ಬೆಂಗಳೂರು, ಮೇ.9- ಭಯೋತ್ಪಾದನೆಯನ್ನು ನಿರಂತರ ಕಾರ್ಯಾಚರಣೆ ಮೂಲಕ ಬುಡಸಮೇತ ಕಿತ್ತುಹಾಕಬೇಕು ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕರೆ ನೀಡಿದ್ದಾರೆ.
ನಗರದಲ್ಲಿಂದು ತಿರಂಗ ಯಾತ್ರೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ವಿಶ್ವವೇ ಭಾರತವನ್ನು ಗಮನಿಸುತ್ತಿದೆ. ಭಾರತ ನಡೆಸುತ್ತಿರುವ ಕಾರ್ಯಾಚರಣೆಯಿಂದ ದೇಶದ ಘನತೆ ಹೆಚ್ಚಿದೆ. ತ್ರಿವರ್ಣ ಧ್ವಜದ ಗೌರವ ಮತ್ತಷ್ಟು ಹೆಚ್ಚಾಗಿದೆ ಎಂದರು.
ಭಾರತದ ಸೇನೆಗೆ ತಕ್ಕ ಸಾಮರ್ಥ್ಯವಿದೆ. ಪಾಕಿಸ್ತಾನಕ್ಕೆ ದಿಟ್ಟ ಉತ್ತರ ನೀಡಲಾಗುತ್ತಿದೆ. ಇದೇ ವೇಳೆ ಭಯೋತ್ಪಾದನೆಯಂತ ಜಾಗತಿಕ ಸಮಸ್ಯೆಯನ್ನು ಭಾರತದಲ್ಲಿ ಬುಡಸಮೇತ ನಿರ್ಮೂಲನೆ ಮಾಡಬೇಕು. ಈ ನಿಟ್ಟಿನಲ್ಲಿ ಶಸ್ತ್ರಾಸ್ತ್ರ ಪಡೆಗಳು ಸೂಕ್ತ ಕ್ರಮ ಕೈಗೊಳ್ಳುತ್ತಿವೆ ಎಂದು ಹೇಳಿದರು.
ಕೇಂದ್ರಸರ್ಕಾರದ ಕ್ರಮಗಳಿಗೆ ಜಾತಿ, ಧರ್ಮ, ಪಕ್ಷಬೇಧ ಮರೆತು ಒಟ್ಟಾಗಿ ಬೆಂಬಲ ವ್ಯಕ್ತಪಡಿಸಬೇಕಿದೆ. ಈ ಕಾರಣಕ್ಕಾಗಿ ಇಂದು ತ್ರಿವರ್ಣ ಧ್ವಜ ಹಿಡಿದು ಕೆ.ಆರ್.ಸರ್ಕಲ್‌ನಿಂದ ಚಿನ್ನಸ್ವಾಮಿ ಸ್ಟೇಡಿಯಂವರೆಗೂ ತಿರಂಗ ಯಾತ್ರೆ ನಡೆಸಲಾಗುತ್ತಿದೆ. ಇದು ಸರ್ಕಾರದ ಕಾರ್ಯಕ್ರಮ. ಅದಕ್ಕಾಗಿ ಎಲ್ಲರೂ ಭಾಗವಹಿಸಬೇಕು ಎಂದು ಕರೆ ನೀಡಲಾಗಿದೆ ಎಂದರು.