ಗೌರಿಬಿದನೂರು, ಅ. 23- ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಉತ್ತರ ಪಿನಾಕಿನಿ ನದಿ ಹರಿಯುವ ಮೂಲಕ ರೈತರ ಮೊಗದಲ್ಲಿ ಹಾಗೂ ಸಾರ್ವಜನಿಕರಲ್ಲಿ ಮಂದಹಾಸ ಮೂಡಿಸಿದೆ.
ಕಳೆದ ಹದಿನೈದು ದಿನಗಳಿಂದ ಮಳೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಉತ್ತರ ಪಿನಾಕಿನಿ ನದಿ ಈಗ ಹರಿಯುತ್ತದೆ ಎಂಬ ಆಶಾಭಾವನೆಯಿಂದಿದ್ದ ರೈತರ ಕನಸು ಮಳೆರಾಯ ನನಸು ಮಾಡಿದ್ದಾನೆ. ಒಮೆ ಉತ್ತರ ಪಿನಾಕಿನಿ ನದಿ ಹರಿದರೆ ತಾಲ್ಲೂಕಿನ ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟ ವೃದ್ಧಿಯಾಗಲಿದ್ದು, ನಗರದಲ್ಲಿ ನೀರಿನ ಅಭಾವ ನೀಗಲಿದೆ.
ಉತ್ತರ ಪಿನಾಕಿನಿ ನದಿ ಸೋಮುವಾರ ಬೆಳಿಗ್ಗೆ ನಗರದ ಹೊರವಲಯದ ಕಿಂಡಿ ಅಣೆಕಟ್ಟೆಯ ವರೆಗೂ ಹರಿದಿದ್ದು, ಇದೀಗ ಕಿಂಡಿ ಅಣೆಕಟ್ಟೆಯನ್ನು ದಾಟಿಕೊಂಡು ನಗರದ ಕಡೆ ಹರಿಯತೊಡಗಿದೆ. ನದಿಯನ್ನು ನೋಡಲು ನಗರದ ಸಾರ್ವಜನಿಕರು ಉತ್ತರ ಪಿನಾಕಿನಿ ಸೇತುವೆ ಕಡೆಗೆ ಮುಗಿಬಿದ್ದರು, ಸೇತುವೆ ತೆರವು ಕಾರ್ಯಾಚರಣೆ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ಉತ್ತರ ಪಿನಾಕಿನಿ ಸೇತುವೆ ಕಡೆಗೆ ಬರುವ ಜನರನ್ನು ನಿಯಂತ್ರಿಸಲು ಹರಸಾಹಸ ಪಡುವಂತಾಯಿತು.