ಬೆಂಗಳೂರು, ಡಿ.4- ಮುಖ್ಯ ಮಂತ್ರಿ ಅಥವಾ ಯಾವುದೋ ಅಧಿಕಾರ ಹಂಚಿಕೆ ದೆಹಲಿಯಲ್ಲಿ ಒಪ್ಪಂದಗಳಾಗಿರುವ ಸಾಧ್ಯತೆಗಳಿದ್ದು, ಈ ಬಗ್ಗೆ ನಮಗೆ ಹೆಚ್ಚಿನ ಮಾಹಿತಿ ಇಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ದೆಹಲಿಯಲ್ಲಿ ಏನು ಮಾತುಕತೆಯಾಗಿದೆ ಎಂಬುದು ನಮಗ್ಯಾರಿಗೂ ಗೊತ್ತಿಲ್ಲ. ಆದರೆ ಒಪ್ಪಂದಗಳಾಗಿರುವ ಬಗ್ಗೆ ಚರ್ಚೆಗಳಾಗುತ್ತಿವೆ. ಆರು ತಿಂಗಳ ಹಿಂದೆಯೇ ನಾನು ಈ ಹೇಳಿಕೆ ನೀಡಿದ್ದೇನೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ರವರು ಖಾಸಗಿ ಸಂದರ್ಶನದಲ್ಲಿ ಅಧಿಕಾರ ಹಂಚಿಕೆ ಸೂತ್ರದ ಬಗ್ಗೆ ಸುಳಿವು ನೀಡಿರುವುದು ಹೊಸದೇನಲ್ಲ ಎಂದರು.
ಅಧಿಕಾರ ಹಂಚಿಕೆ ಸಂಬಂಧಪಟ್ಟಂತೆ ಯಾವ ರೀತಿ ಮಾತುಕತೆಗಳಾಗಿವೆ ಎಂಬುದು ಇಲ್ಲಿನ ನಾಯಕರ್ಯಾರಿಗೂ ವಿಚಾರ ಗೊತ್ತಿಲ್ಲ ಹಾಗೂ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ರ ನಡುವೆ ಮಾತುಕತೆಯಾಗಿದ್ದು, ಹೈಕಮಾಂಡ್ಗೆ ಮಾತ್ರ ವಿಚಾರ ತಿಳಿದಿರುತ್ತದೆ ಎಂದು ಹೇಳಿದರು.
5 ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಎಂದು ನಾವಷ್ಟೇ ಅಲ್ಲ, ಮಾಜಿ ಸಂಸದ ಡಿ.ಕೆ.ಸುರೇಶ್ ಕೂಡ ಹೇಳಿದ್ದಾರೆ. ಹಾಸನದಲ್ಲಿ ಸಮಾವೇಶ ನಡೆಯುವ ಹಂತದಲ್ಲಿ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿರುವುದರ ಉದ್ದೇಶ ನಮಗೆ ಗೊತ್ತಿಲ್ಲ. ಈ ಬಗ್ಗೆ ಡಿ.ಕೆ.ಶಿವಕುಮಾರ್ರವರೇ ಸ್ಪಷ್ಟನೆ ನೀಡಬೇಕು ಎಂದರು.
ಸಿಎಂ, ಡಿಸಿಎಂ ಸೇರಿದಂತೆ ಯಾವುದೇ ಅಧಿಕಾರಗಳ ಬಗ್ಗೆ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಬೇಕು. ಈವರೆಗೆ ದೆಹಲಿಯಿಂದ ಯಾವುದೇ ಮಾಹಿತಿ ಇಲ್ಲ ಎಂದು ತಿಳಿಸಿದರು. 2028 ಕ್ಕೆ ತಾವು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ. ಆ ಸಂದರ್ಭದಲ್ಲಿ ನಮೊಂದಿಗೆ ಮತ್ತಷ್ಟು ಮಂದಿ ಪ್ರತಿಸ್ಪರ್ಧಿಗಳು ಬರುವ ಸಾಧ್ಯತೆಯಿದೆ. ಎಲ್ಲರಿಗೂ ಅಭಿಲಾಷೆ ಸಹಜ. ಆಗಿನ ಸಂದರ್ಭ, ಸನ್ನಿವೇಶ ಕುರಿತಂತೆ ಪಕ್ಷ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದರು.
ಹಾಸನದಲ್ಲಿ ಕಾಂಗ್ರೆಸ್ ಸಮಾವೇಶ ನಡೆಯುತ್ತಿದೆ. ಏನೇ ಆದರೂ ಸಮಾವೇಶದ ಮೂಲ ಉದ್ದೇಶ ಪಕ್ಷ ಬಲವರ್ಧನೆ. ಆ ನಿಟ್ಟಿನಲ್ಲಿ ಕಾರ್ಯಕ್ರಮ ನಡೆಯಲಿದೆ. ಮುಡಾ ಪ್ರಕರಣದಲ್ಲಿ ನ್ಯಾಯೋಚಿತ ತನಿಖೆ ನಡೆಯುತ್ತಿದೆ.
ಕಾನೂನು ತಂಡ :
ಸೂಕ್ತ ಕ್ರಮ ಕೈಗೊಳ್ಳುತ್ತದೆ. ಬಿಜೆಪಿಯವರು ಅನಗತ್ಯವಾಗಿ ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿರುತ್ತಾರೆ. ನ್ಯಾಯಾಂಗದ ಹೋರಾಟದ ಮೂಲಕ ಅದಕ್ಕೆ ಉತ್ತರ ನೀಡಲಾಗುವುದು.