ಹೈದ್ರಾಬಾದ್, ಜು.8-ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ಅಧಿಕಾರ ಸ್ವೀಕರಿಸಿದ ಬಳಿಕ ರಾಜ್ಯದಲ್ಲಿ ಅಕ್ರಮ ಗಾಂಜಾ ಬೆಳೆಯನ್ನು ತಡೆಯಲು ಕಠಿಣ ಕ್ರಮ ಕೈಗೊಳ್ಳುವ ಮೂಲಕ ಜನಮನ ಗೆದ್ದಿದ್ದಾರೆ.
ಗಾಂಜಾ ಬೆಳೆದಿದ್ದ 375 ಹಳ್ಳಿಗಳ ಮೇಲೆ ಈಗಲ್ ತಂಡದ ಮೂಲಕ ದಾಳಿ ನಡೆಸಿದ ಗಾಂಜಾ ಬೆಳೆಗಳನ್ನು ನಾಶಪಡಿಸಲಾಗಿದೆ. ಪವನ್ ಕಲ್ಯಾಣ್ ಅವರ ಈ ಯಶಸ್ವಿ ಅಭಿಯಾನಕ್ಕೆ ಜನರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ವೈಎಸ್ ಜಗನ್ ಅಧಿಕಾರದ ಅವಧಿಯಲ್ಲಿ ಆಂಧ್ರ ಪ್ರದೇಶದಲ್ಲಿ ಸಾಕಷ್ಟು ಗಾಂಜಾ ಬೆಳೆಯಲಾಗುತ್ತಿತ್ತು ಎನ್ನಲಾಗಿದೆ. ಪವನ್ ಕಲ್ಯಾಣ್ ಅಧಿಕಾರಕ್ಕೆ ಬರುತ್ತಿದ್ದಂತೆ ಅವರಿಗೆ ಅರಣ್ಯ ಖಾತೆ ನೀಡಲಾಯಿತು. ಹೀಗಾಗಿ, ಅವರು ಗಾಂಜಾ ಬೆಳೆ ತಡೆಗೆ ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿದ್ದಾರೆ.
ಆಂಧ್ರದಲ್ಲಿ ಈ ಮೊದಲು ಸುಮಾರು 11 ಸಾವಿರ ಎಕರೆ ಭಾಗದಲ್ಲಿ ಅಕ್ರಮವಾಗಿ ಗಾಂಜಾ ಬೆಳೆಯಲಾಗುತ್ತಿತ್ತು ಎನ್ನಲಾಗಿತ್ತು. ಇದನ್ನು ಯಾರೂ ತಡೆಯುವವರೇ ಇರಲಿಲ್ಲ. ಪವನ್ ಸರ್ಕಾರ ಇದರ ವಿರುದ್ಧ ಕ್ರಮ ಕೈಗೊಂಡಿದೆ. ಇದಕ್ಕಾಗಿ ಈಗಲ್ ಹೆಸರಿನ ತಂಡ ರಚಿಸಲಾಗಿದೆ. ವಿಶೇಷ ತಂಡ ಈ ಭಾಗದಲ್ಲಿ ಬೆಳೆದ ಗಾಂಜಾ ಬೆಳೆಯನ್ನು ನಾಶ ಮಾಡಿದೆ. ಗಾಂಜಾ ಕೃಷಿಯಲ್ಲಿ ಪ್ರಮುಖವಾಗಿ ತೊಡಗಿಸಿಕೊಂಡಿದ್ದ 375 ಹಳ್ಳಿಗಳ ಮೇಲೆ ಅಧಿಕಾರಿಗಳು ಸಂಪೂರ್ಣ ದಾಳಿ ನಡೆಸಿ ಇದಕ್ಕೆ ತಡೆ ಹಾಕಿದ್ದಾರೆ.
ಸಾಮಾನ್ಯವಾಗಿ ಗಾಂಜಾ ಕೃಷಿ ಜುಲೈ ಅಥವಾ ಆಗಸ್ಟ್‌ನಲ್ಲಿ ಪ್ರಾರಂಭವಾಗುತ್ತಿತ್ತು. ಆದರೆ ಹೊಸ ಸರ್ಕಾರದ ಮುಂಜಾಗ್ರತಾ ಕ್ರಮಗಳಿಂದ ಕಳೆದ ಜುಲೈ ಮತ್ತು ಆಗಸ್ಟ್‌ನಲ್ಲಿ ಬಹುತೇಕ ಎಲ್ಲಾ ಬೆಳೆಗಳು ನಾಶವಾದವು. ಈ ಬಾರಿಯೂ ಹಾಗೆಯೇ ಮಾಡಲಾಗುತ್ತಿದೆ.ರಾಜ್ಯದ ಜನತೆ ಮಾದಕ ವ್ಯಸನಗಳಿಗೆ ಒಳಗಾಗುತ್ತಿರುವ ಬಗ್ಗೆ ಪವನ್ ಕಲ್ಯಾಣ್ ಸಾಕಷ್ಟು ಬಾರಿ ಆತಂಕ ಹೊರಹಾಕಿದ್ದರು. ಈ ಕಾರಣದಿಂದಲೇ ಅವರು ನಿರಂತರವಾಗಿ ಈ ಚಟುವಟಿಕೆಗಳ ವಿರುದ್ಧ ಕ್ರಮ ಕೈಗೊಳ್ಳುತ್ತಾ ಬರುತ್ತಿದ್ದಾರೆ.
ಸದ್ಯ ಪವನ್ ಕಲ್ಯಾಣ್ ಕ್ರಮಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅವರು ನಿಜವಾದ ಒಜಿ ಎಂದು ಅನೇಕರು ಹೇಳಿದ್ದಾರೆ. ಸಿನಿಮಾ ವಿಚಾರಕ್ಕೆ ಬರೋದಾದರೆ ಪವನ್ ಕಲ್ಯಾಣ್ ಅವರು ಹರಿ ಹರ ವೀರ ಮಲ್ಲು, ಒಜಿ ಮೊದಲಾದ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ.
- ನೀರಾವರಿ ಯೋಜನೆಗಳ ಬಗ್ಗೆ ಕೇಂದ್ರ ಸಚಿವರೊಂದಿಗೆ ಡಿಸಿಎಂ ಚರ್ಚೆ
- ಇಡಿ ಯಿಂದ ಡಿ.ಕೆ.ಸುರೇಶ್ ವಿಚಾರಣೆ
- ಇಂದು ಅಮರನಾಥನ ದರ್ಶನಕ್ಕೆ ಹೊರಟ 7500 ಭಕ್ತರು
- ಗಾಂಜಾ ನಾಶಕ್ಕೆ ಟೊಂಕ ಕಟ್ಟಿ ನಿಂತ ಆಂಧ್ರ ಡಿಸಿಎಂ ಪವನ್ ಕಲ್ಯಾಣ್
- ಬಿಹಾರ ಮಹಿಳೆಯರಿಗೆ ಮಾತ್ರ ಉದ್ಯೋಗ ಮೀಸಲಾತಿ : ನಿತೀಶ್ ಕುಮಾರ್ ಘೋಷಣೆ