ಬೆಂಗಳೂರು, ಸೆ. 24-ನೈರುತ್ಯ ಮುಂಗಾರು ಮಳೆಯ ಅವಧಿ ಮುಗಿಯುವ ಹಂತ ತಲುಪಿದ್ದು, ರಾಜ್ಯದಲ್ಲಿ ಸರಾಸರಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಆದರೆ. ಸೆಪ್ಟೆಂಬರ್ನಲ್ಲಿ ಇದುವರೆಗೂ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ರಾಜ್ಯಾದ್ಯಂತ ವ್ಯಾಪಕ ಪ್ರಮಾಣದ ಮಳೆಯಾಗದೇ ಚದುರಿದಂತೆ ಮಳೆಯಾಗುತ್ತಿದೆ. ಇದರಿಂದ ಮುಂಗಾರು ಹಂಗಾಮಿನ ಬೆಳೆಗಳಿಗೆ ತೇವಾಂಶದ ಕೊರತೆ ಉಂಟಾಗುವ ಆತಂಕ ಎದುರಾಗಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ಜೂನ್ ಒಂದರಿಂದ ನಿನ್ನೆವರೆಗೆ ರಾಜ್ಯದಲ್ಲಿ 385. 3 ಮಿ.ಮೀ.ನಷ್ಟು ಮಳೆಯಾಗಿದ್ದು, ವಾಡಿಕೆಗಿಂತ ಶೇ.24ರಷ್ಟು ಮಳೆಯಾಗಿದೆ. ಈ ಅವಧಿಯ ವಾಡಿಕೆ ಮಳೆ ಪ್ರಮಾಣ 311.6 ಮಿ.ಮೀ. ಆಗಿದೆ. ಅದೇ ರೀತಿ ಜನವರಿ ಒಂದರಿಂದ ನಿನ್ನೆಯವರೆಗಿನ ಮಾಹಿತಿ ಪ್ರಕಾರ 1117 ಮಿ.ಮೀ.ನಷ್ಟು ಮಳೆಯಾಗಿದ್ದು. ವಾಡಿಕೆಗಿಂತ ಶೇ.20 ರಷ್ಟು ಹೆಚ್ಚು ಮಳೆ ಬಿದ್ದಿದೆ. ಈ ಅವಧಿಯ ವಾಡಿಕೆ ಮಳೆ ಪ್ರಮಾಣ 929 ಮಿ.ಮೀ. ಆಗಿದೆ. ಕರಾವಳಿ, ಮಲೆನಾಡು, ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲೂ ವಾಡಿಕೆಗಿಂತ ಹೆಚ್ಚಾಗಿರುವುದು ಅಂಕಿ-ಅಂಶಗಳಿಂದ ಸ್ಪಷ್ಟವಾಗಿದೆ.
ಸೆಪ್ಟೆಂಬರ್ ಒಂದರಿಂದ ನಿನ್ನೆಯವರೆಗೆ ರಾಜ್ಯದಲ್ಲಿ 830 ಮಿ.ಮೀ.ನಷ್ಟು ಮಳೆ ಬಿದ್ದಿದ್ದು, ಶೇ.3ರಷ್ಟು ವಾಡಿಕೆಗಿಂತ ಹೆಚ್ಚಾಗಿದೆ. ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಮಾತ್ರ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ದಕ್ಷಿಣ ಒಳನಾಡಿನಲ್ಲಿ ಶೇ.2ರಷ್ಟು ಹಾಗೂ ಮಲೆನಾಡಿನಲ್ಲಿ ಶೇ.8ರಷ್ಟು ವಾಡಿಕೆಗಿಂತ ಮಳೆ ಕೊರತೆಯಾಗಿದೆ.
ಚಾಮರಾಜನಗರದಲ್ಲಿ ಶೇ.29,ಚಿತ್ರದುರ್ಗದಲ್ಲಿ ಶೇ.10, ಚಿಕ್ಕಮಗಳೂರು, ಬೆಂಗಳೂರು ದಕ್ಷಿಣದಲ್ಲಿ ಶೇ.13, ಶಿವಮೊಗ್ಗದಲ್ಲಿ ಶೇ,11, ಹಾವೇರಿಯಲ್ಲಿ ಶೇ.17 ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ ಶೇ.12ರಷ್ಟು ಮಳೆ ಕೊರತೆ ಕಂಡು ಬಂದಿದೆ.ನಿನ್ನೆ ರಾಜ್ಯದಲ್ಲಿ ಸಾಧಾರಣ ಮಳೆಯಾಗಿದ್ದು, ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಿದೆ. ಉಳಿದೆಡೆ ಚದುರಿಂತೆ ಮಳೆಯಾಗಿದ್ದು, ಕುಮಟಾ ತಾಲ್ಲೂಕಿನ ಕಲಭಾಗ ಗ್ರಾಮ ಪಂಚಾಯಿತಿಯಲ್ಲಿ 68 ಮಿ.ಮೀ.ನಷ್ಟು ಅತಿಹೆಚ್ಚು ಮಳೆ ಬಿದ್ದಿದೆ.
ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳು ಸೇರಿದಂತೆ ರಾಜ್ಯದ ಪೂರ್ವ ಭಾಗದ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗಲಿದೆ. ಬೆಂಗಳೂರು ಸುತ್ತಮುತ್ತಲ ಜಿಲ್ಲೆಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ಹಾಗೂ ರಾತ್ರಿ ವೇಳೆ ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗಲಿದೆ.