ಬೆಂಗಳೂರು,ಏ.15- ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕುಟುಂಬದ ಸದಸ್ಯರು ನಿವೇಶನ ಪಡೆದಿರುವ ಪ್ರಕರಣ ಸಂಬಂಧ ತನಿಖೆ ಪೂರ್ಣಗೊಳಿಸಿ ಮೇ.7 ರೊಳಗೆ ಅಂತಿಮ ವರದಿ ಸಲ್ಲಿಸುವಂತೆ ಲೋಕಾಯುಕ್ತ ಅಧಿಕಾರಿಗಳಿಗೆ ಜನಪ್ರತಿನಿಧಿಗಳ ನ್ಯಾಯಾಲಯ ಆದೇಶ ನೀಡಿದೆ.
ಆದರೆ ಈ ಹಿಂದೆ ಮೈಸೂರು ಲೋಕಾಯುಕ್ತ ತನಿಖಾ ತಂಡ ಸಲ್ಲಿಸಿದ್ದ ಬಿ ರಿಪೋರ್ಟ್ ವರದಿ ಕುರಿತು ಯಾವುದೇ ಅಂತಿಮ ಆದೇಶವನ್ನು ನೀಡದಿರುವ ನ್ಯಾಯಾಲಯ ಮೇ 7ರೊಳಗೆ ಅಂತಿಮ ವರದಿ ಬಂದ ಬಳಿಕ ಆದೇಶ ನೀಡುವುದಾಗಿ ತೀರ್ಪು ನೀಡಿದೆ.
ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಒಂದಿಷ್ಟು ಹಿನ್ನಡೆ ಎಂದೇ ಹೇಳಲಾಗಿರುವ ಜಾರಿ ನಿರ್ದೇಶನಾಲಯ(ಇ.ಡಿ) ತಕರಾರು ಅರ್ಜಿ ಸಲ್ಲಿಸಬಹುದೆಂದು ಆದೇಶ ನೀಡಿದೆ. ಲೋಕಾಯುಕ್ತ ಅಂತಿಮ ವರದಿ ಬಂದ ನಂತರವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕುಟುಂಬದ ಸದಸ್ಯರು ತನಿಖಾ ವಿಚಾರಣೆಯನ್ನು ಎದುರಿಸಬೇಕೆ ? ಬೇಡವೇ ಎಂಬುದನ್ನು ಆದೇಶದಲ್ಲಿ ತಿಳಿಸುವುದಾಗಿ ಹೇಳಿದೆ.
ವಾದವನ್ನು ಆಲಿಸಿ ಮಂಗಳವಾರಕ್ಕೆ ಕಾಯ್ದಿರಿಸಿದ್ದ ತೀರ್ಪನ್ನು ಪ್ರಕಟಿಸಿದ ಬೆಂಗಳೂರು ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಮೂರ್ತಿ ಗಜಾನನ ಭಟ್ ಅವರು ಲೋಕಾಯುಕ್ತ ಅಂತಿಮ ವರದಿ ಬಂದ ನಂತರವೇ ಬಿ ರಿಪೋರ್ಟ್ ಬಗ್ಗೆ ಆದೇಶ ನೀಡುವುದಾಗಿ ಪ್ರಕಟಿಸಿದೆ.
ಲೋಕಾಯುಕ್ತ ಪೊಲೀಸರು ಈವರೆಗೆ ಕೇವಲ ಮಧ್ಯಂತರ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಅಂತಿಮ ವರದಿ ಬಂದಿಲ್ಲವಾದರೂ ಲೋಕಾಯುಕ್ತ ಪೊಲೀಸರು ತನಿಖೆಯನ್ನು ಮುಂದುವರೆಸಿ ಮೇ 7ರೊಳಗೆ ಅಂತಿಮ ವರದಿಯನ್ನು ಸಲ್ಲಿಸಬೇಕೆಂದು ತಾಕೀತು ಮಾಡಿದೆ.
ತನಿಖೆಯನ್ನು ಪೂರ್ಣಗೊಳಿಸಿ ಅಂತಮ ವರದಿ ಬರುವವರೆಗೂ ನಾವು ಯಾವುದೇ ಆದೇಶ ನೀಡಲು ಸಾಧ್ಯವಿಲ್ಲ. ಹೀಗಾಗಿ ತನಿಖೆ ಮುಂದುವರೆಯಲ್ಲಿ ನಂತರವೇ ನಾವು ಆದೇಶ ನೀಡುತ್ತೇವೆ. ಅಲ್ಲಿಯವರೆಗೂ ತನಿಖೆ ಮುಂದುವರೆಯಲಿ ಎಂದು ಸೂಚಿಸಿದರು. ನೊಂದ ವ್ಯಕ್ತಿಯಂತೆ ಇ.ಡಿ ಕೂಡ ತಕರಾರರು ಅರ್ಜಿಯನ್ನು ಸಲ್ಲಿಸಲು ಕಾನೂನಿನಲ್ಲಿ ಅವಕಾಶವಿದೆ. ಹೀಗಾಗಿ ಇ.ಡಿ ಪರ ವಕೀಲರ ಅರ್ಜಿಯನ್ನು ನಾವು ಮಾನ್ಯ ಮಾಡುತ್ತೇವೆ. ಯಾವುದೇ ವ್ಯಕ್ತಿ ಕೂಡ ಪ್ರಶ್ನಿಸಲು ಅವಕಾಶ ಇರುವುದರಿಂದ ಬೇಡ ಎನ್ನಲು ಸಾಧ್ಯವಿಲ್ಲ. ಆದರೆ ಮೇ 7ರವರೆಗೆ ಇ.ಡಿ ತನಿಖೆ ಬೇಡ ಎಂದು ನಿರ್ದೇಶನ ನೀಡಿದರು.