ನವದೆಹಲಿ, ಸೆ.8- ಯಾವುದೇ ಕಾರಣಕ್ಕೂ ದುರ್ಘಟನೆಗಳಿಗೆ ಅವಕಾಶ ಮಾಡಿಕೊಡಬೇಡಿ, ಶಾಂತಿ ಕಾಪಾಡಿ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್ಡಿ ಕುಮಾರಸ್ವಾಮಿ ಅವರು ಮದ್ದೂರಿನ ಜನತೆಯಲ್ಲಿ ಮನವಿ ಮಾಡಿದರು.
ಮದ್ದೂರಿನಲ್ಲಿ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ಸಂದರ್ಭದಲ್ಲಿ ನಡೆದ ಕಲ್ಲು ತೂರಾಟದ ಘಟನೆಗೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮದ್ದೂರಿನಲ್ಲಿ ಪ್ರತಿಭಟನೆ ನಡೆಯುತ್ತಿರುವುದನ್ನು ನೋಡಿದರೆ ಕಾಂಗ್ರೆಸ್ ಸರ್ಕಾರದ ಪತನ ಶುರುವಾಗಿದೆ ಎಂದರು.
ನಿನ್ನೆ ರಾತ್ರಿ ಮದ್ದೂರಿನಲ್ಲಿ ಗಣೇಶ ಮೂರ್ತಿ ಮೆರವಣಿಗೆ ವೇಳೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಈ ಘಟನೆ ಕುರಿತಂತೆ ಮಂಡ್ಯ ಜಿಲ್ಲಾ ಎಸ್ಪಿ ಹಾಗೂ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿರುವುದಾಗಿ ಅವರು ಹೇಳಿದರು.
ಕಳೆದ ವರ್ಷವೂ ಕೂಡ ಇದೇ ರೀತಿ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಡೆದಿತ್ತು. ಮತ್ತೆ ಅಂತಹ ಘಟನೆ ಪುನರಾವರ್ತನೆಯಾಗಿದೆ. ಇದನ್ನು ಹಿಂಸೆಯ ಕಡೆಗೆ ತೆಗೆದುಕೊಡು ಹೋಗಬೇಡಿ ಎಂದು ಅವರು ಮಂಡ್ಯ ಜಿಲ್ಲೆಯ ಜನರಲ್ಲಿ ಮನವಿ ಮಾಡಿದರು.
ಶಾಂತಿಯ ತೋಟಕ್ಕೆ ಬೆಂಕಿ ಹಚ್ಚುವ ಕೆಲಸವಾಗುತ್ತಿದೆ. ಮಂಡ್ಯ ಜಿಲ್ಲೆಯಲ್ಲಿ ಇಷ್ಟು ದೊಡ್ಡಮಟ್ಟದಲ್ಲಿ ಇಂಥ ಘಟನೆಗಳು ನಡೆಯಲು ಕಾಂಗ್ರೆಸ್ ಸರ್ಕಾರ ಕಾರಣ ಎಂದು ಅವರು ಆರೋಪಿಸಿದರು.
ಕಾಂಗ್ರೆಸ್ ಸರ್ಕಾರದ ಆಡಳಿತ ಹಾಗೂ ನಡವಳಿಕೆ ಕಾರಣದಿಂದ ಹಿಂದೂ ಸಮಾಜದಲ್ಲಿ ದೊಡ್ಡ ಮಟ್ಟದಲ್ಲಿ ಅಸಮಾಧಾನ ಆಗುತ್ತಿದೆ. ರಾಜ್ಯದ ಮೂಲೆ ಮೂಲೆಗಳಲ್ಲಿ ಇಂತಹ ಘಟನೆಗಳು ಉಂಟಾಗಲು ಕಾಂಗ್ರೆಸ್ ಆಡಳಿತವೇ ಕಾರಣ. ಈ ಪ್ರಕರಣವನ್ನು ದೊಡ್ಡ ಮಟ್ಟದಲ್ಲಿ ಹಿಂಸೆಗೆ ಒಳಗಾಗುವ ರೀತಿಗೆ ತೆಗೆದುಕೊಂಡು ಹೋಗಲು ಅವಕಾಶ ಕೊಡಬೇಡಿ ಎಂದು ಮಂಡ್ಯ ಜಿಲ್ಲೆಯ ಹಾಗೂ ಮದ್ದೂರಿನ ಜನರಲ್ಲಿ ಕೇಳಿಕೊಳ್ಳುತ್ತೇನೆ ಎಂದು ಅವರು ತಿಳಿಸಿದ್ದಾರೆ.