ಬೆಂಗಳೂರು,ಸೆ.13- ಕರ್ನಾಕಟದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಸಂದರ್ಭದಲ್ಲೆಲ್ಲಾ ಟಿಪ್ಪು ಸಂತತಿಯಂತಿರುವ ಕೆಲವು ಮತೀಯ ಶಕ್ತಿಗಳು ರಾತ್ರೋರಾತ್ರಿ ಎದ್ದು ಹಿಂದೂಗಳ ಮೇಲೆ ದೌರ್ಜನ್ಯ ಹಾಗೂ ಹಲ್ಲೆ ನಡೆಸುತ್ತಾರೆ ಎಂಬುದು ಸಂಸದ ತೇಜಸ್ವಿ ಸೂರ್ಯ ಗಂಭೀರ ಆರೋಪ ಮಾಡಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಮಾಜಿ ಸದಸ್ಯ ಉಮೇಶ್ ಶೆಟ್ಟಿ ಅವರ ಜೊತೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಗಣಪತಿ ವಿಸರ್ಜನೆ ವೇಳೆ ಏನು ನಡೆದಿದೆ ಎಂಬುದು ಕರ್ನಾಟಕದ ಜನತೆಗೆ ಗೊತ್ತಿದೆ. ನಮ ಗಣಪತಿಯನ್ನು ವಿಸರ್ಜನೆ ಮಾಡುವಾಗ ಕೋಮುಗಲಭೆ ಅತ್ಯಂತ ದುರದೃಷ್ಟಕರ ಎಂದು ವಿಷಾದಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಸುಮನಿರುತ್ತಿದ್ದ ಕೆಲವು ಮತೀಯ ಶಕ್ತಿಗಳು ದಿಢೀರನೇ ಎದ್ದುಬಿಡುತ್ತಾರೆ. ಇಂತವರಿಗೆ ಕೆಲವು ರಾಜಕೀಯ ಪಕ್ಷಗಳು ಉದ್ದೇಶಪೂರಕವಾಗಿಯೇ ಬೆಂಬಲ ನೀಡುತ್ತವೆ. ಇದು ತುಷ್ಠೀಕರಣದ ನೀತಿಯೇ ಕಾರಣ ಎಂದು ವಾಗ್ದಾಳಿ ಮಾಡಿದರು.
ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್‌ಗಾಂಧಿ ವಿದೇಶದಲ್ಲಿ ಕುಳಿತು ಭಾರತದ ಮಾನವನ್ನು ಹರಾಜು ಮಾಡುತ್ತಿದ್ದಾರೆ. ಹುಟ್ಟಿದ ದೇಶದ ಬಗ್ಗೆ ಏನು ಮಾತನಾಡಬೇಕೆಂಬ ಸಾಮಾನ್ಯ ಜ್ಞಾನವೂ ಅವರಿಗಿಲ್ಲ. ಅವರ ಮಾತುಗಳನ್ನು ಯಾರೂ ನಂಬುವ ಸ್ಥಿತಿಯಲ್ಲಿಲ್ಲ. ಇಂತವರು ಒಂದೊಂದು ದಿನ ದೇಶದ ಸಮಗ್ರತೆ, ಭಾವೈಕ್ಯತೆ, ಸಾಮರಸ್ಯದ ಬಗ್ಗೆ ಮಾತನಾಡಿದರೂ ಅಚ್ಚರಿಯಿಲ್ಲ ಎಂದು ವ್ಯಂಗ್ಯವಾಡಿದರು.
ರಾಹುಲ್‌ಗಾಂಧಿ ಮಾತನ್ನು ಯಾರೊಬ್ಬರೂ ಕೇಳುವ ಸ್ಥಿತಿಯಲ್ಲಿಲ್ಲ. ಏಕೆಂದರೆ ಅವರ ಮಾತುಗಳಲ್ಲಿ ಬರೀ ಸುಳ್ಳುಗಳೇ ತುಂಬಿವೆ. ಆರ್‌ಎಸ್‌ಎಸ್, ಬಿಜೆಪಿ, ಸಂಘಪರಿವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸುವುದೇ ಅವರ ಒಂದಂಶದ ಕಾರ್ಯಕ್ರಮವಾಗಿದೆ ಎಂದು ಕಿಡಿಕಾರಿದರು.
