ಬೆಂಗಳೂರು, ಫೆ.4-ಕೃಷಿ ಸಚಿವರಾದ ಎನ್.ಚಲುವರಾಯಸ್ವಾಮಿರವರ ವಿಶೇಷ ಕಾಳಜಿಯ ಪ್ರಯತ್ನದ ಫಲವಾಗಿ ರಾಜ್ಯದ 486 ಅಮೃತ ರೈತ ಉತ್ಪಾದಕ ಸಂಸ್ಥೆಗಳಿಗೆ ಒಟ್ಟು 20 ಕೋಟಿ ರೂ. ಹೆಚ್ಚುವರಿ ಅನುದಾನ ಒದಗಿಸಲಾಗಿದೆ.
ರೈತ ಉತ್ಪಾದನಾ ಸಂಸ್ಥೆಗಳನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ನಿರಂತರವಾಗಿ ಶ್ರಮಿಸುತ್ತಿರುವ ಕೃಷಿ ಸಚಿವರು ಮೂರು ವರ್ಷಗಳಿಂದ ಬಿಡುಗಡೆಯಾಗದಿದ್ದ ಈ ಅನುದಾನ ಬಿಡುಗಡೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ ಬಿಜೆಪಿ ಸರ್ಕಾರ ಅಮೃತ ರೈತ ಉತ್ಪಾದಕರ ಸಂಸ್ಥೆಗಳ ಸ್ಥಾಪನೆ ಮತ್ತು ಪ್ರೋತ್ಸಾಹಕ್ಕೆ ಅನುದಾನ ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿ, ಯಾವುದೇ ಅನುದಾನ ನೀಡದೆ ಕೇವಲ ಭರವಸೆ ನೀಡಿತ್ತು. ಆದರೆ, ಕೃಷಿ ಸಚಿವರಾದ ಎನ್.ಚಲುವರಾಯಸ್ವಾಮಿರವರು ಎಫ್.ಪಿ.ಒ ಅನುದಾನ ಒದಗಿಸುವಲ್ಲಿ ಯಶಸ್ವಿಯಾಗಿದ್ದು ರೈತ ಉತ್ಪಾದನಾ ಸಂಸ್ಥೆಗಳು ಕೃಷಿ ಸಚಿವರಿಗೆ ಕೃತಜ್ಞತೆ ಸಲ್ಲಿಸಿವೆ.
ಪ್ರೋತ್ಸಾಹ ಕಾರ್ಯಕ್ರಮ :
ರಾಜ್ಯದಲ್ಲಿ ರೈತ /ಮೀನುಗಾರರ /ನೇಕಾರರನ್ನು ಸಂಘಟಿಸಿ ಅವರ ಉತ್ಪಾದಕತೆಯನ್ನು ಹೆಚ್ಚಿಸುವುದಲ್ಲದೇ ಅವರು ಬೆಳೆದಂತಹ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಕಲ್ಪಿಸುವ ನಿಟ್ಟಿನಲ್ಲಿ ರೈತರನ್ನು ಸಂಘಟಿಸಿ ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಿ ಸರಿಯಾದ ಸಮಯದಲ್ಲಿ ರೈತರು ಉತ್ಪಾದಿಸುವ ಬೆಳೆಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆಯನ್ನು ದೊರಕಿಸಿಕೊಡುವ ಉದ್ದೇಶದಿಂದ ರೈತ ಎಫ್.ಪಿ.ಒ.ಗಳನ್ನು ಸ್ಥಾಪಿಸಲಾಗಿದೆ.
