ಚಾಂಪಿಯನ್ಸ್ ಟ್ರೋಫಿ ಟೂರ್ನಿ ಮುಗಿದ ನಂತರ ಕ್ರಿಕೆಟ್ ಪ್ರೇಮಿಗಳ ಮನವೆಲ್ಲಾ 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ನತ್ತ ವಾಲಿದೆ. 18 ವಿರಾಟ್ ಕೊಹ್ಲಿಯ ಜೆರ್ಸಿ ನಂಬರ್ ಆಗಿದ್ದು, ಈ ಬಾರಿ ಆದರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಚೊಚ್ಚಲ ಟ್ರೋಫಿ ಗೆಲ್ಲುತ್ತದೆಯಾ ಎಂಬ ಯಕ್ಷಪ್ರಶ್ನೆ ಅಭಿಮಾನಿಗಳು ಹಾಗೂ ಕ್ರಿಕೆಟ್ ಪಂಡಿತರಲ್ಲಿ ಮೂಡಿದೆ.
ಭಾರತ ತಂಡಕ್ಕೆ ವಿಧಿಸಿರುವ ಕಟ್ಟುನಿಟ್ಟಿನ ಕ್ರಮವನ್ನು ಬಿಸಿಸಿಐ ಐಪಿಎಲ್ ಟೂರ್ನಿಯು ಆಟಗಾರರಿಗೂ ವಿಧಿಸಿದೆ. ಅಲ್ಲದೆ ಮೆಗಾ ಹರಾಜಿನ ನಂತರ 5ಕ್ಕೂ ಹೆಚ್ಚು ತಂಡಕ್ಕೆ ಹೊಸ ನಾಯಕರ ಆಗಮನ ಆಗಿದ್ದು, ಚೊಚ್ಚಲ ಪ್ರಯತ್ನದಲ್ಲೇ ಟ್ರೋಫಿ ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ.
ಅದಕ್ಕೂ ಮುನ್ನ ಹಿಂದಿನ 17 ಆವೃತ್ತಿಗಳಲ್ಲಿ ಆಗಿರುವ 5ರ ಅಂಕಿಯ ವಿಶೇಷದ ಕಡೆ ಗಮನ ಹರಿಸೋಣ. ಅಂದಹಾಗೆ ಮೆಗಾ ಟೂರ್ನಿಗೆ ಇನ್ನೂ ಕೇವಲ 5 ದಿನಗಳು ಬಾಕಿ ಇವೆ.
1.ಮುಂಬೈ, ಚೆನ್ನೈ 5 ಬಾರಿ ಚಾಂಪಿಯನ್ಸ್
ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಅತ್ಯಂತ ಯಶಸ್ವಿತಂಡಗಳೆಂದರೆ ಅದು ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್. ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಸಿಎಸ್ 2010, 2011,2018,2021 ಹಾಗೂ 2023ರಲ್ಲಿ ಟ್ರೋಫಿ ಗೆದ್ದಿದ್ದರೆ, ರೋಹಿತ್ ಶರ್ಮಾ ಕ್ಯಾಪ್ಟನ್ಸಿಯಲ್ಲಿ ಮುಂಬೈ ಇಂಡಿಯನ್ಸ್ 2013, 2015, 2017, 2019, 2020ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಆದರೆ ಕಳೆದ ಆವೃತ್ತಿಯಲ್ಲಿ ಪ್ಲೇ ಆಫ್ ತಲುಪುವಲ್ಲಿ ಎರಡು ತಂಡಗಳು ವಿಫಲವಾಗಿದ್ದರೂ, 6ನೇ ಟ್ರೋಫಿ ಗೆಲ್ಲುವ ಹುಮ್ಮಸ್ಸಿನಲ್ಲಿವೆ.
2.2024 ರ ವಿರಾಟ್ 5 ಅರ್ಧಶತಕ
ಆರ್ ಸಿಬಿ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ 2024ರ ಐಪಿಎಲ್ ಟೂರ್ನಿಯಲ್ಲಿ 154.69 ಸ್ಟೆಕ್ ರೇಟ್ ನಲ್ಲಿ 764 ರನ್ ಗಳಿಸಿ ಲೀಡಿಂಗ್ ಸ್ಕೋರರ್ ಆಗಿದ್ದರು. ಆ ಋತುವಿನಲ್ಲಿ ಕಿಂಗ್ ಕೊಹ್ಲಿ 5 ಅರ್ಧಶತಕ ಸಿಡಿಸಿದ್ದರೆ, 117 ಗರಿಷ್ಠ ಮೊತ್ತವಾಗಿತ್ತು. ಆರ್ ಸಿಬಿ ಹಾಲಿ ನಾಯಕ ರಜತ್ ಪಾಟಿದಾರ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮನ್ ಕೂಡ ತಲಾ 5 ಅರ್ಧಶತಕ ಸಿಡಿಸಿ ದಾಖಲೆ ನಿರ್ಮಿಸಿದ್ದಾರೆ.
