Friday, November 22, 2024
Homeರಾಜಕೀಯ | Politicsರಾಜ್ಯಪಾಲರು ನ್ಯಾಯ ಕೊಡುವ ಭರವಸೆ ನೀಡಿದ್ದಾರೆ : ಡಿಕೆಶಿ

ರಾಜ್ಯಪಾಲರು ನ್ಯಾಯ ಕೊಡುವ ಭರವಸೆ ನೀಡಿದ್ದಾರೆ : ಡಿಕೆಶಿ

The governor has promised justice:

ಬೆಂಗಳೂರು,ಆ.31- ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರು ನಮ ಮನವಿಯನ್ನು ಆಲಿಸಿದ್ದು, ನ್ಯಾಯ ಕೊಡುವ ಭರವಸೆ ನೀಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷರಾದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

ಕಾಂಗ್ರೆಸ್ ನಾಯಕರ ನಿಯೋಗದೊಂದಿಗೆ ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿಯೊಬ್ಬರ ಹಾಗೂ ಮೂವರು ಮಾಜಿ ಸಚಿವರ ವಿರುದ್ಧ ಅಭಿಯೋಜನೆ ಕೋರಿ ಬಂದಿರುವ ಮನವಿಗಳಿಗೆ ಕಾನೂನು ಬದ್ದವಾಗಿ, ನ್ಯಾಯಬದ್ಧವಾಗಿ ಸಮಾನತೆಯಿಂದ ಅನುಮತಿ ನೀಡಬೇಕೆಂದು ವಿನಂತಿಸಿದ್ದೇವೆ ಎಂದರು.

ರಾಜಭವನದಲ್ಲಿ ಅಂತಹ ಯಾವುದೇ ಪ್ರಕರಣಗಳು ಬಾಕಿ ಇಲ್ಲ. ವಿಲೇವಾರಿ ಮಾಡಿರುವುದಾಗಿ ರಾಜ್ಯಪಾಲರು ಹೇಳಿದ್ದಾರೆ. ಅವರು ಸ್ಪಷ್ಟನೆ ಕೇಳಿರಬಹುದು. ಈ ಬಗ್ಗೆ ನಾವು ಕೂಡ ಮರುಪರಿಶೀಲನೆ ಮಾಡುತ್ತೇವೆ. ರಾಜ್ಯಪಾಲರು ಅನುಮತಿ ಕೊಡಬೇಕಾಗುತ್ತದೆ. ಕೊಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

ರಾಜಭವನ ಪಕ್ಷಾತೀತವಾಗಿ ನಡೆದುಕೊಳ್ಳಬೇಕು ಎಂಬ ಉದ್ದೇಶದಿಂದ ನಮ ಕರ್ತವ್ಯವನ್ನು ನಾವು ಮಾಡಿದ್ದೇವೆ. ರಾಜ್ಯದ ಜನತೆಯ ಹಿತಕ್ಕಾಗಿ ನಾವು ಹೋರಾಟ ಮಾಡಿದ್ದೇವೆ. ನಮ ಕೋರಿಕೆಗೆ ಸಂಬಂಧಿಸಿದಂತೆ ಸ್ಪಂದಿಸುತ್ತಾರೆ ಎಂಬ ವಿಶ್ವಾಸದೆ ಎಂದರು.

ಮಾಜಿ ಮುಖ್ಯಮಂತ್ರಿಯೊಬ್ಬರ ವಿಚಾರದಲ್ಲಿ ಎಸ್ಐಟಿ ಹಾಗೂ ಲೋಕಾಯುಕ್ತದಿಂದ ತನಿಖೆಯಾಗಿದ್ದು, ಚಾರ್ಜ್ಶೀಟ್ ಸಲ್ಲಿಸಲು ಅಭಿಯೋಜನೆಗೆ ರಾಜ್ಯಪಾಲರ ಅನುಮತಿಯನ್ನು ಕೋರಲಾಗಿದೆ. ಅದೇ ರೀತಿ ಮೂವರು ಸಚಿವರ ಮೇಲೆ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಅಭಿಯೋಜನೆಗೆ ಅನುಮತಿ ಕೋರಲಾಗಿದೆ. ಆದರೂ ಈತನಕ ನೀಡಿಲ್ಲ ಎಂದು ಅವರು ಹೇಳಿದರು.

ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಚಾರದಲ್ಲಿ ಯಾರೊಬ್ಬರು ಅರ್ಜಿ ಕೊಟ್ಟ ತಕ್ಷಣ ಶೋಕಾಸ್ ನೀಡಿ ಅನಂತರ ಅಭಿಯೋಜನೆಗೆ ಅನುಮತಿ ನೀಡಿದ್ದಾರೆ. ಈ ಅರ್ಜಿಯನ್ನು ತಿರಸ್ಕಾರ ಮಾಡುವಂತೆ ಸಚಿವ ಸಂಪುಟ ಸಭೆ ಸಲಹೆ ಮಾಡಿತ್ತು. ಅಲ್ಲದೆ ಯಾವುದೇ ತನಿಖಾ ವರದಿ ಸಿದ್ದರಾಮಯ್ಯನವರ ಪ್ರಕರಣದಲ್ಲಿ ಇರಲಿಲ್ಲ . ಈ ಪ್ರಕರಣವನ್ನು ನಾವು ರಾಜ್ಯಪಾಲರ ಬಳಿ ಪ್ರಸ್ತಾಪಿಸಿಲ್ಲ. ಏಕೆಂದರೆ ಈಗಾಗಲೇ ಈ ಪ್ರಕರಣ ನ್ಯಾಯಾಲಯದಲ್ಲಿದ್ದು, ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ ಎಂದರು.

ನಮ ಉದ್ದೇಶ ರಾಜಭವನ ರಾಜಕೀಯ ಕಚೇರಿ ಆಗಬಾರದು. ಅಧಿಕಾರದಲ್ಲಿರುವ ನಾವ್ಯಾರು ಶಾಶ್ವತವಲ್ಲ. ಸಂವಿಧಾನಬದ್ದವಾಗಿ ರಚನೆಯಾಗಿರುವ ರಾಜ್ಯಪಾಲರ ಸ್ಥಾನ ನ್ಯಾಯಾಲಯದ ಸ್ಥಾನದಲ್ಲಿದೆ. ರಾಜಭವನ ಸರ್ಕಾರವನ್ನು ರಕ್ಷಿಸುವ ಕೆಲಸ ಮಾಡಬೇಕು. ವಿಧಾನಸಭೆ ಚುನಾವಣೆಯಲ್ಲಿ 136 ಶಾಸಕರನ್ನು ಗೆಲ್ಲಿಸಿ ಜನರು ನಮಗೆ ಜನಾದೇಶ ನೀಡಿದ್ದಾರೆ. ಇಂತಹ ಬಲಿಷ್ಠ ಸರ್ಕಾರವನ್ನು ಅಸ್ಥಿರಗೊಳಿಸುವ ದೊಡ್ಡ ಪ್ರಯತ್ನ ಹಾಗೂ ಸಂಚು ನಡೆಯುತ್ತಿದೆ ಎಂದು ಆರೋಪಿಸಿದರು.

ಒಕ್ಕೂಟ ವ್ಯವಸ್ಥೆಯಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ನಮ ರಾಜ್ಯ ದೇಶಕ್ಕೆ ಹಾಗೂ ಬೇರೆ ರಾಜ್ಯಗಳಿಗೂ ಸಹಾಯ ಮಾಡುತ್ತಿದೆ. ಇದನ್ನು ಸಹಿಸದೆ ಪ್ರಜಾಪ್ರಭುತ್ವ ವ್ಯವಸ್ಥೆ ಕಗ್ಗೊಲೆ ಮಾಡಬೇಕು, ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನ ನಡೆಯುತ್ತಿದ್ದು, ಆ ಪ್ರಯತ್ನಕ್ಕೆ ಅವಕಾಶವಾಗಬಾರದು ಎಂದು ರಾಜ್ಯಪಾಲರ ಮನವಿ ಮಾಡಿದ್ದೇವೆ ಎಂದು ಹೇಳಿದರು.

RELATED ARTICLES

Latest News