ಬೆಂಗಳೂರು, ಮೇ 14- ಆಪರೇಷನ್ ಸಿಂಧೂರ್ ಯಶಸ್ಸಿನ ಸಂಭ್ರಮಾಚರಣೆ ವೇಳೆ ಕಟ್ಟಡವೊಂದರ ಬಾಲ್ಕನಿಯಲ್ಲಿ ನಿಂತುಕೊಂಡು ಪಾಕಿಸ್ತಾನ ಪರ ಘೋಷಣೆ ಕೂಗಿದ ಸಾಫ್ಟ್ ವೇರ್ ಎಂಜಿನಿಯರ್‌ನೊಬ್ಬನನ್ನು ವೈಟ್‌ಫೀಲ್ಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪ್ರಶಾಂತ್ ಲೇಔಟ್‌ನ ಪಿಜಿವೊಂದರಲ್ಲಿ ನೆಲೆಸಿದ್ದ ಛತ್ತೀಸ್‌ಗಡ ಮೂಲದ ಶುಭಾಂಶು ಶುಕ್ಲಾ (25) ಬಂಧಿತ ಟೆಕ್ಕಿ.
ಈ ಪಿಜಿಯ ಕೊಠಡಿಯೊಂದರಲ್ಲಿ ಶುಭಾಂಶು ಶುಕ್ಲಾ ತನ್ನ ಸ್ನೇಹಿತನ ಜೊತೆ ವಾಸವಾಗಿದ್ದು, ನಗರದ ಐಟಿ ಕಂಪನಿವೊಂದರಲ್ಲಿ ಸಾಫ್‌್ಟ ವೇರ್ ಎಂಜಿನಿಯರ್. ಮೇ 9 ರಂದು ಮಧ್ಯರಾತ್ರಿ 12.30 ರ ಸುಮಾರಿನಲ್ಲಿ ಪಿಜಿಯಲ್ಲಿದ್ದ ಹಲವು ಯುವಕರು ಸೇರಿಕೊಂಡು ಆಪರೇಷನ್ ಸಿಂಧೂರ್ ಯಶಸ್ಸಿನ ಸಂಭ್ರಮಾಚರಣೆ ಮಾಡುತ್ತಿದ್ದ ವೇಳೆ ಬಾಲ್ಕನಿಯಲ್ಲಿ ನಿಂತು ಶುಕ್ಲಾ ಹಾಗೂ ಈತನ ಸ್ನೇಹಿತ ನೋಡುತ್ತಿದ್ದರು.
ಆ ಸಂದರ್ಭದಲ್ಲಿ ಬಾಲ್ಕನಿಯಿಂದ ಪಾಕಿಸ್ತಾನ ಪರ ಘೋಷಣೆ ಕೇಳಿಸಿದೆ. ತಕ್ಷಣ ಸಂಭ್ರಮಾಚರಣೆಯಲ್ಲಿದ್ದ ಯುವಕರು ಉಗ್ರರು ಇಲ್ಲಿಗೂ ಬಂದಿದ್ದಾರೆಯೇ ಎಂದು ಒಂದು ಕ್ಷಣ ಗಾಬರಿಗೊಂಡು ಹೊರಗೆ ಬಂದು ನೋಡಿದಾಗ ಬಾಲ್ಕನಿಯಲ್ಲಿ ಇಬ್ಬರು ನಿಂತುಕೊಂಡು ಪಾಕಿಸ್ತಾನ ಪರ ಘೋಷಣೆ ಕೂಗುತ್ತಿದ್ದದ್ದು ಕಂಡು ಬಂದಿದೆ.ತಕ್ಷಣ ಕಂಟ್ರೋಲ್ ರೂಂಗೆ ಕರೆ ಮಾಡಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಈ ಇಬ್ಬರು ಯುವಕರು ಬಾಲ್ಕನಿಯಲ್ಲಿ ನಿಂತಿದ್ದ ದೃಶ್ಯವನ್ನು ಎದುರಿನ ಪಿಜಿಯ ಯುವಕನೊಬ್ಬ ತನ್ನ ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡಿದ್ದಾನೆ.ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಾಲ್ಕನಿಯಲ್ಲಿ ನಿಂತುಕೊಂಡಿದ್ದ ಇಬ್ಬರನ್ನು ವಶಕ್ಕೆ ಪಡೆದು ಯಾರು ಘೋಷಣೆ ಕೂಗಿದರು ಎಂಬುದರ ಬಗ್ಗೆ ವಿಚಾರಣೆ ನಡೆಸಿದಾಗ ಶುಭಾಂಶು ಎಂಬುದು ಗೊತ್ತಾಗಿದೆ. ನಂತರ ಆತನನ್ನು ಬಂಧಿಸಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.