ಬೆಂಗಳೂರು, ನ.19- ಸಿನಿಮಾ ಅರ್ಧಕ್ಕೆ ನಿಲ್ಲಿಸಿದ್ದ ಕಾರಣಕ್ಕೆ ಕೋಪಗೊಂಡು ನಿರ್ದೇಶಕರ ಮೇಲೆ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ ಕಿರುತೆರೆ ನಟ ತಾಂಡವೇಶ್ವರನನ್ನು ಚಂದ್ರಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ತಾಂಡವೇಶ್ವರ್ ಅವರು ಜೋಡಿ ಹಕ್ಕಿ, ಭೂಮಿಗೆ ಬಂದ ಭಗವಂತ ಧಾರವಾಹಿಯಲ್ಲಿ ನಟಿಸಿದ್ದಾರೆ. ಮೂಲತಃ ಹಾಸನದ ತಾಂಡವೇಶ್ವರ ಹಾಗೂ ಚಲನಚಿತ್ರ ನಿರ್ದೇಶಕ ಭರತ್ ನವುಂದ ಪರಿಚಯಸ್ಥನಾಗಿದ್ದು, ದೇವನಾಮ್ ಪ್ರಿಯ ಎಂಬ ಚಲನಚಿತ್ರ ನಿರ್ದೇಶಿಸುವ ವಿಚಾರವಾಗಿ ಮಾತುಕತೆ ನಡೆಸಿದ್ದರು.
ಆ ಸಂದರ್ಭದಲ್ಲಿ ನಿರ್ಮಾಪಕರು ಸಿಗದೇ ಇದುದ್ದರಿಂದ ತಾಂಡವೇಶ್ವರ ಅವರೇ ಹಂತ-ಹಂತವಾಗಿ ನಿರ್ದೇಶಕ ಭರತ್ಗೆ ಒಟ್ಟು ಆರು ಲಕ್ಷ ಹಣವನ್ನು ನೀಡಿದ್ದಾರೆ.ಚಿತ್ರ ನಿರ್ದೇಶನ ಪ್ರಾರಂಭ ವಾಗಿ ಎರಡು ವರ್ಷ ಕಳೆದರೂ ಸಹ ತ್ವರಿತ ಗತಿಯಲ್ಲಿ ಭರತ್ ಚಿತ್ರ ನಿರ್ದೇಶನವನ್ನು ಪೂರ್ಣಗೊಳಿಸಿ ರಲಿಲ್ಲ. ಹಾಗಾಗಿ ತಾವು ನೀಡಿರುವ ಆರು ಲಕ್ಷ ಹಣವನ್ನು ಹಿಂದಿರುಗಿ ಸುವಂತೆ ತಾಂಡವೇಶ್ವರ್ ಕೇಳಿದ್ದಾರೆ.
ಈ ವಿಚಾರದ ಬಗ್ಗೆ ಚರ್ಚಿಸುವ ಸಲುವಾಗಿ ಚಂದ್ರಾಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಬಸವೇಶ್ವರ ಬಡಾವಣೆಯಲ್ಲಿರುವ ನಿರ್ಮಾಪಕರ ಕಚೇರಿಯಲ್ಲಿ ನಿನ್ನೆ ಸಂಜೆ 6.30ರ ಸುಮಾರಿನಲ್ಲಿ ಸಭೆ ಸೇರಿದ್ದಾರೆ.
ಈ ಮೂವರೊಂದಿಗೆ ಇನ್ನು ಕೆಲವರು ಸಭೆಯಲ್ಲಿ ಪಾಲ್ಗೊಂಡಿದ್ದು, ಹಣಕಾಸಿನ ವಿಚಾರ ಮಾತನಾಡುತ್ತಿದ್ದ ವೇಳೆ ಅವರವರಲ್ಲೇ ಮಾತಿಗೆ ಮಾತು ಬೆಳೆದಿದೆ. ಆ ಸಂದರ್ಭದಲ್ಲಿ ತಾಂಡವೇಶ್ವರ್ ತಾವು ತಂದಿದ್ದ ಸಿಂಗಲ್ ಬ್ಯಾರಲ್ ಬಂದೂಕಿನಿಂದ ಭರತ್ ಮೇಲೆ ಗುಂಡು ಹಾರಿಸಿದ್ದಾನೆ.
ಅದೃಷ್ಟವಶಾತ್ ಆ ಗುಂಡು ಕಚೇರಿ ಕೊಠಡಿಯ ಆರ್ಸಿಸಿ ತಗುಲಿದ್ದರಿಂದ ಭರತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ತನ್ನ ಮೇಲೆ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ ತಾಂಡವೇಶ್ವರ್ ವಿರುದ್ಧ ಚಂದ್ರಾಲೇಔಟ್ ಪೊಲೀಸ್ ಠಾಣೆಗೆ ಭರತ್ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಕಿರುತೆರೆ ನಟ ತಾಂಡರೇಶ್ವರನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.