ಬೆಂಗಳೂರು, ಮೇ 12– ಬಿಬಿಎಂಪಿ ಆಯಸ್ಸು ಇನ್ನು ಕೇವಲ ಮೂರು ದಿನಗಳು ಮಾತ್ರ… ಯಾಕೆ ಅಂತೀರಾ….ಮೂರು ದಿನಗಳ ನಂತರ ಬಿಬಿಎಂಪಿ ಬದಲಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಸ್ಥಿತ್ವಕ್ಕೆ ಬರುತ್ತಿದೆ. ಹೀಗಾಗಿ ಮೂರು ದಿನಗಳ ನಂತರ ರಾಜಧಾನಿ ಬೆಂಗಳೂರಿನ ಆಡಳಿತದ ಚಿತ್ರಣವೇ ಬದಲಾಗಲಿದೆ. ಬೆಂಗಳೂರಿನ ಪ್ರಾದೇಶಿಕತೆ-ಭೌಗೋಳಿಕತೆಯ ವ್ಯಾಪ್ತಿ-ವಿಸ್ತೀರ್ಣ ಕೂಡ ಹೆಚ್ಚಾಗಲಿದೆ.
ಬಿಬಿಎಂಪಿ ಮೇ 14 ರ ನಂತ್ರ ಅಸ್ತಿತ್ವ ಕಳೆದುಕೊಳ್ಳಲಿದ್ದು, ಹೆಸರು-ಸ್ವರೂಪದಲ್ಲಿ ಭಾರೀ ರೂಪಾಂತರಗೊಂಡು ಬಿಬಿಎಂಪಿ ಎನ್ನುವ ಹೆಸರು ಇತಿಹಾಸದ ಪುಟ ಸೇರಲಿದೆ. ಮೇ15 ರ ನಂತರ ಬಿಬಿಎಂಪಿ ಅಸ್ಥಿತ್ವದಲ್ಲೇ ಇರೊಲ್ಲ..ಅಂದಿನಿಂದಲೇ ಜಿಬಿಎ ಅಸ್ಥಿತ್ವಕ್ಕೆ ಬರಲಿದ್ದು, ಬೆಂಗಳೂರು ಆಡಳಿತ ಕಾಯ್ದೆ-2024 ಜಾರಿಯಾಗಲಿದೆ.
ಈಗಿರುವ ಬಿಬಿಎಂಪಿಯನ್ನು ಮೂರು ಪಾಲಿಕೆಗಳನ್ನಾಗಿ ಮಾಡುವ ಸಾಧ್ಯತೆಗಳಿವೆ. ಈ ಮೂರು ಪಾಲಿಕೆಗಳ ವ್ಯಾಪ್ತಿ ಗ್ರೇಟರ್ ಬೆಂಗಳೂರಿಗೆ ಬರುವುದರಿಂದ ಜಿಬಿಎಗೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡಲಾಗುವುದು. ಆಡಳಿತಾಧಿಕಾರಿ ಅಡಿಯಲ್ಲೇ ಮೂರು ಪಾಲಿಕೆಗಳ ಅಡಳಿತ ನಿರ್ವಹಣೆಯಾಗಲಿದೆ. ಮೂರು ಪಾಲಿಕೆಗಳಿಗೂ ಆಡಳಿತಾಧಿಕಾರಿಯೇ ಬಾಸ್ ಆಗಿರುತ್ತಾರೆ. ಉಳಿದಂತೆ ಮುಖ್ಯಮಂತ್ರಿ ಜಿಬಿಎ ಅಧ್ಯಕ್ಷರಾಗಿದ್ದಾರೆ, ಡಿಸಿಎಂ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ಶಾಸಕರು, ಪಾಲಿಕೆಗಳ ಮೇಯರ್‌ಗಳು ಹಾಗೂ ಅನೇಕ ಇಲಾಖೆ ಅಧಿಕಾರಿಗಳು, ಬಿಡಿಎ, ಜಲಮಂಡಳಿ, ಬೆಸ್ಕಾಂ, ಬಿಎಂಟಿಸಿ, ಪೊಲೀಸ್ ಕಮಿಷನರ್ ವ್ಯಾಪ್ತಿಯೂ ಜಿಬಿಎ ವ್ಯಾಪ್ತಿಗೆ ಸೇರ್ಪಡೆಗೊಳ್ಳಲಿವೆ.ಬಿಎಂಆರ್ ಸಿಎಲ್.ಅಗ್ನಿಶಾಮಕ ದಳದ ಸಿಬ್ಬಂದಿಗಳು, ಭೂಸಾರಿಗೆ, ಬಿಎಂಆರ್ ಡಿಎ ಮುಖ್ಯಾಧಿಕಾರಿಗಳು ಪ್ರಾಧಿಕಾರದಲ್ಲಿರುತ್ತಾರೆ.
