ಬೆಂಗಳೂರು, ಅ.24- ನವೆಂಬರ್‌ನಲ್ಲಿ ಬದಲಾವಣೆಯ ಕ್ರಾಂತಿಯಾಗಲಿದೆ. ಅದರ ಬಗ್ಗೆ ಡಿಸೆಂಬರ್‌ನಲ್ಲಿ ನಡೆಯುವ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಚರ್ಚೆ ಮಾಡು ತ್ತೇವೆ ಎಂದು ಕುಣಿಗಲ್ ಕ್ಷೇತ್ರದ ಶಾಸಕ ಎಚ್.ಡಿ.ರಂಗನಾಥ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಗ್ಯಾರಂಟಿ ಯೋಜನೆಗಳು 100ಕ್ಕೆ 100 ಜನರಿಗೆ ತಲುಪಿದೆಯೇ ಎಂದು ತಿಳಿದುಕೊಳ್ಳಬೇಕಿದೆ. ನೆರೆ ಹಾವಳಿಯಿಂದ ಆಗಿರುವ ನಷ್ಟ ಪರಿಹಾರವನ್ನು ಯಾವ ರೀತಿ ತಲುಪಿಸಬೇಕು. ರಾಗಿ ಖರೀದಿ ಕೇಂದ್ರ ಆರಂಭ, ಮನೆ ಹಾಗೂ ರಸ್ತೆಗಳಿಗೆ ಅನುದಾನ ಬಿಡುಗಡೆ. ಈ ಎಲ್ಲಾ ಅಭಿವೃದ್ಧಿ ವಿಚಾರಗಳ ಬಗ್ಗೆ ನವೆಂಬರ್ ಕಳೆದ ಮೇಲೆ ಡಿಸೆಂಬರ್‌ನಲ್ಲಿನ ಅಧಿವೇಶನದಲ್ಲಿ ಕ್ರಾಂತಿಕಾರಕ ಚರ್ಚೆ ನಡೆಸುತ್ತೇವೆ ಎಂದರು.
ಮುಖ್ಯಮಂತ್ರಿ ಅವರ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಯಿಂದ ಯಾವುದೇ ರೀತಿಯ ಗೊಂದಲಗಳಾಗುವುದಿಲ್ಲ. ರಾಜ್ಯ ರಾಜಕಾರಣದ ಬಗ್ಗೆ ಹೈಕಮಾಂಡ್ ತೆಗೆದುಕೊಂಡಿರುವ ನಿರ್ಧಾರ ಎಲ್ಲರಿಗೂ ಗೊತ್ತಿದೆ. ಮುಂದಿನ ದಿನಗಳಲ್ಲೂ ಸೂಕ್ತ ಸಮಯಕ್ಕೆ ಅಗತ್ಯ ನಿರ್ಧಾರ ತೆಗೆದುಕೊಳ್ಳಲಿದೆ. ಕಾಂಗ್ರೆಸ್ ಪಕ್ಷ ಉತ್ತಮವಾಗಿದೆ ಮತ್ತು ಸದೃಢವಾಗಿದೆ ಅನಗತ್ಯವಾಗಿ ಗೊಂದಲ ಮೂಡಿಸುವ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ ಎಂದರು.
ನಾವು ಅಭಿವೃದ್ಧಿಯ ದಿಕ್ಕಿನಲ್ಲಿ ಯೋಚಿಸುತ್ತೇವೆ. ಸಚಿವ ಸಂಪುಟ ಪುನರ್‌ರಚನೆ ಮುಖ್ಯಮಂತ್ರಿಯವರ ಪರಮಾಧಿಕಾರ. ಎರಡನೇ ಭಾರಿ ಶಾಸಕನಾಗಿರುವ ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಕುಣಿಗಲ್ ತಾಲ್ಲೂಕಿನ ಅಭಿವೃದ್ದಿಗೆ ಸಾಕಷ್ಟು ಕೆಲಸ ಮಾಡಬೇಕಿದೆ. ಈ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದೇನೆ ಎಂದರು.
