ಬೆಂಗಳೂರು,ಮೇ21-ನಗರದ ಹೊರವಲಯದಲ್ಲಿ ನಡೆದ ರೇವೊ ಪಾರ್ಟಿಯಲ್ಲಿ ಖ್ಯಾತ ನಟಿ ಸೇರಿದಂತೆ 101 ಮಂದಿ ಭಾಗಿಯಾಗಿದ್ದರು. ಇದರಲ್ಲಿ ಯಾವುದೇ ಜನಪ್ರತಿನಿಧಿಗಳು ಇರಲಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಸ್ಪಷ್ಟಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 19ರಂದು ರಾತ್ರಿ ಎಲೆಕ್ಟ್ರಾನಿಕ್ ಸಿಟಿಯ ಫಾರ್ಮ್ ಹೌಸ್‌ವೊಂದರಲ್ಲಿ ಸನ್‌ಸೆಟ್ ಟೊ ಸನ್‌ರೈಸ್ ವಿಕ್ಟರಿ ಈವೆಂಟ್‌ನಲ್ಲಿ ಹೊರರಾಜ್ಯದವರು ಸೇರಿದಂತೆ ಕೆಲ ಸ್ಥಳೀಯರು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂಬ ಮಾಹಿತಿ ಆಧರಿಸಿ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.
ಸುಮಾರು 100ಕ್ಕೂ ಹೆಚ್ಚು ಜನ ಪಾರ್ಟಿಯಲ್ಲಿ ಹಾಜರಿದ್ದರು. ಕೂಲಂಕುಷ ತನಿಖೆ ಕೈಗೊಂಡ ವೇಳೆ ಅಲ್ಲಿ ಮಾದಕವಸ್ತುಗಳಾದ ಎಂಬಿಎಂಎ, ಕೊಕೈನ್, ಐಡ್ರೋ ಗಾಂಜಾ ಸೇರಿದಂತೆ ಹಲವು ಮಾದಕವಸ್ತುಗಳು ಪತ್ತೆಯಾಗಿವೆ. 101 ಮಂದಿಯ ರಕ್ತ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಅದರ ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಈ ಕಾರ್ಯಚರಣೆಯಲ್ಲಿ ಶ್ವಾನದಳ ಬಳಕೆ ಮಾಡಿರುವುದರಿಂದ ಕಾರ್ಯಾಚರಣೆ ಯಶಸ್ವಿಯಾಗಿದೆ. ಅಲ್ಲಿದ್ದ ಕೆಲವರು ಮಾದಕವಸ್ತುಗಳನ್ನು ಕಾರು ಮತ್ತು ವಿವಿಧೆಡೆ ಬಚ್ಚಿಡಲಾಗಿದ್ದ ಮಾದಕಗಳನ್ನು ಶ್ವಾನದಳ ಪತ್ತೆಹಚ್ಚಿದೆ ಎಂದರು. ಕಳೆದ ವರ್ಷ ಶ್ವಾನದಳಕ್ಕೆ ಮಾದಕವಸ್ತು ಪತ್ತೆಗೆ ವಿಶೇಷ ತರಬೇತಿ ನೀಡಲಾಗಿತ್ತು. ಆ ಶ್ವಾನಗಳನ್ನು ಮೊದಲ ಬಾರಿ ಈ ಕಾರ್ಯಚರಣೆಗೆ ಬಳಸಿ ಯಶಸ್ವಿಯಾಗಿದ್ದೇವೆ ಎಂದು ಹೇಳಿದರು.
ಈ ಸಂಬಂಧ ಎಲೆಕ್ಟ್ರಾನಿಕ್‌ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಐವರನ್ನು ಬಂಧಿಸಲಾಗಿದೆ. ಸರಹದ್ದಿನ ಆಧಾರದ ಮೇಲೆ ಈ ವ್ಯಾಪ್ತಿಯು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವುದರಿಂದ ಪ್ರಕರಣವನ್ನು ಅಲ್ಲಿಗೆ ವರ್ಗಾಯಿಸಲಾಗುವುದು ಎಂದು ಆಯುಕ್ತರು ತಿಳಿಸಿದರು.