ಬೆಂಗಳೂರು,ಜು.5- ವಾಲೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅವ್ಯವಹಾರದ ಬಳಿಕ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ, ಬೊಕ್ಕಸದಿಂದ ಹಣ ಬಿಡುಗಡೆಗೆ ಕಟ್ಟುನಿಟ್ಟಿನ ಮಾರ್ಗ ಸೂಚಿಗಳನ್ನು ಜಾರಿಗೊಳಿಸಿದೆ.ಜೊತೆಯಲ್ಲೇ ಕೇಂದ್ರ ಪುರಸ್ಕೃತ ಯೋಜನೆಗಳಿಗೂ ಹಣ ಬಿಡುಗಡೆಗೆ ಮುನ್ನ ರಾಜ್ಯ ಆರ್ಥಿಕ ಇಲಾಖೆಯ ಪೂರ್ವಾನುಮತಿ ಕಡ್ಡಾಯ ಎಂಬ ಸುತ್ತೋಲೆ ರವಾನಿಸಲಾಗಿದೆ.ಆರ್ಥಿಕ ಇಲಾಖೆಯ ಕಾರ್ಯದರ್ಶಿ ಡಾ.ಪಿ.ಸಿ.ಜಾಫರ್ ಅವರು 16 ಪುಟಗಳ ಸುತ್ತೋಲೆಯನ್ನು ಎಲ್ಲಾ ಇಲಾಖೆಗಳ ಮುಖ್ಯಸ್ಥರಿಗೆ, ನಿಗಮ ಮಂಡಳಿಗಳು, ಅರೆ ಸರ್ಕಾರಿ ಸಂಸ್ಥೆಗಳು, ವಿಶ್ವವಿದ್ಯಾನಿಲಯಗಳ ಪ್ರಮುಖರಿಗೆ ಕಳುಹಿಸಿದ್ದಾರೆ.
ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಈ ಮೊದಲು ಪೂರ್ವ ನಿರ್ಧರಿತ ಅನುಮೋದನೆ ಆಧರಿತವಾಗಿ ಹಣ ಬಿಡುಗಡೆಯಾಗುತ್ತಿತ್ತು. ಅದಕ್ಕೆ ಕಡಿವಾಣ ಹಾಕಿರುವುದು ಚರ್ಚೆಗೆ ಗ್ರಾಸವಾಗಿದೆ. ಕೇಂದ್ರ ಸರ್ಕಾರದ ಕಿಸಾನ್ ಸಮಾನ್, ಫಸಲ್ ಭೀಮಾ ಸೇರಿದಂತೆ ಹಲವು ಯೋಜನೆಗಳಿಗೆ ಹಣ ಬಿಡುಗಡೆಗೂ ಮುನ್ನ ಆರ್ಥಿಕ ಇಲಾಖೆ ಅನುಮತಿ ಅಗತ್ಯ ಎಂದು ಆದೇಶಿಸಲಾಗಿದೆ.
ರಾಜ್ಯ ಸರ್ಕಾರದ ವಿವಿಧ ನಿಗಮಗಳು, ಕೆಆರ್‌ಐಡಿಎಲ್‌ನಂತಹ ಸಂಸ್ಥೆಗಳು, ಗಂಗಕಲ್ಯಾಣ, ಸ್ವಾವಲಂಬನೆ ಯೋಜನೆಯಂತಹ ಕಾರ್ಯಕ್ರಮಗಳಿಗೆ ಹಣ ಬಿಡುಗಡೆ ಮಾಡುವ ಮುನ್ನ ಆರ್ಥಿಕ ಇಲಾಖೆಯ ಪೂರ್ವಾನುಮತಿ ಪಡೆಯುವಂತೆ ತಾಕೀತು ಮಾಡಲಾಗಿದೆ.
ಕೆಲವು ಯೋಜನೆಗಳಿಗೆ ಅದರಲ್ಲೂ 10 ಕೋಟಿಗಿಂತ ಕಡಿಮೆ ವೆಚ್ಚದ ಕಾರ್ಯಕ್ರಮಗಳಿಗೆ ಕರ್ನಾಟಕ ಪಾರದರ್ಶಕ ಅಧಿನಿಯಮ ಪಾಲನೆ ಮಾಡಿ ಹಣ ಬಿಡುಗಡೆಗೆ ಅವಕಾಶ ಕಲ್ಪಿಸಲಾಗಿದೆ.
