Sunday, February 23, 2025
Homeರಾಜ್ಯಮರಾಠಿಗರ ಪುಂಡಾಟ : ಅಂತಾರಾಜ್ಯ ಬಸ್‌ ಸಂಚಾರ ಬಂದ್‌, ಗಡಿ ಉದ್ವಿಗ್ನ

ಮರಾಠಿಗರ ಪುಂಡಾಟ : ಅಂತಾರಾಜ್ಯ ಬಸ್‌ ಸಂಚಾರ ಬಂದ್‌, ಗಡಿ ಉದ್ವಿಗ್ನ

Tension in Belagavi district as RTC conductor attacked amid language row

ಮುಂಬೈ,ಫೆ.23- ಬೆಳಗಾವಿ ತಾಲ್ಲೂಕಿನ ಬಾಳೇಕುಂದ್ರಿಯಲ್ಲಿ ಕರ್ನಾಟಕ ಸರ್ಕಾರಿ ಬಸ್‌‍ ಕಂಡಕ್ಟರ್‌ ಮೇಲೆ ಮರಾಠಿ ಪುಂಡರು ಹಲ್ಲೆ ಮಾಡಿದ ಬಳಿಕ ಗಡಿಭಾಗದಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ. ಕನ್ನಡ ಪರ ಸಂಘಟನೆಗಳು ಮಹಾರಾಷ್ಟ್ರ ಸಾರಿಗೆ ಬಸ್‌‍ ಮತ್ತು ಚಾಲಕನಿಗೆ ಕಪ್ಪು ಮಸಿ ಬಳಿದಿದ್ದರು. ಇದಕ್ಕೆ ಪ್ರತಿಯಾಗಿ ಕರ್ನಾಟಕ ಬಸ್‌‍ಗಳ ಮೇಲೆ ಮರಾಠಿ ಪುಂಡರು ಮಸಿ ಬಳಿದಿದ್ದಾರೆ. ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಳ್ಳುತ್ತಿರುವುದರಿಂದ ಮಹಾರಾಷ್ಟ್ರವು ಮುನ್ನೆಚ್ಚರಿಕೆ ಕ್ರಮವಾಗಿ ಕರ್ನಾಟಕ ರಾಜ್ಯಕ್ಕೆ ಸಾರಿಗೆ ಬಸ್‌‍ ಸೇವೆಯನ್ನು ನಿಲ್ಲಿಸಿದೆ.

ಕರ್ನಾಟಕದಲ್ಲಿ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌‍ ಮೇಲೆ ದಾಳಿ ನಡೆದ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ತನ್ನ ಬಸ್‌‍ ಸೇವೆಗಳನ್ನು ಸ್ಥಗಿತಗೊಳಿಸಿರುವುದಾಗಿ ಮಹಾರಾಷ್ಟ್ರ ಸಾರಿಗೆ ಸಚಿವ ಪ್ರತಾಪ್‌ ಸರ್ನಾಯಕ್‌ ತಿಳಿಸಿದ್ದಾರೆ.

ಸಾರಿಗೆ ಸಚಿವ ಪ್ರತಾಪ್‌ ಸರ್ನಾಯಕ್‌ ಅವರ ನಿರ್ದೇಶನದಂತೆ,
ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌‍ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಮತ್ತು ನೌಕರರ ಸುರಕ್ಷತೆಯ ದೃಷ್ಟಿಯಿಂದ ಕೊಲ್ಹಾಪುರದಿಂದ ಕರ್ನಾಟಕಕ್ಕೆ ಹೋಗುವ ಎಲ್ಲಾ ರಾಜ್ಯ ಸಾರಿಗೆ ಬಸ್‌‍ಗಳ ಸಂಚಾರವನ್ನು ಅನಿರ್ದಿಷ್ಟಾವಧಿಗೆ ರದ್ದುಗೊಳಿಸಲಾಗಿದೆ ಎಂದು ಎಂಎಸ್‌‍ಆರ್ಟಿಸಿ ವಕ್ತಾರ ಅಭಿಜಿತ್‌ ಭೋಸಲೆ ತಿಳಿಸಿದ್ದಾರೆ.

ಬೆಂಗಳೂರಿನಿಂದ ಮುಂಬೈಗೆ ತೆರಳುತ್ತಿದ್ದ ಎಂಎಸ್‌‍ಆರ್ಟಿಸಿ ಬಸ್‌‍ ಅನ್ನು ಶುಕ್ರವಾರ ರಾತ್ರಿ ಚಿತ್ರದುರ್ಗದ ಬಳಿ ಕನ್ನಡ ಪರ ಕಾರ್ಯಕರ್ತರು ತಡೆದು ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದ್ದರು.ಬಸ್‌‍ ಚಾಲಕ ಭಾಸ್ಕರ್‌ ಜಾಧವ್‌ ಅವರ ಮುಖಕ್ಕೆ ಕಪ್ಪು ಮಸಿ ಬಳಿದು ಹಲ್ಲೆ ನಡೆಸಿದ್ದಾರೆ ಎಂದು ಸಚಿವರು ಆರೋಪಿಸಿದ್ದಾರೆ. ಈ ಘಟನೆಯ ಬಗ್ಗೆ ಕರ್ನಾಟಕ ಸರ್ಕಾರದಿಂದ ಸ್ಪಷ್ಟನೆ ಬರುವವರೆಗೂ ಕರ್ನಾಟಕಕ್ಕೆ ಬಸ್‌‍ ಸೇವೆಗಳನ್ನು ಪುನರಾರಂಭಿಸುವುದಿಲ್ಲ ಎಂದು ಅವರು ಹೇಳಿದ್ದಾರೆ. ಸದ್ಯ ಆಪಾದಿತ ದಾಳಿಗೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ಪೊಲೀಸ್‌‍ ಪ್ರಕರಣ ದಾಖಲಾಗಿದೆ.

