ಬೆಂಗಳೂರು,ಏ.2- ಪ್ರಸಕ್ತ ಆರ್ಥಿಕ ಸಾಲಿನಲ್ಲಿ ನಿಗದಿಪಡಿಸಿದ ಸೇವೆಗಳು ಹಾಗೂ ಉದ್ದೇಶಕ್ಕಾಗಿ ವೆಚ್ಚ ಮಾಡುವ ಅಧಿಕಾರವನ್ನು ಆಯಾ ಇಲಾಖೆ ಮುಖ್ಯಸ್ಥರು ಮತ್ತು ಅಂದಾಜು ಅಧಿಕಾರಿಗಳಿಗೆ ಆರ್ಥಿಕ ಇಲಾಖೆ ನೀಡಿದೆ.
ಪ್ರಸಕ್ತ ಸಾಲಿನ ಧನ ವಿನಿಯೋಗ ವಿಧೇಯಕಕ್ಕೆ ರಾಜ್ಯ ವಿಧಾನಮಂಡಲದ ಅನುಮೋದನೆ ದೊರೆತು ರಾಜ್ಯಪಾಲರ ಒಪ್ಪಿಗೆ ಪಡೆಯಲಾಗಿದ್ದು, ರಾಜ್ಯಪತ್ರದಲ್ಲೂ ಅಧಿಕೃತವಾಗಿ ಪ್ರಕಟಿಸಲಾಗಿದೆ.
ಹೀಗಾಗಿ ಇಲಾಖಾವಾರು ಅನುದಾನವನ್ನು ಹಂಚಿಕೆ ಮಾಡಿರುವ ಆರ್ಥಿಕ ಇಲಾಖೆ ಆಯಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ, ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿ, ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ನಿಗದಿಪಡಿಸಿದ ಉದ್ದೇಶಗಳಿಗೆ ಅನುದಾನವನ್ನು ವೆಚ್ಚ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಎಲ್ಲಾ ಇಲಾಖಾ ಮುಖ್ಯಸ್ಥರು ಮತ್ತು ವೆಚ್ಚವನ್ನು ನಿಯಂತ್ರಿಸಲು ಜವಾಬ್ದಾರರಾಗಿರುವ ಇತರ ಅಧಿಕಾರಿಗಳು ಒಂದು ಬೇಡಿಕೆಯಡಿ ಒದಗಿಸಿದ್ದ ಹಣವನ್ನು ಮರು ಹೊಂದಾಣಿಕೆ ಮಾಡುವಂತಿಲ್ಲ. ಸರ್ಕಾರದ ಮಂಜೂರಾತಿ ಇಲ್ಲದೆ ಯಾವುದೇ ಘಟಕದಲ್ಲಿ ಉಳಿತಾಯದಿಂದ ಮರು ಹೊಂದಾಣಿಕೆಯನ್ನು ನಿರೀಕ್ಷಿಸಿ ಅಧಿಕ ವೆಚ್ಚ ಮಾಡದಂತೆ ಸೂಚಿಸಿದೆ.
ವರ್ಷದ ಎಲ್ಲಾ ತಿಂಗಳಲ್ಲೂ ಅನುದಾನವನ್ನು ಸಮಾನವಾಗಿ ಹಂಚಿಕೆಯಾಗುವಂತೆ ನೋಡಿಕೊಳ್ಳಬೇಕು. ಹೊಸ ಸೇವೆಗಳಿಗೆ ಸಾದಿಲ್‌ವಾರು ನಿಧಿಯಿಂದ ಅಥವಾ ಪೂರಕ ಅಂದಾಜಿನ ಮೂಲಕ ಆರ್ಥಿಕ ಇಲಾಖೆಯು ಹಣ ಬಿಡುಗಡೆ ಮಾಡದ ಹೊರತು ಯಾವುದೇ ವೆಚ್ಚವನ್ನು ಮಾಡಬಾರದೆಂದು ನಿರ್ದೇಶನ ನೀಡಿದೆ.
ಆರ್ಥಿಕ ಇಲಾಖೆಯು ಇಲಾಖಾ ಮುಖ್ಯಸ್ಥರಿಗೆ ನೀಡಿರುವ ಅಧಿಕಾರ ಹಾಗೂ ಕಾಲಕಾಲಕ್ಕೆ ಹೊರಡಿಸುವ ತ್ರೈಮಾಸಿಕ ಕಂತುಗಳ ಬಿಡುಗಡೆ ಅಧಿಕಾರದ ಆದೇಶಗಳ ಅನ್ವಯ ಅನುದಾನ ಬಿಡುಗಡೆ ಮತ್ತು ವೆಚ್ಚಗಳನ್ನು ಮಾಡಲು ತಿಳಿಸಿದೆ.
ಜಿ.ಪಂ.ಗಳಿಗೆ ಸಂಬಂಧಿಸಿದ ಆಯವ್ಯಯ ಅನುದಾನಗಳು ಅಭಿಯೋಜಕಗಳಲ್ಲಿ ಸೂಚಿಸಿರುವ ಮೊತ್ತಕ್ಕಿಂತ ವೆಚ್ಚವು ಹೆಚ್ಚಾಗದಂತೆ ಖಾತ್ರಿ ಮಾಡಿಕೊಳ್ಳುವ ಜವಾಬ್ದಾರಿಯು ಇಲಾಖಾ ಮುಖ್ಯಸ್ಥರದಾಗಿರುತ್ತದೆ.ಜಿ.ಪಂ. ಕ್ಷೇತ್ರ ಇಲಾಖೆಯಿಂದ ಮಾಸಿಕ ವರದಿ ಪಡೆದು ವೆಚ್ಚ ನಿಯಂತ್ರಿಸಲು ನಿರ್ದೇಶನ ನೀಡಿದೆ.