Monday, January 13, 2025
Homeರಾಜಕೀಯ | Politicsಕಾಂಗ್ರೆಸ್‌ನಲ್ಲಿ ಕುರ್ಚಿ ಕಿತ್ತಾಟವಿಲ್ಲ : ಸುರ್ಜೇವಾಲ

ಕಾಂಗ್ರೆಸ್‌ನಲ್ಲಿ ಕುರ್ಚಿ ಕಿತ್ತಾಟವಿಲ್ಲ : ಸುರ್ಜೇವಾಲ

There is no chair fight in Congress: Surjewala

ಬೆಂಗಳೂರು,ಜ.13- ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಕುರ್ಚಿಯ ಕಿತ್ತಾಟ ಇಲ್ಲ. ಬಿಜೆಪಿ-ಜೆಡಿಎಸ್ನಲ್ಲಿ ಇರುವ ನಾಯಕತ್ವದ ಗೊಂದಲಗಳನ್ನು ಮುಚ್ಚಿಡಲು ಕೆಲವು ಮಾಧ್ಯಮಗಳ ಮೂಲಕ ದಿನಕ್ಕೊಂದು ಕತೆಯನ್ನು ಹರಿಯಬಿಡಲಾಗುತ್ತಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಜಾರಿಗೊಳಿಸಲಾದ ಪಂಚಖಾತ್ರಿ ಯೋಜನೆಗಳು ದೇಶದಲ್ಲೇ ದೊಡ್ಡ ಪ್ರಮಾಣದ ಕಲ್ಯಾಣ ಕಾರ್ಯಕ್ರಮಗಳಾಗಿವೆ. ಇದರಿಂದಾಗಿ ಬಿಜೆಪಿಯವರ ಹೊಟ್ಟೆಯಲ್ಲಿ ಚಿಟ್ಟೆಗಳು ಹಾರುತ್ತಿವೆ ಎಂದು ಲೇವಡಿ ಮಾಡಿದರು.

58 ಸಾವಿರ ಕೋಟಿ ರೂ.ಗಳಷ್ಟು ಹಣ ನೇರವಾಗಿ ಫಲಾನುಭವಿಗಳ ಖಾತೆಗೆ ರವಾನೆಯಾಗುತ್ತಿದೆ. ಬಿಜೆಪಿ ಮತ್ತು ಜೆಡಿಎಸ್ನ ನಾಯಕರು ಈ ಗ್ಯಾರಂಟಿ ಯೋಜನೆಗಳ ಕುರಿತು ಅಸಹನೆ ಹೊಂದಿದ್ದಾರೆ. ಅದಕ್ಕಾಗಿ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಅವರ ಟೀಕೆಗಳು ಕಾಂಗ್ರೆಸ್ ಪಕ್ಷಕ್ಕಾಗಲೀ, ಸಿದ್ದರಾಮಯ್ಯ ಅಥವಾ ಡಿ.ಕೆ.ಶಿವಕುಮಾರ್ ಅವರಿಗಾಗಲೀ ಪರಿಣಾಮ ಬೀರುವುದಿಲ್ಲ. ನೇರವಾಗಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಮತ್ತು ರಾಜ್ಯದ ಜನರ ಮೇಲೆ ದಾಳಿಯಾಗಿದೆ ಎಂದರು.

ಬಿಜೆಪಿಯವರು ತಮ ವೈಫಲ್ಯವನ್ನು ಮುಚ್ಚಿಕೊಳ್ಳಲು ದಿನಕ್ಕೊಂದು ಚಿತ್ರಕಥೆಯನ್ನು ಸೃಷ್ಟಿಸಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿಯಲ್ಲಿ ಬಣ ಬಡಿದಾಟಗಳು ತೀವ್ರವಾಗಿವೆ. ವಿಜಯೇಂದ್ರ, ಆರ್.ಅಶೋಕ್, ಅಶ್ವತ್ಥನಾರಾಯಣ ಅವರದು ಒಂದು ಗುಂಪಾದರೆ ರಮೇಶ್ ಜಾರಕಿಹೊಳಿ, ಬಸನಗೌಡ ಯತ್ನಾಳ್ ಹಾಗೂ ಮತ್ತಿತರರು ಮತ್ತೊಂದು ಬಣದಲ್ಲಿ ಕಿತ್ತಾಡುತ್ತಿದ್ದಾರೆ.

ಜೆಡಿಎಸ್ನಲ್ಲೂ ಇದೇ ರೀತಿಯ ನಾಯಕತ್ವದ ಸಂಘರ್ಷ ಇದೆ. ಕಾಂಗ್ರೆಸ್ನಲ್ಲಿ ಯಾವುದೇ ಗುಂಪುಗಾರಿಕೆಗಳಿಲ್ಲ. ಮುಖ್ಯಮಂತ್ರಿ ಹುದ್ದೆಗಾಗಲೀ ಅಥವಾ ಇನ್ಯಾವುದೇ ಅಧಿಕಾರಕ್ಕಾಗಲೀ ಸಂಘರ್ಷವಿಲ್ಲ ಎಂದರು.

ಇದೇ ವೇಳೆ ಮಕರಸಂಕ್ರಾತಿಯ ಶುಭಾಶಯಗಳನ್ನು ಕೋರಿದ ರಣದೀಪ್ ಸಿಂಗ್ ಸುರ್ಜೇವಾಲ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದ ಶುಭಾಶಯಗಳನ್ನು ತಿಳಿಸಿದರು.

ಇಂದು ಕೆಪಿಸಿಸಿ ಕಚೇರಿಯಲ್ಲಿ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ್ ಸಮಾವೇಶದ ಕುರಿತು ಚರ್ಚೆ ನಡೆಸಲಾಯಿತು. ಈ ಹಿಂದೆ ನಿಗದಿಯಾಗಿದ್ದ ಸಮಾವೇಶ ಮಾಜಿ ಪ್ರಧಾನಿ ಮನಮೋಹನ್ಸಿಂಗ್ ಅವರ ಅಕಾಲಿಕ ನಿಧನದಿಂದ ಮುಂದೂಡಲ್ಪಟ್ಟಿತ್ತು. ಜ.21 ರಂದು ಸಮಾವೇಶಕ್ಕೆ ದಿನಾಂಕ ನಿಗದಿಪಡಿಸಲಾಗಿದೆ. ಅದರ ಕುರಿತು ಚರ್ಚೆ ನಡೆಸುವುದಾಗಿ ತಿಳಿಸಿದರು.

ಕೇಂದ್ರ ಗೃಹಸಚಿವ ಅಮಿತ್ ಶಾ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದರು. ಇದು ಪ್ರತಿಯೊಬ್ಬ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವ್ಯಕ್ತಿಗಾದ ಅಪಮಾನ ಎಂದರು.

RELATED ARTICLES

Latest News