Monday, March 17, 2025
Homeರಾಜ್ಯಯುವನಿಧಿ ಯೋಜನೆ ಸ್ಥಗಿತಗೊಳಿಸುವ ಪ್ರಶ್ನೆಯೇ ಇಲ್ಲ : ಶರಣಪ್ರಕಾಶ್ ಪಾಟೀಲ್‌

ಯುವನಿಧಿ ಯೋಜನೆ ಸ್ಥಗಿತಗೊಳಿಸುವ ಪ್ರಶ್ನೆಯೇ ಇಲ್ಲ : ಶರಣಪ್ರಕಾಶ್ ಪಾಟೀಲ್‌

There is no question of stopping the Yuva Nidhi Scheme: Sharan Prakash Patil

ಬೆಂಗಳೂರು, ಮಾ.17– ವಿಧಾನಸಭೆ ಚುನಾವಣೆಗೂ ಮುನ್ನ ಘೋಷಣೆ ಮಾಡಿದಂತೆ ಪದವಿ ಹಾಗೂ ಡಿಪ್ಲೊಮಾ ಪೂರ್ಣಗೊಳಿಸಿದ ಪದವೀಧರರಿಗೆ ಯುವನಿಧಿ ವತಿಯಿಂದ ನೀಡಲಾಗುತ್ತಿರುವ ಆರ್ಥಿಕ ಸಹಾಯವನ್ನು ನೀಡಲು ಸರ್ಕಾರ ಬದ್ಧವಾಗಿದ್ದು, ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಕೌಶಲ್ಯಾಭಿವೃದ್ಧಿ ಮತ್ತು ಯುವ ಸಬಲೀಕರಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅಭಯ ನೀಡಿದ್ದಾರೆ.

ಸೋಮವಾರ ವಿಧಾನಪರಿಷತ್ ನಲ್ಲಿ ಬಿಜೆಪಿಯ ಅರುಣ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ಕೊಟ್ಟವಾಗ್ದಾನದಂತೆ ನಡೆದುಕೊಳ್ಳುತ್ತೇವೆ. ಚುನಾವಣೆಗೂ ಮುನ್ನ ಜನತೆಗೆ ಯಾವ ಭರವಸೆಯನ್ನು ಕೊಟ್ಟಿದ್ದೇವೋ ಅದನ್ನು ಈಡೇರಿಸಲು ನಾವು ಬದ್ಧರಾಗಿದ್ದೇವೆ. ಯುವನಿಧಿ ಯೋಜನೆಯನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ವದಂತಿಗಳಿಗೆ ತೆರೆ ಎಳೆದರು.

ಕೆಲವು ತಾಂತ್ರಿಕ ಕಾರಣಗಳಿಂದ ಯುವನಿಧಿ ಯೋಜನೆಯಡಿ ನೀಡಲಾಗುತ್ತಿರುವ ಆರ್ಥಿಕ ನೆರವು ವಿಳಂಬವಾಗಿರಬಹುದು. ಹಾಗೆಂದು ಇದನ್ನು ಸ್ಥಗಿತ ಮಾಡುತ್ತೇವೆ ಎಂದು ಯಾರೂ ಭಾವಿಸಬೇಕಾಗಿಲ್ಲ. ಅನುದಾನದ ಕೊರತೆಯೂ ಇಲ್ಲ. ನಿಯಮಗಳ ಅನುಸಾರವಾಗಿ ನೀಡಬೇಕು ಎಂದು ಸ್ಪಷ್ಟಪಡಿಸಿದರು.

