ಐಶ್ವರ್ಯಗೌಡ ಹಾಗೂ ಆಕೆಯ ಕುಟುಂಬದವರ ಹೆಸರಿನಲ್ಲಿದ್ದ ಖಾತೆಗಳಲ್ಲಿ ನಡೆದಿರುವ ಹಣಕಾಸು ವಹಿವಾಟಿನ ಮಾಹಿತಿ ಪಡೆದುಕೊಂಡರು.
ಮತ್ತೊಂದು ತಂಡ ಸಂಜೆ ನಾಲ್ಕು ಗಂಟೆಯ ವರೆಗೂ ಕಿರುಗಾವಲು ಗ್ರಾಮದ ಐಶ್ವರ್ಯ ಗೌಡ ತವರು ಮನೆಯನ್ನು ಇಂಚಿಂಚು ತಲಾಷ್ ಮಾಡಿ ಕೆಲವು ಕಡತಗಳನ್ನು ವಶಕ್ಕೆ ಪಡೆದು ತೆರಳಿದರು ಎಂದು ಹೇಳಲಾಗಿದೆ.
ಇಡಿ ಅಧಿಕಾರಿಗಳನ್ನು ಕರೆತಂದಿದ್ದ, ಕಾರು ಚಾಲಕನೊಬ್ಬ ನೀಡಿದ ಮಾಹಿತಿ ಪ್ರಕಾರ ಬೆಂಗಳೂರಿನ ಟ್ರಾವಲ್ಸ್‌ನಲ್ಲಿ 25 ಇನೋವ ಕಾರುಗಳನ್ನು ಇಡಿ ಅಧಿಕಾರಿಗಳು ಬಾಡಿಗೆಗೆ ಪಡೆದಿದ್ದು, ಮೂರು ಕಾರುಗಳಲ್ಲಿ ಕಿರುಗಾವಲು ಗ್ರಾಮಕ್ಕೆ ಬಂದೆವು. ಉಳಿದ ಕಾರುಗಳು ಯಾವ ಕಡೆಗೆ ಹೋದವೆಂದು ತಿಳಿಯದು ಎಂದು ಚಾಲಕನೊಬ್ಬ ಈ ಸಂಜೆ ಪತ್ರಿಕೆಗೆ ತಿಳಿಸಿದ್ದಾರೆ. 9 ಕೋಟಿ ರೂ. ಬೆಲೆ ಬಾಳುವ ಚಿನ್ನದ ಒಡವೆಗಳ ವಂಚನೆ ಆರೋಪ ಹೊತ್ತಿರುವ ಐಶ್ವರ್ಯಗೌಡ ವಿರುದ್ಧ ಬೆಂಗಳೂರು, ಮಂಡ್ಯ ಸೇರಿದಂತೆ ರಾಜ್ಯದ ವಿವಿಧೆಡೆ ಗಳ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.
ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ್ದ ಈಕೆ ಸ್ವಗ್ರಾಮದ ಹರೀಶ್ ಎಂಬುವರಿಗೆ ವಿವಾಹವಾಗಿದ್ದರು. ಈಕೆಯ ಪತಿ ಮೈಸೂರಿನ ಖಾಸಗಿ ಕಂಪನಿ ಉದ್ಯೋಗಿಯಾಗಿದ್ದರು. ಮಂಡ್ಯ, ಮೈಸೂರು, ಚನ್ನಪಟ್ಟಣದಲ್ಲಿ ಸಾಮಾನ್ಯ ವರ್ಗದವರಿಗೆ ವಿವಿಧ ಆಮೀಷವೊಡ್ಡಿ ವಂಚನೆ ಮಾಡಿದ್ದಾಳೆ ಎಂಬ ಆರೋಪ ಕೇಳಿಬಂದಿದೆ.
ಆ ನಂತರ ಬೆಂಗಳೂರಿನ ಪ್ರತಿಷ್ಟಿತ ರಾಜರಾಜೇಶ್ವರಿ ನಗರ ಬಡಾವಣೆಯಲ್ಲಿ ಐಶಾರಾಮಿ ಬಂಗಲೆ, ಕೋಟಿ ರೂ. ಬೆಲೆ ಬಾಳುವ ಕಾರುಗಳು ಹಾಗೂ ಬಾಡಿಗಾರ್ಡ್‌ಗಳನ್ನು ಇರಿಸಿಕೊಂಡು ಐಷಾರಾಮಿ ಜೀವನ ನಡೆಸುತ್ತಿದ್ದಳು ಎನ್ನಲಾಗಿದೆ.
ಪ್ರಕರಣದ ತನಿಖೆ ಕೈಗೊಂಡಿರುವ ಪೊಲೀಸರಿಗೆ ಈಕೆಗೆ ಹಲವು ರಾಜಕೀಯ ವ್ಯಕ್ತಿಗಳ ಒಡನಾಟ ಹಾಗೂ ಐಷಾರಾಮಿ ಜೀವನ ಶೈಲಿಯನ್ನು ಕಂಡು ನಿಬ್ಬೆರಗಾಗಿದ್ದರು. ಈಕೆಯ ಹಣಕಾಸಿನ ವಹಿವಾಟಿನ ಮೇಲೆ ನಿಗಾ ಇರಿಸಿದ್ದ ಆರ್ಥಿಕ ಗುಪ್ತಚರ ಸಂಸ್ಥೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಿಢೀರ್ ದಾಳಿ ನಡೆಸುವ ಮೂಲಕ ಈಕೆಯ ಜಾತಕ ಜಾಲಾಡುತ್ತಿದ್ದಾರೆ.