ಜಿಬಿಎಗೆ ಎಲೆಕ್ಟ್ರಾನಿಕ್ ಸಿಟಿ, ಅತ್ತಿಬೆಲೆ, ಜಿಗಣಿ ಕೈಗಾರಿಕೆ ಪ್ರದೇಶ, ಬೊಮ್ಮ ಸಂದ್ರ, ಸರ್ಜಾಪುರ, ಬಾಗಲೂರು, ರಾಜಾನುಕುಂಟೆ, ಹೆಸರಘಟ್ಟ, ದಾಸನಪುರ ಸೇರ್ಪಡೆಯಾಗುವ ಸಾಧ್ಯತೆಗಳಿವೆ ಅದೇ ರೀತಿ ಮಾಕಳಿ, ತಾವರೆಕೆರೆ, ಕುಂಬಳಗೋಡು, ಕಗ್ಗಲಿಪುರ, ಹಾರೋಹಳ್ಳಿಯೂ ಗ್ರೇಟರ್ ಬೆಂಗಳೂರು ವ್ಯಾಪ್ತಿಗೆ ಬರಬಹುದು ಎಂದು ನಿರೀಕ್ಷಿಸಲಾಗಿದೆ.
ಎಲ್ಲಾ ಪಾಲಿಕೆಗಳ ಹೆಸರು ಬೆಂಗಳೂರು ಎನ್ನುವುದರಿಂದಲೇ ಆರಂಭವಾಗಬಹುದು ಎನ್ನಲಾಗಿದೆ. ಬೆಂಗಳೂರು ಕೇಂದ್ರ ನಗರ ಪಾಲಿಕೆ, ಬೆಂಗಳೂರು ಉತ್ತರ ನಗರ ಪಾಲಿಕೆ ಹಾಗೂ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಎಂಬುದಾಗಿ ಬಿಬಿಎಂಪಿಯನ್ನು ಮೂರು ಭಾಗಗಳನ್ನಾಗಿ ಮಾಡಲು ಸರ್ಕಾರ ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.
ಬೆಂಗಳೂರು ಉತ್ತರ ನಗರ ಪಾಲಿಕೆಗೆ ದಾಸರಹಳ್ಳಿ, ಆರ್ ಆರ್ ನಗರ, ಯಶವಂತಪುರ, ಮಹಾಲಕ್ಷ್ಮಿ ಲೇಔಟ್, ಯಲಹಂಕ ಮತ್ತು ಹೆಬ್ಬಾಳ, ಬೆಂಗಳೂರು ಕೇಂದ್ರ ನಗರ ಪಾಲಿಕೆಗೆ ಕೆ.ಆರ್ ಪುರಂ, ಮಹಾದೇವಪುರ, ಸಿವಿರಾಮನ್ ನಗರ, ಗಾಂಧೀನಗರ, ರಾಜಾಜಿನಗರ, ಶಿವಾಜಿನಗರ, ಮಲ್ಲೇಶ್ವರಂ, ಸರ್ವಜ್ಞನಗರ ಹಾಗೂ ಪುಲಕೇಶಿನಗರ ಅದೇ ರೀತಿ ಬೆಂಗಳೂರು ದಕ್ಷಿಣ ನಗರ ಪಾಲಿಕೆಗೆ ಬೊಮ್ಮನಹಳ್ಳಿ, ಬೆಂಗಳೂರು ದಕ್ಷಿಣ, ಪದ್ಮನಾಭನಗರ, ಶಾಂತಿನಗರ, ಬಸವನಗುಡಿ, ಜಯನಗರ, ಬಿಟಿಎಂ ಲೇಔಟ್, ಚಾಮರಾಜಪೇಟೆ, ವಿಜಯನಗರ, ಗೋವಿಂದರಾಜನಗರ ಹಾಗೂ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರಗಳು ಬರಲಿವೆ ಎಂದು ಅಂದಾಜಿಸಲಾಗಿದೆ.