3.ವಿವಿಎಸ್ ಲಕ್ಷ್ಮಣ್ ಸೋಲು:
2008ರ ಐಪಿಎಲ್ ಟೂರ್ನಿಯಲ್ಲಿ ಖ್ಯಾತ ಕ್ರಿಕೆಟಿಗೆ ವಿವಿಎಸ್ ಲಕ್ಷ್ಮಣ್ ಡೆಕ್ಕನ್ ಚಾರ್ಜಸ್್ರ ತಂಡವನ್ನು 6 ಪಂದ್ಯಗಳಲ್ಲಿ ಮುನ್ನಡೆಸಿ 5ರಲ್ಲಿ ಸೋಲು ಕಂಡಿದ್ದರು. ಪಂಜಾಬ್ ಕಿಂಗ್ಸ್ ಇಲೆವೆನ್ ತಂಡವನ್ನು ಮುನ್ನಡೆಸಿದ್ದ ಮುರಳಿ ವಿಜಯ್ ಹಾಗೂ ಡೇವಿಡ್ ಮಿಲ್ಲರ್ ಕೂಡ ತಮ್ಮ ಕ್ಯಾಪ್ಟನ್ಸಿಯಲ್ಲಿ 5 ಪಂದ್ಯಗಳನ್ನು ಸೋತಿದ್ದಾರೆ.
4.ಹೊಸ ನಾಯಕರ ಆಗಮನ:
2025ರ ಐಪಿಎಲ್ ಟೂರ್ನಿಯಲ್ಲಿ ಈ ಬಾರಿ ಐವರು ಹೊಸ ನಾಯಕರು ತಂಡವನ್ನು ಮುನ್ನಡೆಸಲಿದ್ದಾರೆ. ರಜತ್ ಪಾಟಿದಾರ್ (ಆರ್ ಸಿಬಿ), ರಿಷಬ್ ಪಂತ್ (ಲಖನ್ ಸೂಪರ್ ಜಯಂಟ್ಸ್), ಶ್ರೇಯಸ್ ಅಯ್ಯರ್ (ಪಂಜಾಬ್ ಕಿಂಗ್ಸ್), ಅಜಿಂಕ್ಯಾ ರಹಾನೆ (ಕೋಲ್ಕತ್ತಾ ನೈಟ್ ರೈಡರ್ಸ್), ಅಕ್ಷರ್ ಪಟೇಲ್ (ಡೆಲ್ಲಿ ಕ್ಯಾಪಿಟಲ್ಸ್).
5.ಒಂದೇ ಪಂದ್ಯದಲ್ಲಿ ಶತಕ, ಐದು ವಿಕೆಟ್:
ವಿಶ್ವದ ಐಷಾರಾಮಿ ಟಿ 20 ಕ್ರಿಕೆಟ್ ಲೀಗ್ ನ 16ನೇ ಆವೃತ್ತಿಯಲ್ಲಿ ಕೆಕೆಆರ್ ತಂಡದ ಸ್ಪಾರ್ ಆಲ್ ರೌಂಡರ್ ಸುನೀಲ್ ನರೈನ್, ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 5 ವಿಕೆಟ್ ಹಾಗೂ ಶತಕ ಸಿಡಿಸಿ ಈ ದಾಖಲೆ ನಿರ್ಮಿಸಿದ ಏಕೈಕ ಆಟಗಾರರೆನಿಸಿದರು. ಅಂದಿನ ಪಂದ್ಯದಲ್ಲಿ ಕೆಕೆಆರ್ ನೀಡಿದ 223/6 ರನ್ ಗುರಿಯನ್ನು ಬೆನ್ನಟ್ಟಿದ ಆರ್ ಆರ್ ಜೋಸ್ ಬಟ್ಲರ್ ಶತಕ (107 ರನ್) ನೆರವಿನಿಂದ ಅಂತಿಮ ಎಸೆತದಲ್ಲಿ 224/8 ಗೆಲುವು ಸಾಧಿಸಿತ್ತು.