ವಿವಿಧ ಅನುಷ್ಠಾನ ಇಲಾಖೆಗಳಾದ ಜಲಾನಯನ ಅಭಿವೃದ್ಧಿ ಇಲಾಖೆ /ಕೃಷಿ, ತೋಟಗಾರಿಕೆ, ರೇಷೆ, ಪಶುಸಂಗೋಪನೆ, ಕೈಮಗ್ಗ ಮತ್ತು ಜವಳಿ ಹಾಗೂ ಮೀನುಗಾರಿಕೆ ಇಲಾಖೆಗಳ ವತಿಯಿಂದ ಈ ರೈತ ಉತ್ಪಾದನಾ ಸಂಸ್ಥೆಗಳನ್ನು ರಚಿಸಿ ಉತ್ತೇಜಿಸಲಾಗುತ್ತಿದೆ. ಈ ಯೋಜನೆಯಡಿ ಅನುದಾನದ ಕೊರತೆಯಿಂದ ಹಲವಾರು ಎಫ್.ಪಿ.ಒ.ಗಳು ಪರಿಣಾಮಕಾರಿಯಾಗಿ ವ್ಯಾಪಾರ ವ್ಯವಹಾರ ಪ್ರಾರಂಭಿಸಲು ಸಾಧ್ಯವಾಗದೆ ತೊಂದರೆಗೆ ಈಡಾಗಿದ್ದವು.
2024-25ನೇ ಸಾಲಿನಲ್ಲಿ ಅಮೃತ ರೈತ ಉತ್ಪಾದನಾ ಸಂಸ್ಥೆಗಳ ಉತ್ತೇಜನಕ್ಕೆ 20 ಕೋಟಿ ರೂ.ಅನುದಾನ ಒದಗಿಸಲಾಗುವುದರಿಂದ ರೈತ ಉತ್ಪಾದಕರ ಕಂಪನಿಗಳ ನಿರ್ದೇಶಕರು ಮತ್ತು ಸಿಬ್ಬಂದಿ ವರ್ಗದವರಿಗೆ ಕಂಪನಿಯನ್ನು ಪರಿಣಾಮಕಾರಿಯಾಗಿ ಮುನ್ನಡೆಸಲು ಆತ ವಿಶ್ವಾಸ ಹೆಚ್ಚಿದ್ದು ಮತ್ತು ರೈತ ಭಾಂದವರಿಗೆ ಹೆಚ್ಚಿನ ಸೇವೆಗಳನ್ನು ಒದಗಿಸಲು ವಿಶ್ವಾಸ ಮೂಡಿಸಿದೆ.
ಆರಂಭಿಕ ಹಂತದಲ್ಲಿದ್ದ ರೈತ ಉತ್ಪಾದಕರ ಕಂಪನಿಗಳಿಗೆ ಅನುದಾನ ಬಿಡುಗಡೆಯು ಕಂಪನಿಗಳನ್ನು ಸುಸ್ಥಿರವಾಗಿ ಕಟ್ಟಲು ಆರಂಭಿಕವಾಗಿ ಸಹಾಯವಾಗುತ್ತಿದೆ. ಅನುದಾನ ಸದ್ಭಳಕೆ ಮಾಡಿಕೊಂಡು ಮುಂಬರುವ ವರ್ಷಗಳಲ್ಲಿ ಸ್ವಾವಲಂಭಿಯಾಗಿ ಕಂಪನಿಯನ್ನು ಬೆಳೆಸಲು ಮತ್ತು ಷೇರುದಾರರ ಅವಶ್ಯಕತೆಗಳನ್ನು ರೈತರಿಗೆ ಗ್ರಾಮ ಮಟ್ಟದಲ್ಲಿ ಒದಗಿಸಲು ಸಹಕಾರಿಯಾಗಿದೆ.
ರೈತ ಉತ್ಪಾದಕರ ಕಂಪನಿಯ ಮುಖ್ಯ ಉದ್ದೇಶವಾದ ರೈತರ ಆದಾಯವನ್ನು ದ್ವಿಗುಣ ಮಾಡುವುದು ಮತ್ತು ರೈತರಿಗೆ ಉತ್ತಮ ಗುಣಮಟ್ಟದ ಬಿತ್ತನೆ ಬೀಜದಿಂದ ಮಾರುಕಟ್ಟೆವರೆಗೆ ಪರಿಪೂರ್ಣ ಸೇವೆಯನ್ನು ಒದಗಿಸಲು ಈ ಅನುದಾನ ಬಿಡುಗಡೆ ಮಾಡಿರುವುದು ಸಹಕಾರಿಯಾಗುತ್ತಿದೆ.