ಯುವನಿಧಿಗೆ ಇಂತಿಷ್ಟೇ ಎಂದು ಟಾರ್ಗೆಟ್ ಮಾಡಿಕೊಂಡಿಲ್ಲ, ಇದು ಅನ್ ಲಿಮಿಟೆಡ್, ತಿಂಗಳಿನಿಂದ ತಿಂಗಳು, ವರ್ಷದಿಂದ ವರ್ಷಕ್ಕೆ ಫಲಾನುಭವಿಗಳ ಸಂಖ್ಯೆ ಹೆಚ್ಚಾಗುತ್ತದೆ. ಮುಂದಿನ ವರ್ಷ 5 ಲಕ್ಷವಾಗಬಹುದು. ನಂತರ 10 ಲಕ್ಷ ತಲುಪುವ ಗುರಿ ಇಟ್ಟುಕೊಂಡಿದ್ದೇವೆ. ಪ್ರತಿ ವರ್ಷ ವಿದ್ಯಾರ್ಥಿಗಳು ಸಾವಿರಾರು ಸಂಖ್ಯೆಯಲ್ಲಿ ಪದವಿ ಮತ್ತು ಡಿಪ್ಲೊಮಾ ಪೂರ್ಣಗೊಳಿಸಿ ಬರುತ್ತಾರೆ ಎಂದರು.

ಪದವಿ ಡಿಪ್ಲೊಮಾ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಈ ಯೋಜನೆಯಡಿ ಆರ್ಥಿಕ ನೆರವು ಪಡೆಯಬೇಕಾದರೆ ಮೊದಲು ತಮ್ಮ ಹೆಸರುಗಳನ್ನು ನೋಂದಣಿ ಮಾಡಿಕೊಳ್ಳಬೇಕು. ಇದಕ್ಕಾಗಿ ಇಲಾಖೆಗೆ ಸೇವಾ ಸಿಂಧು ಪೋರ್ಟಲ್ ಸೃಜನೆ ಮಾಡಿದೆ. ಇಲ್ಲಿವರೆಗೆ 1.74181 ವಿದ್ಯಾರ್ಥಿಗಳು ಇದರ ನೆರವು ಪಡೆದಿದ್ದಾರೆ ಎಂದು ವಿವರಿಸಿದರು.

ಹೆಸರು ನೋಂದಣಿ ಮಾಡಿದ ಮೇಲೆ ಅಭ್ಯರ್ಥಿಗಳು 181 ದಿನ ಕಾಯಬೇಕಾಗುತ್ತದೆ. ಈ ಕೆಟಗಿರಿಯಲ್ಲಿ 49 ಸಾವಿರ ಜನರಿದ್ದಾರೆ. ಹೆಚ್ಚಿನ ವಿದ್ಯಾಭ್ಯಾಸ ಅಥವಾ ಉದ್ಯೋಗಕ್ಕೆ ಸೇರಿದರೆ ಇದರ ನೆರವು ಸಿಗುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

ಪದವಿ ಹಾಗೂ ಡಿಪ್ಲೊಮಾ ಪೂರ್ಣಗೊಳಿಸಿದ ತಕ್ಷಣವೇ ಅರ್ಹರಿಗೆ ಇದು ಅನ್ವಯವಾಗುತ್ತದೆ. ಹೆಸರು ನೋಂದಾಯಿಸಿಕೊಂಡು ಪೋರ್ಟಲ್‌ನಲ್ಲಿ ಅರ್ಜಿ ಹಾಕಿದರೆ ನೋಂದಣಿಯಾಗುತ್ತದೆ. ಇದಕ್ಕೆ ಯಾರ ಸಹಾಯವೂ ಬೇಕಾಗಿಲ್ಲ, ಇಲಾಖೆಯು ಎಲ್ಲಾ ರೀತಿಯ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ ಎಂದು ಹೇಳಿದರು.