ಪಕ್ಷದಲ್ಲಿ ನಾನು ಸಾಮಾನ್ಯ ಕಾರ್ಯಕರ್ತ. ಯಾರಿಗೂ ಬುದ್ಧಿ ಹೇಳುವಷ್ಟು ದೊಡ್ಡವನಲ್ಲ. ಆದರೆ ನಮ ಹೇಳಿಕೆಗಳಿಂದ ಕಾಂಗ್ರೆಸ್ ಪಕ್ಷಕ್ಕೆ ನಷ್ಟವಾಗಬಾರದು ಎಂಬ ಎಚ್ಚರಿಕೆ ಎಲ್ಲರಿಗೂ ಅಗತ್ಯ ಎಂದು ಯತೀಂದ್ರ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದರು.2028ಕ್ಕೆ ಕಾಂಗ್ರೆಸ್ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರುವುದು ನಮೆಲ್ಲರ ಆದ್ಯತೆಯಾಗಿದೆ. ನಾನು ನನ್ನ ಮಿತಿಯಲ್ಲಿದ್ದೇನೆ. ಹಗುರವಾದ ಹೇಳಿಕೆಗಳನ್ನು ಜನ ಬಯಸುವುದಿಲ್ಲ. ಪಕ್ಷದ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಕಟ್ಟಪ್ಪಣೆಯಿಂದಾಗಿ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.
ಮುಖ್ಯಮಂತ್ರಿ ಹುದ್ದೆಗೆ ಸತೀಶ್ ಜಾರಕಿಹೊಳಿ ಅವರ ಹೆಸರು ಪ್ರಸ್ತಾಪಿಸುವುದರಿಂದ ಯಾವುದೇ ಗೊಂದಲವಾಗುವುದಿಲ್ಲ. ಅವರು ಒಬ್ಬ ಹಿರಿಯ ನಾಯಕ. ಅಂತಿಮವಾಗಿ ಯಾರಿಗೆ ಅವಕಾಶ ನೀಡಬೇಕೆಂಬುದನ್ನು ಹೈಕಮಾಂಡ್ ತೀರ್ಮಾನಿಸುತ್ತದೆ. ನಮ ಹೇಳಿಕೆಗಳಿಂದ ಯಾವುದೇ ಬದಲಾವಣೆಯಾಗುವುದಿಲ್ಲ ಎಂದರು.
ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷವನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅಂತಹ ಮನೆಯಿಂದ ಬಂದ ಯತೀಂದ್ರ ಸಿದ್ದರಾಮಯ್ಯ ತಮ ಹೇಳಿಕೆಗೆ ತಾವೇ ಆತವಿಮರ್ಶೆ ಮಾಡಿಕೊಳ್ಳಬೇಕು ಎಂದರು.
ಕಾಂಗ್ರೆಸ್ ಪಕ್ಷ ಜಾತ್ಯತೀತ ಸಿದ್ಧಾಂತವನ್ನು ನಂಬುತ್ತದೆ. ಡಿ.ಕೆ.ಶಿವಕುಮಾರ್ ಅವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳ ನಡುವೆ ಯಾವುದೇ ಗೊಂದಲಗಳಿಲ್ಲ ಎಂದರು.ಜನ ಪ್ರತಿನಿಧಿಗಳಾಗಿರುವವರು ಸಮುದಾಯದ ವಿಚಾರಗಳು ಬಂದಾಗ ಧ್ವನಿಗೂಡಿಸುವುದು ಸಹಜ. ವಿರೋಧ ಪಕ್ಷಗಳು ಟೀಕೆ ಮಾಡುವುದು ಸಾಮಾನ್ಯ. ಅದಕ್ಕೆ ಹೆಚ್ಚು ಒತ್ತು ನೀಡುವ ಅಗತ್ಯ ಇಲ್ಲ ಎಂದರು.
ಡಿ.ಕೆ.ಶಿವಕುಮಾರ್ ಅವರು ಕಷ್ಟಪಟ್ಟು ಪಕ್ಷ ಸಂಘಟನೆ ಮಾಡಿದ್ದಾರೆ. ಒಂದಲ್ಲ ಒಂದು ದಿನ ಅವರು ಮುಖ್ಯಮಂತ್ರಿಯಾಗಲೇ ಬೇಕು ಎಂಬುದು ನಮೆಲ್ಲರ ಅಭಿಪ್ರಾಯ. ಆದರೆ ಇಂತಹದ್ದೇ ಸಮಯದಲ್ಲಿ ಮುಖ್ಯಮಂತ್ರಿಯಾಗಬೇಕೆಂದು ನಾವು ಹೇಳುತ್ತಿಲ್ಲ ಎಂದರು.
