ಬೆಂಗಳೂರು,ನ.28- ಜೆಡಿಎಸ್- ಬಿಜೆಪಿ ಶಾಸಕರನ್ನು ಯಾರೂ ಕೊಂಡುಕೊಳ್ಳಲು ಮುಂದಾಗಿಲ್ಲ. ಹೀಗಾಗಿ ಅವರ ಒಗ್ಗಟ್ಟು ಪ್ರದರ್ಶನಕ್ಕೂ ನಮಗೂ ಸಂಬಂಧವಿಲ್ಲ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮಾನ್ಯವಾಗಿ ಅಂಗಡಿಗಳಿಗೆ ಹೋದಾಗ ಯಾವುದಾದರೂ ವಸ್ತುವನ್ನು ಖರೀದಿಸಲು ಮುಂದಾಗುತ್ತೇವೆ. ಅದು ಮಾರಾಟಕ್ಕಿಲ್ಲ ಎಂದಾದರೆ ಬೆಲೆ ಕೇಳಲು ಹೋಗುವುದಿಲ್ಲ. ಅದೇ ರೀತಿ ಶಾಸಕರನ್ನು ಖರೀದಿಸಲು ನಾವು ಮುಂದಾಗಿಲ್ಲ. ಶಾಸಕ ಸಿ.ಪಿ.ಯೋಗೇಶ್ವರ್ ಸಹಜವಾಗಿ ಹೇಳಿಕೆ ನೀಡಿದ್ದಾರೆ. ಅದನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ ಎಂದರು.
ದೆಹಲಿಯಲ್ಲಿ ನಾಳೆ ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ಇದೆ. ಅದರಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತೆರಳುತ್ತಿದ್ದಾರೆ. ಸಭೆಯ ಬಳಿಕ ಹೈಕಮಾಂಡ್ ನಾಯಕರ ಜೊತೆ ಚರ್ಚೆ ನಡೆಸಿ ಸಚಿವ ಸಂಪುಟ ಪುನರ್ ರಚನೆ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತಂತೆ ಚರ್ಚೆ ನಡೆಸಬಹುದು ಅಥವಾ ನಡೆಸದೆಯೇ ಇರಬಹುದು ಎಂದು ಹೇಳಿದರು.
ಸಂಪುಟ ಪುನರ್ ರಚನೆ ಹಾಗೂ ಅಧ್ಯಕ್ಷರ ಬದಲಾವಣೆ ವಿಚಾರದಲ್ಲಿ ಹೈಕಮಾಂಡ್ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ. ದೆಹಲಿ ಮಟ್ಟದಲ್ಲಿ ನಡೆದಿರುವ ಸಭೆಯಲ್ಲಿ ಯಾವ ರೀತಿ ಚರ್ಚೆಯಾಗಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. 35 ವರ್ಷಗಳಿಂದ ಪಕ್ಷದ ಶಿಸ್ತನ್ನು ಚಾಚೂ ತಪ್ಪದೆ ಪಾಲಿಸುತ್ತಾ ಬಂದಿದ್ದೇನೆ.
ನನ್ನ ಖಾತೆ ಬದಲಾವಣೆ ಕುರಿತಂತೆ ಯಾವುದೇ ವಿಚಾರವಾದರೂ ಹೈಕಮಾಂಡ್ ನೀಡುವ ಆದೇಶಕ್ಕೆ ಬದ್ಧನಾಗಿರುವುದಾಗಿ ಹೇಳಿದರು.ಬಿಜೆಪಿಯ ಮಾಜಿ ಶಾಸಕ ಪ್ರೀತಂಗೌಡ ಕಾಂಗ್ರೆಸ್ ಸೇರುವ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದರು.
ಮಂಡ್ಯದಲ್ಲಿ ಅಬಕಾರಿ ಇಲಾಖೆ ಅಧಿಕಾರಿ ಮದ್ಯದಂಗಡಿಯ ಪರವಾನಗಿ ನವೀಕರಣಕ್ಕೆ ಲಂಚ ಕೇಳಿರುವ ಬಗ್ಗೆ ತಮಗೆ ಮಾಹಿತಿ ಇಲ್ಲ. ಆರೋಪ ಮಾಡಿರುವ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸರಿಗೆ ದೂರು ನೀಡಿದರೆ ತಕ್ಷಣ ಕ್ರಮ ಕೈಗೊಳ್ಳಲು ಸೂಚಿಸುತ್ತೇನೆ. ಲೋಕಾಯುಕ್ತಕ್ಕೆ ದೂರು ನೀಡಿದರೆ ಅಲ್ಲಿ ತನಿಖೆ ನಡೆಯುತ್ತದೆ ಎಂದು ನುಡಿದರು.
ಅಪರಾಧ ಚಟುವಟಿಕೆಗಳು ಬೆಳಗಾವಿಯಲ್ಲೇ ಹೆಚ್ಚಾಗುತ್ತಿವೆ ಎಂಬುದಕ್ಕೆ ಪುರಾವೆ ಇಲ್ಲ. ಒಂದು ವೇಳೆ ಯಾವುದಾದರೂ ಚಟುವಟಿಕೆಗಳು ಹೆಚ್ಚಾಗಿದ್ದರೆ ಕಾನೂನು ರೀತಿಯ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.