ಬೆಂಗಳೂರು,ಮೇ 9– ದೇಶದ ಗಡಿಭಾಗದಲ್ಲಿನ ವಿದ್ಯಮಾನಗಳ ಹಿನ್ನೆಲೆಯಲ್ಲಿ ಶಾಂತಿ, ಸೌಹಾರ್ದಕ್ಕೆ ಧಕ್ಕೆ ಬರದಂತೆ ಹಾಗೂ ಸಾರ್ವಜನಿಕರು ಆತಂಕಕ್ಕೆ ಒಳಗಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಸೂಚನೆ ನೀಡಿದ್ದಾರೆ.
ನಗರದ ಆಡುಗೋಡಿಯ ಸಿಎಆರ್ ಕವಾಯತು ಮೈದಾನದಲ್ಲಿ ಇಂದು ಏರ್ಪಡಿಸಿದ್ದ ಮಾಸಿಕ ಸೇವಾ ಕವಾಯತಿನಲ್ಲಿ ಗೌರವವಂದನೆ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಪೆರೇಡ್‌ನ ಗುಣಮಟ್ಟ ಹಾಗೂ ಅಧಿಕಾರಿ ಸಿಬ್ಬಂದಿಗಳ ಕಾರ್ಯಕ್ಷಮತೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಗಡಿಭಾಗದಲ್ಲಿನ ವಿದ್ಯಮಾನಗಳ ಹಿನ್ನೆಲೆಯಲ್ಲಿ ನಗರ ಪೊಲೀಸರು ಜಾಗರೂಕತೆ ಹಾಗೂ ಜವಾಬ್ದಾರಿಯುತವಾಗಿಕೆಲಸ ಮಾಡಬೇಕಿದೆ. ಇಂತಹ ಸಂದರ್ಭಗಳಲ್ಲಿ ವದಂತಿ ಹಾಗೂ ತಪ್ಪು ಮಾಹಿತಿಗಳಿಂದ ಸಾರ್ವಜನಿಕರು ಆತಂಕಕ್ಕೆ ಒಳಗಾಗುವ ಸಾಧ್ಯತೆಗಳಿರುತ್ತವೆ. ಅದಕ್ಕೆ ಅವಕಾಶವಾಗದಂತೆ ಸ್ಪಷ್ಟ ಹಾಗೂ ಸರಿಯಾದ ಮಾಹಿತಿಯ ತಿಳಿವಳಿಕೆ ನೀಡಿ ವಾಸ್ತವತೆಯನ್ನು ಮನದಟ್ಟು ಮಾಡಿಕೊಡಬೇಕು. ಈ ನಿಟ್ಟಿನಲ್ಲಿ ಪೊಲೀಸ್ ಠಾಣೆ, ಇನ್‌ಸ್ಪೆಕ್ಟರ್, ಎಸಿಪಿ ದರ್ಜೆಯ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು ಎಂದು ಸೂಚಿಸಿದರು.
ಸಾಮಾಜಿಕ ಜಾಲಾತಣದಲ್ಲೂ ಪ್ರಚಲಿತ ವಿದ್ಯಮಾನಗಳೊಂದಿಗೆ ಸಾಕಷ್ಟು ಸುಳ್ಳು ಮಾಹಿತಿ ಹರಡುತ್ತವೆ. ಅದನ್ನು ಅಲ್ಲಗಳೆದು ವಾಸ್ತವತೆಯನ್ನು ತಿಳಿಸಬೇಕು. ಜನ ಆತಂಕಕ್ಕೆ ಒಳಗಾಗಂದತೆ ಸಾಮಾಜಿಕ ಸಾಮರಸ್ಯ ಪಾಲನೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಎಸಿಪಿಗಳು, ಡಿಸಿಪಿಗಳು ಎಚ್ಚರಿಕೆ ವಹಿಸಬೇಕು.
ರೋಲ್‌ಕಾಲ್ ಹಾಗೂ ಪೊಲೀಸ್ ಠಾಣೆಗೆ ಭೇಟಿ ನೀಡಿದ ಸಂದರ್ಭದಲ್ಲಿ ತಮ ಸಿಬ್ಬಂದಿಗಳಿಗೆ ನಿಖರ ಮಾಹಿತಿಯನ್ನು ತಿಳಿಸಿಕೊಡಬೇಕು. ಸಾರ್ವಜನಿಕರ ಜೊತೆ ಉತ್ತಮ ಸಂಪರ್ಕವಿಟ್ಟುಕೊಂಡು ಸಮರ್ಪಕ ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಎಲ್ಲಕ್ಕಿಂತ ಮೊದಲು ಪೊಲೀಸರಿಗೆ ಸರಿಯಾದ ಮಾಹಿತಿ ಇರಬೇಕು. ಪ್ರತಿ ಹಂತದಲ್ಲೂ ಪರಸ್ಪರ ಸಮನ್ವಯತೆ ಉತ್ತಮವಾಗಿರಬೇಕು ಎಂದು ಆದೇಶಿಸಿದರು.ಇತ್ತೀಚೆಗೆ ದಿನಸಿ ಪದಾರ್ಥಗಳು ಹಾಗೂ ಜೀವನಾವಶ್ಯಕ ಸಾಮಗ್ರಿಗಳ ಕೃತಕ ಅಭಾವ ಸೃಷ್ಟಿಸುವ ಪ್ರಯತ್ನಗಳಾಗುತ್ತಿರುವ ಬಗ್ಗೆ ವರದಿಗಳಾಗಿವೆ. ಇಂತಹ ಮಾಹಿತಿಗಳು ಸಿಕ್ಕ ತಕ್ಷಣ ಜಾಗರೂಕರಾಗಿ ಕೆಲಸ ಮಾಡಬೇಕು. ಕಾನೂನು ರೀತಿಯ ಕ್ರಮಗಳಾಗಬೇಕು. ಹಿರಿಯ ಅಧಿಕಾರಿಗಳು ಕಾಲಕಾಲಕ್ಕೆ ಸೂಚನೆಯನ್ನು ಪಾಲನೆ ಮಾಡಬೇಕು ಎಂದು ಆಯುಕ್ತರು ಸೂಚಿಸಿದರು.