ಗ್ರಾಮೀಣ ಪ್ರದೇಶದ ಯುವಕರಿಗೆ ಮಾಹಿತಿ ಕೊಡಲು ಅಗತ್ಯವಾದ ವ್ಯವಸ್ಥೆ ಮಾಡಿದ್ದೇವೆ. ಕೆಲವು ಸಣ್ಣಪುಟ್ಟ ತಾಂತ್ರಿಕ ತೊಂದರೆಗಳು ಎದುರಾಗಬಹುದು ವಿದ್ಯಾರ್ಥಿಗಳು ಗಾಬರಿಪಡದೆ ಸರ್ಕಾರ ಸವಲತ್ತು ಪಡೆಯಲು ಮುಂದಾಗಬೇಕೆಂದು ಸಚಿವರು ಮನವಿ ಮಾಡಿದರು.

ಶೀಘ್ರದಲ್ಲೇ ಸ್ಥಾಪನೆ :
ಸಚಿವ ತಿಪ್ಪನಪ್ಪ ಕಣಕನೂರು ಅವರ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಸಚಿವರು, ಮೈಸೂರು, ಕಲಬುರಗಿಯ ವೈದ್ಯಕೀಯ ಕಾಲೇಜುಗಳಲ್ಲಿ ನಿಮಾನ್ಸ್ ಮಾದರಿಯ ಸಂಸ್ಥೆಗಳನ್ನು ತಲಾ 7 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗುತ್ತದೆ. ಅತೀ ಶೀಘ್ರದಲ್ಲೇ ಸಾರ್ವಜನಿಕ ಸೇವೆಗೆ ಲೋಕಾರ್ಪಣೆ ಮಾಡುತ್ತೇವೆ ಎಂದರು.

ಕಲಬುರಗಿಯಲ್ಲಿ ಜಯದೇವ ಹೃದ್ರೋಗ ಸಂಸ್ಥೆ, ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ, ಕ್ಯಾನ್ಸರ್ ಆಸ್ಪತ್ರೆ ಹೀಗೆ ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯ ಸೌಲಭ್ಯ ಒದಗಿಸಲು ನಾವು ಹಲವಾರು ಕ್ರಮಗಳನ್ನು ಕೈಗೊಂಡಿದ್ದೇವೆ. ಎಲ್ಲರಿಗೂ ಸರ್ಕಾರ ಉತ್ತಮವಾದ ಆರೋಗ್ಯ ಸೇವೆಯನ್ನು ಒದಗಿಸಲು ಬದ್ಧವಾಗಿದೆ ಎಂದು ಹೇಳಿದರು.

ಬಿಜೆಪಿಯ ಶಶಿಲ್ ನಮೋಶಿಯವರ ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ಶರಣಪ್ರಕಾಶ್ ಪಾಟೀಲ್, ಜಯದೇವ ಹೃದ್ರೋಗ ಸಂಸ್ಥೆ ಸುಧಾರಣೆ ಕುರಿತಂತೆ ಥಾಮಸ್ ಸಮಿತಿಯ ವರದಿಯನ್ನು ನಿರೀಕ್ಷೆ ಮಾಡಲಾಗುತ್ತದೆ. ಇವರು ವರದಿಯನ್ನು ಸಲ್ಲಿಸಲು ಆರು ತಿಂಗಳು ಕಾಲಾವಕಾಶ ಕೋರಿದ್ದರು. ನಾನು ಮೂರು ತಿಂಗಳೊಳಗೆ ವರದಿ ನೀಡುವಂತೆ ಸೂಚನೆ ಕೊಟ್ಟಿದ್ದೇನೆ. ಈ ವರದಿಯಲ್ಲಿ ಯಾವೆಲ್ಲಾ ಶಿಫಾರಸ್ಸುಗಳನ್ನು ಮಾಡಿದ್ದಾರೆ ಎಂಬುದರ ಕುರಿತು ಅಧಿಕಾರಿಗಳ ಜೊತೆ ಅಧ್ಯಯನ ನಡೆಸಿ ಸಂಸ್ಥೆಯನ್ನು ಅಭಿವೃದ್ಧಿಪಡಿಸುವುದಾಗಿ ಭರವಸೆ ನೀಡಿದರು.

RELATED ARTICLES

Latest News