ಚಿತ್ರದುರ್ಗದಲ್ಲಿ ಬಸ್‌‍ ಮೇಲಿನ ದಾಳಿ, ಬೆಳಗಾವಿ ಜಿಲ್ಲಾ ಕೇಂದ್ರದ ಹೊರವಲಯದಲ್ಲಿ ಕರ್ನಾಟಕ ರಾಜ್ಯ ಸಾರಿಗೆ ನಿಗಮದ ಬಸ್ನ ಕಂಡಕ್ಟರ್‌ ಮೇಲಿನ ಹಲ್ಲೆಗೆ ಪ್ರತೀಕಾರವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಪೊಲೀಸರ ಸೂಚನೆ ಮೇರೆಗೆ ಕರ್ನಾಟಕ ಗಡಿವರೆಗೆ ಮಾತ್ರ ಬಸ್‌‍ ಸಂಚಾರಕ್ಕೆ ಅವಕಾಶ ನೀಡಲಾಗುತ್ತಿದೆ. ಮುಂದಿನ ಪರಿಸ್ಥಿತಿ ನೋಡಿಕೊಂಡು ಮಹಾರಾಷ್ಟ್ರಕ್ಕೆ ಬಸ್‌‍ ಸಂಚಾರ ಪುನಾರಂಭಿಸಲಾಗುವುದು ಎಂದು ಸಾರಿಗೆ ಸಂಸ್ಥೆ ಅಧಿಕಾರಿಗಳು ತಿಳಿಸಿದ್ದಾರೆ. ಕೊಲ್ಲಾಪುರ ಮಾರ್ಗವಾಗಿ ದಿನವೂ ಮಹಾರಾಷ್ಟ್ರ ಸಾರಿಗೆಯ 30 ಬಸ್‌‍ ಗಳ ರಾಜ್ಯಕ್ಕೆ ಬರುತ್ತಿದ್ದವು. ಶನಿವಾರ 20 ಬಸ್‌‍ಗಳು ಮಾತ್ರ ಬಂದಿದ್ದವು.

ಏನಿದು ಘಟನೆ?:
ಕಳೆದ ಶುಕ್ರವಾರ ಮಧ್ಯಾಹ್ನ 12.30ರ ವೇಳೆಗೆ ಬೆಳಗಾವಿ ಸಿಬಿಟಿಯಿಂದ ಸುಳೇಬಾವಿಗೆ ಹೊರಟಿದ್ದ ಬಸ್‌‍ನಲ್ಲಿ ಓರ್ವ ಯುವಕ, ಯುವತಿ ಪ್ರಯಾಣಿಸುತ್ತಿದ್ದರು. ಟಿಕೆಟ್‌ ಪಡೆಯಲು ನಿರ್ವಾಹಕ ಹೇಳಿದಾಗ, ಮರಾಠಿ ಭಾಷೆಯಲ್ಲಿ ಯುವಕ ಉತ್ತರಿಸಿದ್ದಾನೆ. ಮರಾಠಿ ಭಾಷೆ ಅರ್ಥವಾಗುತ್ತಿಲ್ಲ. ಕನ್ನಡದಲ್ಲಿ ಮಾತನಾಡಿ ಎಂದು ಕಂಡಕ್ಟರ್‌ ಹೇಳಿದ್ದಾರೆ. ಈ ಕಾರಣಕ್ಕೆ ಯುವಕ-ಯುವತಿ ಇಬ್ಬರೂ ನಿರ್ವಾಹಕ ಮಹಾದೇವ ಅವರ ಮೇಲೆ ಮುಗಿಬಿದ್ದಿದ್ದಾರೆ. ಬಸ್‌‍ ಸುಳೇಬಾವಿ ಗ್ರಾಮ ಪ್ರವೇಶಿಸುತ್ತಿದ್ದಂತೆ ತಮೂರಿನ ನಾಲ್ವರು ಯುವಕರನ್ನು ಕರೆಯಿಸಿಕೊಂಡು ನಿರ್ವಾಹಕನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಡಿಸಿಪಿ ರೋಹನ್‌ ಜಗದೀಶ ಘಟನೆಯ ವಿವರ ನೀಡಿದ್ದಾರೆ.