ಷೇರು ಬಂಡವಾಳ ಹೂಡಿಕೆ ಮತ್ತು ಸಾಲ ಪಾವತಿ ವಿಚಾರಗಳಿಗೂ ನಿಯಂತ್ರಣ ಹೇರಲಾಗಿದೆ. ಸರ್ಕಾರದ ಬಹುನಿರೀಕ್ಷಿತ ಶಕ್ತಿ, ಯುವನಿಧಿ, ಅನ್ನಭಾಗ್ಯ, ಗೃಹಜ್ಯೋತಿ ಮತ್ತು ಗೃಹಲಕ್ಷ್ಮಿ ಯೋಜನೆಗಳಿಗೆ 52 ಸಾವಿರ ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಇವುಗಳಡಿ ಹಣ ಬಿಡುಗಡೆ ಮಾಡುವಾಗ ಆರ್ಥಿಕ ಇಲಾಖೆಯಿಂದ ಕಡತದಲ್ಲಿ ಪೂರ್ವಾನುಮೋದನೆ ಪಡೆಯಬೇಕೆಂದು ಸೂಚಿಸಲಾಗಿದೆ.
ಎಸ್‌ಸಿಎಸ್‌ಪಿ, ಟಿಎಸ್‌ಪಿ ಯೋಜನೆಯಡಿ ಹಣ ಬಿಡುಗಡೆಯಾಗುವ ಹಿಂದಿನ ಪಾವತಿಯಲ್ಲಿ ಶೇ.75ರಷ್ಟು ಬಳಕೆಯಾಗಿರುವುದನ್ನು ಖಾತ್ರಿಪಡಿಸಿಕೊಳ್ಳಬೇಕು, ಈ ವರ್ಷದ ಜುಲೈನಿಂದ ಸೆಪ್ಟೆಂಬರ್‌ವರೆಗೆ ಆಯವ್ಯಯ ಅಂದಾಜಿನ 12/1 ಭಾಗವನ್ನು ಪ್ರತಿ ತಿಂಗಳು ಬಿಡುಗಡೆ ಮಾಡಬೇಕು. ಬಂಡವಾಳ ವೆಚ್ಚದ ಹಣ ಬಿಡುಗಡೆ ಸಂದರ್ಭದಲ್ಲಿ ಸರ್ಕಾರ ಅನುಮೋದಿಸಿದ ಯೋಜನೆಗಳಿಗೆ ಮಾತ್ರ ಅವಕಾಶ ನೀಡಬೇಕು.
ಆರ್ಥಿಕ ಇಲಾಖೆಯ ಅಂಕಿತ ಪತ್ರ ಇಲ್ಲದೆ ಆಯಾ ಇಲಾಖೆಗಳ ಬಿಲ್‌ಗಳನ್ನು ನೇರವಾಗಿ ಪಾವತಿಸತಕ್ಕದ್ದಲ್ಲ ಎಂದು ಸೂಚನೆ ನೀಡಲಾಗಿದೆ. ರಾಜ್ಯದಲ್ಲಿ ಪಂಚಖಾತ್ರಿ ಯೋಜನೆಗಳ ಜಾರಿಯ ಬಳಿಕ ಆರ್ಥಿಕವಾಗಿ ಸಾಕಷ್ಟು ಹಿನ್ನಡೆಯಾಗಿದೆ. ಸಂಪನೂಲ ಕೊರತೆ ಇದೆ ಎಂಬ ಆರೋಪಗಳನ್ನು ವಿರೋಧ ಪಕ್ಷಗಳು ಪದೇ ಪದೇ ಮಾಡುತ್ತಲೇ ಇವೆ. ಇದಕ್ಕೆ ಪೂರಕ ಎಂಬಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧೀನದಲ್ಲಿರುವ ಆರ್ಥಿಕ ಇಲಾಖೆಯು ಪ್ರತಿಯೊಂದು ವಹಿವಾಟಿನ ಮೇಲೂ ನಿಗಾ ಇಡುವ ಆದೇಶ ಹೊರಡಿಸಿರುವುದು ಗಮನ ಸೆಳೆದಿದೆ.
ಮತ್ತೊಂದೆಡೆ 14 ಬಜೆಟ್‌ಗಳನ್ನು ಮಂಡಿಸಿ ಅನುಭವಿಯಾಗಿರುವ ಸಿದ್ದರಾಮಯ್ಯನವರು, ಹಣಕಾಸು ವ್ಯವಸ್ಥೆಯಲ್ಲಿ ಶಿಸ್ತು ತರಲು ಈ ರೀತಿಯ ಕ್ರಮಗಳನ್ನು ಕೈಗೊಂಡಿರುವುದು ಸ್ವಾಗತಾರ್ಹ. ಬೇಕಾಬಿಟ್ಟಿ ಹಣ ಬಿಡುಗಡೆಯಾಗಿ ದುರ್ಬಳಕೆಯಾಗುವುದು ತಪ್ಪುತ್ತದೆ. ಜನರ ತೆರಿಗೆ ಹಣದ ರಕ್ಷಣೆ ಸರ್ಕಾರದ ಹೊಣೆ ಎಂಬ ಸಮರ್ಥನೆಗಳು ಕೇಳಿಬರುತ್ತಿದೆ.