ಹೈದರಬಾದ್,ಡಿ.4- ತೆಲಂಗಾಣದ ಮುಲುಗು ಜಿಲ್ಲೆಯಲ್ಲಿ ಇಂದು ಬೆಳಗ್ಗೆ 5.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್ಸಿಎಸ್) ತಿಳಿಸಿದೆ. ಕೆಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.ಐಎಂಡಿ ಪ್ರಕಾರ, ಕಂಪನವು ಇಂದು ಬೆಳಗ್ಗೆ 7.27 ರ ಸುಮಾರಿಗೆ ದಾಖಲಾಗಿದೆ.
40 ಕಿ.ಮೀ. ಆಳದಲ್ಲಿ ಮುಲುಗು ಪ್ರದೇಶದಲ್ಲಿ ಕೇಂದ್ರೀಕೃತವಾಗಿತ್ತು. ಹಲವು ವರ್ಷಗಳ ನಂತರ ಅಪರೂಪದ ಭೂಕಂಪನ ಸಂಭವಿಸಿದೆ.ಈ ಭಾಗಕ್ಕೆ ಇದು ತೀವ್ರ ಭೂಕಂಪನ ಎಂದು ತಜ್ಞರು ಹೇಳಿದ್ದಾರೆ. ಯಾವುದೇ ಪ್ರಾಣಹಾನಿ ಅಥವಾ ಹೆಚ್ಚಿನ ಹಾನಿ ಸಂಭವಿಸಿಲ್ಲ. ಕಳೆದ 20 ವರ್ಷಗಳಲ್ಲಿ ಇಷ್ಟು ತೀವ್ರತೆಯ ಭೂಕಂಪ ಸಂಭವಿಸಿರುವುದು ಇದೇ ಮೊದಲು. ತೆಲಂಗಾಣ ಅಷ್ಟೇ ಅಲ್ಲದೆ ಹೈದರಾಬಾದ್ನ ಗೋದಾವರಿ ನದಿ ಸುತ್ತಲೂ ಪ್ರಬಲ ಭೂಕಂಪ ಸಂಭವಿಸಿದೆ. ಮುಲುಗುವನ್ನು ಕೇಂದ್ರಬಿಂದು ಎಂದು ಗುರುತಿಸಲಾಗಿದೆ.
ಜಿಲ್ಲೆಯ ಜನರು ಜಾಗರೂಕರಾಗಿರಲು ಮತ್ತು ಭೂಕಂಪಗಳ ಸಮಯದಲ್ಲಿ ಕಿಕ್ಕಿರಿದ ಅಥವಾ ಅಸುರಕ್ಷಿತ ಕಟ್ಟಡಗಳಿಂದ ದೂರವಿರುವಂತೆ ತಜ್ಞರು ತಿಳಿಸಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಅಧಿಕಾರಿಗಳು ವಿಜ್ಞಾನಿಗಳ ತಂಡ ಆಗಮಿಸಿ ಪರಿಶೀಲನೆ ನಡೆಸುತ್ತಿದೆ. ಹೈದರಾಬಾದ್, ಹನಕೊಂಡ, ವಾರಂಗಲ್, ಖಮಂ, ರಂಗಾರೆಡ್ಡಿ, ಹೈದರಾಬಾದ್ ಮತ್ತು ಭದ್ರಾದ್ರಿ ಕೊಟ್ಟಗುಡೆಂನಲ್ಲಿ ಇದೇ ರೀತಿಯ ಕಂಪನದ ಅನುಭವವಾಗಿದೆ. ಆ ಭಯಕ್ಕೆ ಜನರು ಮನೆ ಬಿಟ್ಟು ಹೊರಗಡೆ ಬಂದಿದ್ದಾರೆ. 2024 ರ ಮಾರ್ಚ್ 14 ರಂದು ಆಂಧ್ರಪ್ರದೇಶದಲ್ಲಿ ಭೂಕಂಪ ಸಂಭವಿಸಿತ್ತು. ರಿಕ್ಟರ್ ಮಾಪಕದಲ್ಲಿ 3.9ರಷ್ಟು ತೀವ್ರತೆ ದಾಖಲಾಗಿತ್ತು.
ಅಕ್ಟೋಬರ್ 12 ರಾತ್ರಿ ಭೂಕಂಪ 2022 ಸಂಭವಿಸಿತ್ತು. ಆದಿಲಾಬಾದ್ ಜಿಲ್ಲೆಯ ಉಟ್ನೂರಿನಲ್ಲಿ ಭೂಮಿ ಕಂಪಿಸಿದ ಹಿನ್ನೆಲೆಯಲ್ಲಿ ಜನರು ಆತಂಕಗೊಂಡಿದ್ದರು. 13 ಜುಲೈ 2022 ರಂದು ನೆಲ್ಲೂರು ಮತ್ತು ಕಡಪ ಜಿಲ್ಲೆಗಳಲ್ಲಿ ಭೂಕಂಪ ಸಂಭವಿಸಿತ್ತು. ಕಂಡ್ರಿಕ, ಪಡಮಟ ನಾಯ್ಡುಪಲ್ಲಿ, ಚಿಲಕಪಾಡು, ಕೃಷ್ಣಾಪುರ ಮತ್ತಿತರ ಗ್ರಾಮಗಳಲ್ಲಿ ಭೂಮಿ ಕಂಪಿಸಿತ್ತು.
ಭಾರತದಲ್ಲಿ ನಾಲ್ಕು ಭೂಕಂಪನ ವಲಯಗಳನ್ನು ಗುರುತಿಸಲಾಗಿದ್ದು, ವಲಯ 1, ವಲಯ 2, ವಲಯ 3, ಮತ್ತು ವಲಯ 4 ಎಂದು ಹೇಳಲಾಗಿದೆ. ವಲಯ 5 ಅತ್ಯಧಿಕ ಮಟ್ಟದ ಭೂಕಂಪನವನ್ನು ಎದುರಿಸುತ್ತದೆ. ವಲಯ 2 ರಲ್ಲಿ ಅತೀ ವಿರಳವಾಗಿ ಭೂ ಕಂಪನಗಳು ಸಂಭವಿಸುತ್ತವೆ. ತೆಲಂಗಾಣವನ್ನು ವಲಯ 2ರಲ್ಲಿ ವರ್ಗೀಕರಿಸಲಾಗಿದ್ದು, ಇದು ಕಡಿಮೆ ತೀವ್ರತೆಯ ವಲಯವಾಗಿದೆ. ಇತ್ತೀಚೆಗೆ ಪಶ್ಚಿಮ ಘಟ್ಟದ ಕೆಲ ಭಾಗಗಳಲ್ಲಿಯೂ ಭೂಮಿ ಕಂಪಿಸಿದ್ದು, ಜನರಲ್ಲಿ ಭಯ ಉಂಟು ಮಾಡಿತ್ತು.