ಬೆಳಗಾವಿಯಲ್ಲಿ ಕಂಡಕ್ಟರ್‌ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಂಡಕ್ಟರ್‌ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿಯೂ ಪ್ರಕರಣ ದಾಖಲಿಸಲಾಗಿದೆ.

ಸುಲೇಭಾವಿ ಗ್ರಾಮದಲ್ಲಿ ಯುವಕನ ಜೊತೆ ಬಸ್‌‍ ಹತ್ತಿದ ಯುವತಿಯೋರ್ವಳು ಮರಾಠಿಯಲ್ಲಿ ಮಾತನಾಡಿದ್ದಳು. ಆಗ ನಾನು ನನಗೆ ಮರಾಠಿ ಬರಲ್ಲ, ಕನ್ನಡದಲ್ಲಿ ಮಾತನಾಡು ಎಂದು ಹೇಳಿದ್ದಕ್ಕೆ ಜನರನ್ನು ಕರೆಸಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಕಂಡಕ್ಟರ್‌ ಹೇಳಿದ್ದರು. ಗಾಯಗೊಂಡ ಬಸ್‌‍ ಕಂಡಕ್ಟರ್‌ ಅನ್ನು ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ದಾಖಲಿಸಲಾಗಿದ್ದು ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಲ್ಲೆ ಆರೋಪಿಗಳ ಬಂಧನ
ನಿರ್ವಾಹಕನ ಮೇಲೆ ಹಲ್ಲೆ ನಡೆಸಿದ್ದ ಆರೋಪಿಗಳನ್ನು ಬೆಳಗಾವಿಯ ಮಾರಿಹಾಳ ಠಾಣೆ ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. ಓರ್ವ ಅಪ್ರಾಪ್ತ ಸೇರಿ ನಾಲ್ವರನ್ನು ಬಂಧಿಸಲಾಗಿದ್ದು, ಬಂಧಿತರನ್ನು ಮಾರುತಿ ತುರುಮುರಿ, ರಾಹುಲ್‌ ರಾಜು ನಾಯ್ಡು, ಬಾಳು ಗೋಜಗೇಕರ್‌ ಎಂದು ಗುರುತಿಸಲಾಗಿದೆ.

ತಲೆಮರೆಸಿಕೊಂಡಿರುವ ಇತರ ಆರೋಪಿಗಳನ್ನು ಬಂಧಿಸಲು ತಹಶೀಲ್ದಾರರ ನೇತೃತ್ವದಲ್ಲಿ ಮೂರು ತಂಡಗಳನ್ನು ರಚಿಸಲಾಗಿದೆ.ಘಟನೆಯಲ್ಲಿ ಭಾಗಿಯಾಗಿರುವ ಎಲ್ಲರನ್ನೂ ಶೀಘ್ರವೇ ಬಂಧಿಸಲಾಗುವುದು ಎಂದು ನಗರ ಪೊಲೀಸ್‌‍ ಆಯುಕ್ತ ಯಡಾ ಮಾರ್ಟಿನ್‌ ತಿಳಿಸಿದ್ದಾರೆ.

ಕಂಡಕ್ಟರ್‌ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಿ ಮತ್ತೊಂದು ದೂರು ದಾಖಲು ಮಾಡಲಾಗಿದೆ. ನಾವು ತನಿಖೆ ನಡೆಸುತ್ತಿದ್ದೇವೆ ಮತ್ತು ಸತ್ಯ ಏನು ಎಂದು ನಾವು ನೋಡುತ್ತೇವೆ. ಅದರಂತೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ. ತನಿಖೆಯ ವೇಳೆ ಬಸ್ಸಿನಲ್ಲಿದ್ದ ಇತರೆ ಪ್ರಯಾಣಿಕರಿಂದ ಹೇಳಿಕೆ ಪಡೆಯುತ್ತೇವೆ ಎಂದು ಅವರು ಹೇಳಿದ್ದಾರೆ.

ಗಡಿ ಸಮಸ್ಯೆಯಿಂದಾಗಿ ಈ ಪ್ರದೇಶವು ದೀರ್ಘಕಾಲದವರೆಗೆ ಉದ್ವಿಗ್ನತೆಗೆ ಸಾಕ್ಷಿಯಾಗಿದೆ ಮತ್ತು ಈ ಘಟನೆಯು ಸಮಸ್ಯೆಯನ್ನು ಪ್ರಚೋದಿಸಬಹುದು ಎಂದು ಆಯುಕ್ತರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಕಾನೂನು ಮತ್ತು ಸುವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಲು ನೆರೆಯ ಜಿಲ್ಲೆಯ ಎಸ್ಪಿಯೊಂದಿಗೆ ಮಾತನಾಡಿದ್ದೇನೆ ಎಂದಿದ್ದಾರೆ.
ತನಿಖೆಯ ಮೂಲಕ ಸಮಸ್ಯೆಯನ್ನು ನಿಭಾಯಿಸಬಹುದು. ಅದರ ಬಗ್ಗೆ ಚಿಂತಿಸುವಂಥದ್ದೇನೂ ಇಲ್ಲ. ಎಲ್ಲರೂ ಶಾಂತಿ ಕಾಪಾಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

RELATED ARTICLES

Latest News