ವಿದೇಶದಲ್ಲಿ ಅವರು ಭೇಟಿ ಮಾಡಿರುವ ವ್ಯಕ್ತಿಗಳು ಅವರ ಇತಿಹಾಸ ತೆಗೆದು ನೋಡಿದರೆ ಎಲ್ಲರಿಗೂ ಗೊತ್ತಾಗುತ್ತದೆ. ಭಾರತದ ಶತ್ರುಗಳು ರಾಹುಲ್‌ಗಾಂಧಿಯವರ ಸ್ನೇಹಿತರಾಗಿದ್ದಾರೆ. ಇಂತವರು ದೇಶದ ಬಗ್ಗೆ ಮಾತನಾಡುತ್ತಾರೆ ಎಂದರೆ ಅದು ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತೆ ಎಂದು ತೇಜಸ್ವಿಸೂರ್ಯ ಕಿಡಿಕಾರಿದರು.
ಓಬಿಸಿಗೆ ಅನ್ಯಾಯ ಆಗುತ್ತದೆ ಎಂದು ಇಲ್ಲಿ ಹೇಳುತ್ತಾರೆ. ವಿದೇಶದಲ್ಲಿ ಕುಳಿತು ನಮ ಪಕ್ಷ ಅಧಿಕಾರಕ್ಕೆ ಬಂದರೆ ಮೀಲಸಾತಿ ರದ್ದುಪಡಿಸುತ್ತೇವೆ ಎನ್ನುತ್ತಾರೆ. ನೆಹರು, ರಾಜೀವ್‌ಗಾಂಧಿ ಆದಿಯಾಗಿ ಎಲ್ಲರೂ ಮೀಸಲಾತಿ ವಿರೋಧಿಗಳೇ. ಹೀಗಾಗಿ ಅವರ ಹೇಳಿಕೆ ನಮಗೇನೂ ಆಶ್ಚರ್ಯ ಉಂಟುಮಾಡಿಲ್ಲ ಎಂದು ಹೇಳಿದರು.
ಮಂಡಲ್ ಆಯೋಗದ ಬಗ್ಗೆ ರಾಜೀವ್‌ಗಾಂಧಿ ಏನು ಭಾಷಣ ಮಾಡಿದ್ದಾರೆ ಎಂಬುದನ್ನು ರಾಹುಲ್‌ಗಾಂಧಿ ದಾಖಲೆಗಳನ್ನು ತೆಗೆದುಕೊಂಡು ನೋಡಬೇಕು. ಮೀಸಲಾತಿ ಕೊಡುವ ನೆಪದಲ್ಲಿ ಬುದ್ದುಗಳಿಗೆ ನಾವು ಅವಕಾಶ ಕೊಡಲು ಆಗುವುದಿಲ್ಲ ಎಂದು ಎಸ್‌ಸಿ/ಎಸ್‌ಟಿ, ಓಬಿಸಿಗೆ ಅನ್ಯಾಯ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬರುವವರೆಗೂ ಓಬಿಸಿಗಳಿಗೆ ಮೀಸಲಾತಿ ಕೊಟ್ಟಿರಲಿಲ್ಲ ಎಂದು ತಿಳಿಸಿದರು.
ಸಿಖ್ಖರ ಮೇಲೆ ನರಮೇಧ ನಡೆಸಿದ್ದು ಕಾಂಗ್ರೆಸ್. ಇಂದಿರಾಗಾಂಧಿಯವರು ಹತ್ಯೆಗೀಡಾದಾಗ ಸೇಡು ತೀರಿಸಿಕೊಳ್ಳಲು ಒಂದು ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಬರ್ಭರವಾಗಿ ಸಾವಿರಾರು ಜನರನ್ನು ಹತ್ಯೆ ಮಾಡಲಾಯಿತು. ಅಂತಹ ಸಮುದಾಯದ ಬಗ್ಗೆ ರಾಹುಲ್‌ಗಾಂಧಿ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ ಎಂದು ತೇಜಸ್ವಿ ಸೂರ್ಯ ವಾಗ್ದಾಳಿ ನಡೆಸಿದರು.