ರೈತ ಉತ್ಪಾದಕರ ಕಂಪನಿಗಳು ಪರಿಣಾಮಕಾರಿ ಕೆಲಸ ಮಾಡಿ ರೈತರಿಗೆ ಅವಶ್ಯಕತೆ ಇರುವ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕಗಳು ಹಾಗೂ ಇತರೆ ಕೃಷಿ ಪರಿಕರಗಳು ಸಮಯಕ್ಕೆ ಸರಿಯಾಗಿ ಸೂಕ್ತ ಬೆಲೆಗೆ ದೊರಕುವಂತಾಗುತ್ತದೆ. ಇದರಿಂದ ರೈತರ ಪರಾವಲಂಬನೆಯನ್ನು ತಪ್ಪಿಸಿ ಸ್ವಾವಲಂಭಿಗಳನ್ನಾಗಿ ಮಾಡುತ್ತದೆ.
ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಮತ್ತು ನ್ಯಾಯಯುತ ಬೆಲೆ ಸಿಗದ ಕಾರಣ ರೈತರು ನಷ್ಟವನ್ನು ಅನುಭವಿಸುವಂತಾಗಿದೆ. ರೈತ ಉತ್ಪಾದಕರ ಕಂಪನಿಗಳು ಗಟ್ಟಿಯಾದಲ್ಲಿ ರೈತ / ಷೇರುದಾರರಿಗೆ ಸೂಕ್ತ ಮಾರುಕಟ್ಟೆಯನ್ನು ಒದಗಿಸಲು ಅನುಕೂಲವಾಗುತ್ತದೆ.
ಸರ್ಕಾರ ಬಿಡುಗಡೆ ಮಾಡಿರುವ ಸಹಾಯಧನದಿಂದ ವ್ಯಾಪಾರ ವೃದ್ಧಿ ಮಾಡಲು ಅವಕಾಶವಾಗಿದೆ. ಈ ಹಣವನ್ನು ಸದ್ಭಳಕೆ ಮಾಡಿಕೊಂಡು ಅವಶ್ಯಕ ಮೂಲ ಸೌಕರ್ಯಗಳನ್ನು ಮಾಡಿಕೊಂಡು ರೈತರಿಗೆ ಉತ್ತಮ ಮಾರುಕಟ್ಟೆಯನ್ನು ಕಲ್ಪಿಸುತ್ತದೆ. ಇದರಿಂದ ಮಾರುಕಟ್ಟೆಗೆ ರೈತರು ಅನುಭವಿಸುವ ತೊಂದರೆಗಳನ್ನು ತಡೆಯಬಹುದಾಗಿದ್ದು ಹಾಗೂ ರೈತರು ಸ್ವತಂತ್ರವಾಗಿ ಬೆಳೆದ ಬೆಳೆಗಳಿಗೆ ಸೂಕ್ತ ಮಾರುಕಟ್ಟೆಯನ್ನು ಕಲ್ಪಿಸಿಕೊಂಡು ವ್ಯಾಪಾರ ವಹಿವಾಟು ನಡೆಸಬಹುದಾಗಿರುತ್ತದೆ.
ಅನುದಾನ ಬಿಡುಗಡೆಯಿಂದ ಅನುಭವ ಇರುವಂತಹ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಇತರೆ ಸಿಬ್ಬಂದಿಗಳನ್ನು ನೇಮಕ ಮಾಡಿಕೊಂಡು ರೈತ ಉತ್ಪಾದಕರ ಸಂಸ್ಥೆಗಳನ್ನು ಪರಿಣಾಮ ಕಾರಿಯಾದಂತಹ ಸೇವೆಗಳನ್ನು ರೈತರಿಗೆ ಒದಗಿಸಲು ಅನುಕೂಲವಾಗುತ್ತದೆ.