ಬೆಂಗಳೂರು,ಸೆ.30- ಕಳೆದ ಎರಡು ವರ್ಷಗಳಿಂದಲೂ ಸಾಹಿತಿಗಳಿಗೆ ಜೀವ ಬೆದರಿಕೆ ಹಾಕುತ್ತಿದ್ದ ಆರೋಪಿ ಶಿವಾಜಿರಾವ್ ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ರಾಜ್ಯದ ಸಾಹಿತಿಗಳಾದ ಬಂಜಗೆರೆ ಜಯಪ್ರಕಾಶ್, ಕುಂ.ವೀರಭದ್ರಪ್ಪ, ಬಿ.ಟಿ.ಲಲಿತಾನಾಯಕ್, ವಸುಂಧರಾ ಭೂಪತಿ ಸೇರಿದಂತೆ 7 ಕ್ಕೂ ಹೆಚ್ಚು ಸಾಹಿತಿಗಳಿಗೆ ಪದೇಪದೇ ಜೀವಬೆದರಿಕೆಯ
ಪತ್ರಗಳು ಬರುತ್ತಿದ್ದವು. ಈ ಬಗ್ಗೆ ಚಿತ್ರದುರ್ಗ, ಕೊಟ್ಟೂರು, ಸಂಜಯನಗರ ಪೊಲೀಸ್ ಠಾಣೆಗಳಲ್ಲಿ ತಲಾ ಒಂದು, ಹಾರೋಹಳ್ಳಿ, ಬಸವೇಶ್ವರನಗರ ಪೊಲೀಸ್ ಠಾಣೆಗಳಲ್ಲಿ ತಲಾ ಎರಡು ಪ್ರಕರಣಗಳು ಸೇರಿ ಒಟ್ಟು 7 ಪ್ರಕರಗಣಗಳು ದಾಖಲಾಗಿದ್ದವು.
ಈ ಹಿಂದೆ ರಾಜ್ಯದಲ್ಲಿ ಸಾಹಿತಿ ಎಂ.ಎಂ.ಕಲಬುರ್ಗಿ, ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯ ಹಿನ್ನೆಲೆಯಲ್ಲಿ ಸಾಹಿತಿಗಳಿಗೆ ಬರುತ್ತಿರುವ ಬೆದರಿಕೆ ಪತ್ರ ಆತಂಕ ಮೂಡಿಸಿತ್ತು. ಖುದ್ದು ಮುಖ್ಯಮಂತ್ರಿ, ಗೃಹಸಚಿವರುಗಳೇ ಸಾಹಿತಿಗಳೊಂದಿಗೆ ಸಭೆ ನಡೆಸಿ ಸಮಾಲೋಚಿಸಿದ್ದರು. ಪ್ರಕರಣವನ್ನು ಕಳೆದ ತಿಂಗಳು ಸಿಸಿಬಿ ತನಿಖೆಗೆ ವಹಿಸಲಾಗಿತ್ತು.
ಶೀಘ್ರದಲ್ಲೇ ಪತನವಾಗಲಿದೆ ಗ್ಯಾರಂಟಿ ಸರ್ಕಾರ : ಕುತೂಹಲ ಕೆರಳಿಸಿದ ಹೆಚ್ಡಿಕೆ ಹೇಳಿಕೆ
ಪತ್ರದ ಹಸ್ತಾಕ್ಷರ ಹಾಗೂ ಪೊಸ್ಟ್ ಮಾಡಲಾಗಿದ್ದ ಸ್ಥಳಗಳ ಜಾಡು ಹಿಡಿದ ಸಿಸಿಬಿ ಪೊಲೀಸರು ಸೆ.28 ರಂದು ಆರೋಪಿಯನ್ನು ದಾವಣಗೆರೆ ಯಲ್ಲಿ ಬಂಸುವಲ್ಲಿ ಯಶಸ್ವಿಯಾಗಿದ್ದಾರೆ. 7 ಪ್ರಕರಣಗಳಲ್ಲಷ್ಟೇ ಅಲ್ಲದೆ, ಆರೋಪಿ ವಿರುದ್ಧ ಈ ಮೊದಲು ಎರಡು ಪ್ರಕರಣಗಳು ದಾಖಲಾಗಿದ್ದ ಮಾಹಿತಿ ಇದೆ.
7 ಮಂದಿಯ ಜೊತೆಗೆ ಇನ್ನೂ ಹಲವು ಸಾಹಿತಿಗಳಿಗೆ ಆರೋಪಿ ಬೆದರಿಕೆ ಪತ್ರ ಬರೆದಿರುವ ಬಗ್ಗೆ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ. ಈತ ಹಿಂದೂ ಸಂಘಟನೆಯೊಂದರ ಕಾರ್ಯಕರ್ತ ಎಂದು ಹೇಳಲಾಗಿದೆ.
ಆರೋಪಿಯ ಕೃತ್ಯಕ್ಕೆ ಯಾರು ಸಹಕಾರ ನೀಡಿದ್ದಾರೆ, ಇವರ ಯೋಜನೆಯೇನು, ಇದಕ್ಕಾಗಿ ಅವರು ಮಾಡಿಕೊಂಡಿರುವ ಸಿದ್ಧತೆಗಳೇನು ಹಾಗೂ ಇತರ ರೂಪುರೇಷೆಗಳ ಬಗ್ಗೆ ವಿಚಾರಣೆ ನಡೆಸುವ ಸಲುವಾಗಿ ಶಿವಾಜಿರಾವ್ನನ್ನು 13 ದಿನಗಳ ಕಾಲ ಪೊಲೀಸ್ ವಶಕ್ಕೆ ಪಡೆದುಕೊಳ್ಳಲಾಗಿದೆ.