ಬೆಂಗಳೂರು,ಫೆ.7- ಕೊಳೆತ ಶವದ ಗುರುತು ಇದೀಗ ಪತ್ತೆಯಾಗಿದ್ದು, ಕೇರಳದ ಕುಖ್ಯಾತ ಕಳ್ಳ ಎಂಬುದು ಗೊತ್ತಾಗಿದೆ. ಡಿಸೆಂಬರ್ 24ರಂದು ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯ ಕನಕಪುರ ರಸ್ತೆಯ ಕೋಣನಕುಂಟೆ ಕ್ರಾಸ್ನ ಕಾರ್ಖಾನೆಯೊಂದರ ಬೇಸ್ಮೆಂಟ್ನಲ್ಲಿ ವ್ಯಕ್ತಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆದರೆ ಈ ವ್ಯಕ್ತಿ ಯಾರೆಂಬುದು ಗೊತ್ತಾಗಿರಲಿಲ್ಲ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಇದೀಗ ಶವದ ಗುರುತು ಪತ್ತೆಹಚ್ಚಿದ್ದಾರೆ. ಈತ ಕೇರಳದ ಕುಖ್ಯಾತ ಕಳ್ಳ ವಿಷ್ಣು ಪ್ರಶಾಂತ್ ಎಂಬುದು ಗೊತ್ತಾಗಿದೆ. ಈತನ ಮೇಲೆ 30ಕ್ಕೂ ಹೆಚ್ಚು ಪ್ರಕರಣಗಳಿವೆ.
ಕಳೆದ ನವೆಂಬರ್ನಲ್ಲಿ ಕೇರಳದ ಜೈಲಿನಿಂದ ಬಿಡುಗಡೆಯಾಗಿದ್ದ ಈಗ ತಮಿಳುನಾಡಿಗೆ ಹೋಗಿ ನಂತರ ಬೆಂಗಳೂರಿಗೆ ಬಂದು ಕೋಣನಕುಂಟೆ ಸುತ್ತಮುತ್ತ ಓಡಾಡುತ್ತಿದ್ದ ಎಂಬುದು ಗೊತ್ತಾಗಿದೆ.
ಈತನ ಮೈಮೇಲೆ ಯಾವುದೇ ಗಾಯದ ಗುರುತುಗಳಿಲ್ಲ. ಶವ ಕೊಳೆತಿದ್ದು, ಸಾವು ಹೇಗಾಗಿದೆ ಎಂಬುದು ಮರಣೋತ್ತರ ಪರೀಕ್ಷೆಯ ವರದಿಯಿಂದಷ್ಟೇ ಗೊತ್ತಾಗಬೇಕಿದೆ.