ಬೆಂಗಳೂರು,ಜ.5- ರಾಜ್ಯದ ಬಹುತೇಕ ಭಾಗಗಳಲ್ಲಿ ಕನಿಷ್ಠ ತಾಪಮಾನ ಇಳಿಕೆಯಾಗಿದ್ದು, ಚಳಿ ಹೆಚ್ಚಳವಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೀತ ಗಾಳಿ ಬೀಸಲಿದ್ದು ಮುನ್ನೆಚ್ಚರಿಕೆ ವಹಿಸುವಂತೆ ಹವಾ ಮಾನ ಇಲಾಖೆ ನಿರ್ದೇಶನ ನೀಡಿದೆ. ಬೀದರ್, ಕಲಬುರಗಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ತೀವ್ರತರವಾದ ಶೀತ ಗಾಳಿ ಬೀಸುವ ಸ್ಥಿತಿಯ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆಯನ್ನು ನೀಡಿದೆ.
ಕಲಬುರಗಿ ಮತ್ತು ವಿಜಯಪುರದಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 4 ಡಿಗ್ರಿ ಸೆಲ್ಸಿಯಸ್ಗಿಂತ ಕಡಿಮೆಯಿರುತ್ತದೆ. ವಿಜಯಪುರದಲ್ಲಿ ಕನಿಷ್ಠ 9ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು, ಹಾಸನದಲ್ಲಿ 10.3 ಡಿಗ್ರಿ ಸೆಲ್ಸಿಯಸ್ ಮತ್ತು ಚಿಂತಾಮಣಿಯಲ್ಲಿ 10.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಬೆಂಗಳೂರಿನಲ್ಲಿ ಕನಿಷ್ಠ ತಾಪಮಾನ 14 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ, ಇದು ಸಾಮಾನ್ಯಕ್ಕಿಂತ 2.4 ಡಿಗ್ರಿ ಸೆಲ್ಸಿಯಸ್ ಕಡಿಮೆ ಮತ್ತು ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ಕನಿಷ್ಠ ತಾಪಮಾನ 12.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ, ಇದು ಸಾಮಾನ್ಯಕ್ಕಿಂತ 3 ಡಿಗ್ರಿ ಸೆಲ್ಸಿಯಸ್ ನಷ್ಟು ಕಡಿಮೆಯಾಗಿದೆ.
ಉತ್ತರ ಕರ್ನಾಟಕದ ಮೂರು ಜಿಲ್ಲೆಗಳಿಗೆ ಎಚ್ಚರಿಕೆ ನೀಡಲಾಗಿದೆ. ಮುಂದಿನ 2-3 ದಿನಗಳ ಕಾಲ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಕನಿಷ್ಠ ತಾಪಮಾನದಲ್ಲಿ ಇಳಿಕೆಯಾಗಲಿದೆ. ಗುಡ್ಡಗಾಡು ಪ್ರದೇಶಗಳಿಂದ ಉತ್ತರ ದಿಕ್ಕಿನ ಮಾರುತಗಳು ಬೀಸುತ್ತಿರುವುದೇ ಇದಕ್ಕೆ ಕಾರಣ.
ಕರ್ನಾಟಕದ ದಕ್ಷಿಣ ಒಳನಾಡಿನ ಪ್ರದೇಶಗಳಿಗೆ ಯಾವುದೇ ಶೀತ ಅಲೆಗಳ ಮುನ್ನೆಚ್ಚರಿಕೆ ನೀಡಿಲ್ಲ, ಆದರೆ ಕನಿಷ್ಠ ತಾಪಮಾನದಲ್ಲಿ ಕುಸಿತವನ್ನು ಅನುಭವಿಸುತ್ತಿರುವ ಪ್ರದೇಶವನ್ನು ತಳ್ಳಿಹಾಕುವಂತಿಲ್ಲ.
ಗಾಳಿಯ ಮಾದರಿಯು ಮತ್ತೆ ಬದಲಾಗುತ್ತದೆ ಮತ್ತು ಪೂರ್ವದ ಕಡೆಗೆ ಮಾರುತಗಳು ಮೇಲುಗೈ ಸಾಧಿಸಲು ಪ್ರಾರಂಭವಾಗುತ್ತದೆ, ಇದರಿಂದಾಗಿ ಕನಿಷ್ಠ ತಾಪಮಾನವು ಏರಿಕೆಯಾಗಲು ಪ್ರಾರಂಭವಾಗುತ್ತದೆ ಮತ್ತು ಗರಿಷ್ಠ ತಾಪಮಾನವು ಕುಸಿಯುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.