ಕೆಂಗೇರಿ, ಡಿ. 15- ಶ್ರೀ ಆದಿಚುಂಚನಗಿರಿ ಮಠ ಹಾಗೂ ವಿಶ್ವ ಒಕ್ಕಲಿಗರ ಮಠದ ನಡುವೆ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳಿಲ್ಲ, ನಾಥ ಪಂತದ ರೀತಿಯಲ್ಲಿಯೇ ಎರಡು ಮಠಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ಆದಿಚುಂಚನಗಿರಿ ಮಠದ ಪೀಠಾಧಿಪತಿಗಳಾದ ಡಾ. ಶ್ರೀ ನಿರ್ಮಲಾ ನಂದನಾಥ ಸ್ವಾಮೀಜಿ ಅವರು ತಿಳಿಸಿದರು. ಮೈಸೂರುರಸ್ತೆಯ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಆವರಣದಲ್ಲಿ ಆಯೋಜಿಸಿದ್ದ ನೂತನ ಪಟ್ಟಾಧಿಕಾರ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನೂತನ ಪೀಠಾಧಿಪತಿಗಳಾದ ಡಾ.ಶ್ರೀನಿಶ್ಚಲಾನಂದನಾಥ ಸ್ವಾಮೀಜಿ ಸಮುದಾಯದ ಏಳಿಗೆಗಾಗಿ ಶ್ರಮಿಸಬೇಕು. ಇದರೊಂದಿಗೆ ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಅವರ ಆಶಯಗಳಿಗೆ ಮತ್ತಷ್ಟು ಶಕ್ತಿಯನ್ನು ತುಂಬುವ ಕಾರ್ಯ ನಿರ್ವಹಿಸಬೇಕೆಂದರು.
ನೀಡುಮಾಮಿಡಿ ಮಠದ ಶ್ರೀ ವೀರಭದ್ರ ಚನ್ನಮಲ್ಲ ದೇಶಿಕೇಂದ್ರ ಮಹಾ ಸ್ವಾಮೀಜಿ ಮಾತನಾಡಿ, ನಮ ದೇಶದ ಗುರು ಪರಂಪರೆ ಶ್ರೇಷ್ಠ ಪರಂಪರೆಯಾಗಿದ್ದು, ಉತ್ತಮ ಸಮಾಜ ನಿರ್ಮಾಣಕ್ಕೆ ಮಠಗಳು ಕೊಡುಗೆ ನೀಡಿವೆ ಎಂದರು.
ಶ್ರೀ ಮಠದ ಹಿರಿಯ ಗುರುಗಳ ಮಾರ್ಗದರ್ಶನಂತೆ ಕಾರ್ಯನಿರ್ವಹಿಸಿ ಅವರ ನಾಲ್ಕು ದಶಕಗಳ ಸೇವೆಯನ್ನು ಮತ್ತಷ್ಟು ವಿಸ್ತರಿಸಿ ಗುರುಗಳ ಆಶೀರ್ವಾದಕ್ಕೆ ಪಾತ್ರರಾಗಬೇಕೆಂದರು, ಗುರುಗಳ ಕಣ್ಣಲ್ಲಿ ಯಾವುದೇ ರೀತಿಯ ಕಣ್ಣೀರು ಬರದಂತೆ, ಅವರಿಗೆ ನೋವಾಗದಂತೆ ಎಚ್ಚರಿಕೆ ವಹಿಸಿ ಆ ಮೂಲಕ ನಿಮ ಸೇವೆಯನ್ನು ಸಮಾಜದ ಒಳಿತಿಗಾಗಿ ಅರ್ಪಿಸಬೇಕು ಎಂದು ಹೇಳಿದರು.
ಸ್ಪಟಿಕಪುರಿ ಮಹಾ ಸಂಸ್ಥಾನ ಮಠದ ಪೀಠಾಧಿಪತಿಗಳ ಶ್ರೀ ನಂಜಾವದೂತ ಮಹಾ ಸ್ವಾಮೀಜಿ, ವಿನಯ್ ಗುರೂಜಿ, ವಿವಿಧ ಮಠಗಳಿಂದ ಆಗಮಿಸಿದ್ದ ಶ್ರೀಗಳು, ಶಾಸಕರು ನಾಗತಿಹಳ್ಳಿ ರಮೇಶ್, ಪಂಚಲಿಂಗಯ್ಯ, ಮಾರಾಣ್ಣ, ಆಡಿಟರ್ ನಾಗರಾಜ್, ಬಿ. ಕೃಷ್ಣಪ್ಪ ಸೇರಿದಂತೆ ಹಲವು ಮುಖಂಡರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.