Wednesday, February 5, 2025
Homeರಾಜಕೀಯ | Politicsತಾರಕಕ್ಕೇರಿದ ಬಿಜೆಪಿ ಅಧ್ಯಕ್ಷ ಗಾದಿ ಕದನ, ಮುಂದುವರೆಯುವರೇ ವಿಜಯೇಂದ್ರ..?

ತಾರಕಕ್ಕೇರಿದ ಬಿಜೆಪಿ ಅಧ್ಯಕ್ಷ ಗಾದಿ ಕದನ, ಮುಂದುವರೆಯುವರೇ ವಿಜಯೇಂದ್ರ..?

The battle for the BJP president's seat has reached a critical stage, will Vijayendra continue?

ಬೆಂಗಳೂರು, ಫೆ.4- ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದ ಬದಲಾವಣೆ ವಿಚಾರ ನಿರ್ಣಾಯಕ ಹಂತ ತಲು ಪಿದ್ದು, ಹಾಲಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮುಂದುವರೆಯಲಿದ್ದಾರೆಯೇ? ಇಲ್ಲವೆ ಭಿನ್ನಮತೀಯರ ಪಟ್ಟಿನಂತೆ ಬದಲಾಗಲಿದ್ದಾರೆಯೇ ಎಂಬುದು ತೀವ್ರ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

ಶತಾಯ ಗತಾಯ ವಿಜಯೇಂದ್ರ ಅವರ ಬದಲಾವಣೆಗೆ ಪಟ್ಟು ಹಿಡಿದು ದೆಹಲಿಯಲ್ಲಿ ಬೀಡು ಬಿಟ್ಟಿರುವ ಭಿನ್ನಮತೀಯರು ಪಕ್ಷದ ರಾಷ್ಟ್ರೀಯ ನಾಯಕರನ್ನು ಭೇಟಿಯಾಗುವ ಧಾವಂತದಲ್ಲಿದ್ದಾರೆ.

ಕಳೆದ ರಾತ್ರಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಿ ರಾಜ್ಯದ ವಸ್ತು ಸ್ಥಿತಿಯನ್ನು ವಿವರಿಸಿದ್ದೇನೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಆದರೆ, ಅವರು ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿಯಾಗಿರುವುದಕ್ಕೆ ನಿದರ್ಶನವಾಗಿ ಫೋಟೋಗಳು ಲಭ್ಯವಿಲ್ಲದಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಮಂಗಳವಾರ ಬೆಳಿಗ್ಗೆ ಸಂಸತ್ತಿನಲ್ಲಿ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ ಅವರನ್ನು ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿ , ಕುಮಾರ್ ಬಂಗಾರಪ್ಪ, ಶ್ರೀಮಂತಪಾಟೀಲ್ ಸೇರಿದಂತೆ ಕೆಲವರು ಭೇಟಿಯಾಗಿದ್ದರು.

ಉಳಿದಂತೆ ಭಿನ್ನಮತೀಯರು,ರಾಜ್ಯ ಚುನಾವಣಾ ಉಸ್ತುವಾರಿ ಶಿವರಾಜ್ಸಿಂಗ್ ಚೌವ್ಹಾಣ್ ಅವರನ್ನು ಭೇಟಿ ಮಾಡಲು ಸಮಯಾವಕಾಶ ಕೇಳಿದ್ದರಾದರೂ ಭೇಟಿಗೆ ಅವಕಾಶ ನೀಡಿಲ್ಲ. ರಾತ್ರಿ ವೇಳೆಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತಿತರರು ಭಿನ್ನಮತೀಯರನ್ನು ಸೇರಿಕೊಂಡಿದ್ದು, ವರಿಷ್ಠರ ಭೇಟಿಗೆ ಚಾತಕ ಪಕ್ಷಿಯಂತೆ ಎದುರು ನೋಡುತ್ತಿದ್ದಾರೆ.

ಈಗಾಗಲೇ ಪಕ್ಷದ ಹೈಕಮಾಂಡ್ ಮುಂದೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಬಣ ಹಲವು ಬೇಡಿಕೆಯನ್ನು ಇಟ್ಟಿದ್ದಾರೆ. ಇದರ ಜೊತೆಗೆ 23 ಜಿಲ್ಲಾಧ್ಯಕ್ಷರ ಆಯ್ಕೆ ಘೋಷಣೆಯನ್ನು ರದ್ದು ಮಾಡಬೇಕು, ರಾಜ್ಯಾಧ್ಯಕ್ಷರ ಚುನಾವಣೆ ನಡೆಸಬೇಕೆಂಬ ಒತ್ತಡ ಹಾಗೂ ವಿಜಯೇಂದ್ರರನ್ನ ಪಟ್ಟದಿಂದ ಇಳಿಸಬೇಕು ಎಂಬ ಬೇಡಿಕೆಯನ್ನ ಹೈಕಮಾಂಡ್ ಮುಂದೆ ಇಡಲಿದ್ದಾರೆ. ರಾಜ್ಯಾಧ್ಯಕ್ಷ ಸ್ಥಾನದ ವಿಚಾರದಲ್ಲಿ ಚುನಾವಣೆ ನಡೆಯುವ ಬಗ್ಗೆ ಸ್ಪಷ್ಟತೆ ಇಲ್ಲ. ಹೀಗಾಗಿ ಬಸನಗೌಡ ಪಾಟೀಲ್ ಯತ್ನಾಳ್ ಅವರ ಬಣ ಹೈಕಮಾಂಡ್ ನಾಯಕರ ಭೇಟಿಗೆ ತೆರಳಿದ್ದು, ಎರಡು ಮೂರು ದಿನ ದೆಹಲಿಯಲ್ಲೇ ಠಿಕಾಣಿ ಹೂಡಲಿದ್ದಾರೆ.

ದೆಹಲಿಗೆ ತೆರಳಿರುವ ತಂಡದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ, ಬಿ.ಪಿ .ಹರೀಶ್, ಜಿ.ಎಂ.ಸಿದ್ಧೇಶ್ವರ ಸೇರಿ ಪ್ರಮುಖ ನಾಯಕರು ಸದ್ಯ ರಾಷ್ಟ್ರ ರಾಜಧಾನಿಯಲ್ಲಿ ಬೀಡು ಬಿಟ್ಟಿದ್ದಾರೆ. ಈ ತಂಡ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ರಾಜ್ಯದ ವಸ್ತು ಸ್ಥಿತಿಯನ್ನು ವಿವರಿಸಲಿದೆ.

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದ ರೆಬೆಲ್ ಟೀಂಗೆ ಇನ್ನೂ ವರಿಷ್ಠರ ಭೇಟಿಗೆ ಅವಕಾಶ ಸಿಕ್ಕಿಲ್ಲ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡುವುದು ಈ ತಂಡದ ಉದ್ದೇಶವಾಗಿದೆ. ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ವರಿಷ್ಠರಿಗೆ ದೂರು ನೀಡುವ ಸಾಧ್ಯತೆಯೂ ಇದೆ.

ರಾಜ್ಯ ಬಿಜೆಪಿಯಲ್ಲಿ ಹೊಂದಾಣಿಕೆ ರಾಜಕಾರಣ ನಡೆಯುತ್ತಿದೆ. ಆಡಳಿತ ಪಕ್ಷ ಕಾಂಗ್ರೆಸ್ ಜೊತೆಗೆ ರಾಜ್ಯದ ಕೆಲವು ನಾಯಕರು ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಸರ್ಕಾರದ ವಿರುದ್ಧ ನಿರೀಕ್ಷಿತ ಪ್ರಮಾಣದಲ್ಲಿ ಹೋರಾಟ ನಡೆಯುತ್ತಿಲ್ಲ. ಬಿಜೆಪಿ ರಾಜ್ಯಾಧಕ್ಷ ಬಿ.ವೈ.ವಿಜಯೇಂದ್ರ ಅವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ತಮ್ಮ ಆಪ್ತರನ್ನಷ್ಟೇ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ನಡೆಸುತ್ತಿದ್ದಾರೆ. ಇದರಿಂದ ಹಲವು ಹಿರಿಯ ನಾಯಕರಿಗೆ ಬೇಸರ ಉಂಟಾಗಿದೆ. ಇದರ ಪರಿಣಾಮ ಪಕ್ಷದ ಮೇಲೂ ಆಗುತ್ತಿದೆ.

ಉಪ ಚುನಾವಣೆಯಲ್ಲಿ ಸೋಲು, ಕಳೆದ ಲೋಕಸಭೆ ಚುನಾವಣೆಯಲ್ಲಿ ಆದ ಹಿನ್ನಡೆಗೆ ಬಿಜೆಪಿಯ ಕೆಲವು ನಾಯಕರ ಹೊಂದಾಣಿಕೆ ರಾಜಕಾರಣವೇ ಕಾರಣ. ಹೀಗಾಗಿ ಇದಕ್ಕೆ ಅವಕಾಶ ಕೊಡದಂತೆ ತಡೆ ಹಾಕಬೇಕು. ವಿಜಯೇಂದ್ರ ಬದಲಾಗಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ವ್ಯಕ್ತಿಯನ್ನು ನಾಯಕರನ್ನಾಗಿ ಆಯ್ಕೆ ಮಾಡಬೇಕು. ಪಕ್ಷದಲ್ಲೂ ಅನೇಕ ಸಮರ್ಥರಿದ್ದಾರೆ. ಅವರಿಗೆ ಅವಕಾಶ ನೀಡಬೇಕು ಎನ್ನುವುದು ಭೀನ್ನಮತೀಯರ ಒತ್ತಾಯವಾಗಿದೆ.

RELATED ARTICLES

Latest News