ಬೆಳಗಾವಿ, ಡಿ.16- ಸರ್ಕಾರದ ಮಂತ್ರಿಗಳು ಸಮಸ್ಯೆಗಳನ್ನು ಕೇಳುವುದಿಲ್ಲ. ಬಗೆ ಹರಿಸುವುದೂ ಇಲ್ಲ ಎಂದು ಲಿಂಗಸಗೂರು ಕ್ಷೇತ್ರದ ಶಾಸಕ ಮಾನಪ್ಪ ವಜ್ಜಲ್ ಆಕ್ರೋಶ ವ್ಯಕ್ತಪಡಿಸಿದರು. ಸುವರ್ಣ ಸೌಧದಲ್ಲಿ ನಡೆಯುತ್ತಿರುವ ವಿಧಾನಸಭೆ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಕುರಿತು ಸುದೀರ್ಘವಾಗಿ ಮಾತನಾಡಿದ ಅವರು, ಏಳು ಜಿಲ್ಲೆಗಳನ್ನು ಒಳಗೊಂಡ ಕಲ್ಯಾಣ ಕರ್ನಾಟಕದಲ್ಲಿ 1.30 ಕೋಟಿ ಜನಸಂಖ್ಯೆ ಇದೆ. ಬೇಸಿಗೆ ಬಂದರೆ ಜನ ನೀರಿಗಾಗಿ ಹಾಹಾಕಾರ ಮಾಡುವ ಪರಿಸ್ಥಿತಿ ಇದೆ. ಸರಿಯಾದ ಶೈಕ್ಷಣಿಕ ವ್ಯವಸ್ಥೆಗಳಿಲ್ಲ. ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಇಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಮುದುಗಲ್, ಹಟ್ಟಿ, ಲಿಂಗಸೂರು ಪಟ್ಟಣಗಳಲ್ಲಿ ಎಂಟು ದಿನಗಳಿಗೊಮೆ ನೀರು ಬಿಡಲಾಗುತ್ತಿದೆ. ಕಳೆದ ಅಧಿವೇಶನದಲ್ಲಿ ಸಚಿವರು ಒಂದು ತಿಂಗಳಲ್ಲಿ ಸಮಸ್ಯೆ ಬಗೆಹರಿಸುತ್ತೇವೆ ಎಂದು ಭರವಸೆ ನೀಡಿದ್ದರು. ಈವರೆಗೂ ಒಂದು ರೂಪಾಯಿ ಕೆಲಸ ಆಗಿಲ್ಲ. ಎಂಟು ದಿನಗಳಿಗೊಮೆ ನೀರು ಸಂಗ್ರಹಿಸಿ ಜನ ಬಳಕೆ ಮಾಡುತ್ತಿದ್ದಾರೆ ಎಂದು ಅಳಲು ತೊಡಿಕೊಂಡರು.
ಈ ವೇಳೆ ತಮ ಮಾತುಗಳಿಗೆ ಸಚಿವರು ಗಮನ ಹರಿಸುತ್ತಿಲ್ಲ. ನೀರನ್ನು ಪೂರೈಸುತ್ತಿಲ್ಲ. ನಮ ಸಮಸ್ಯೆಯನ್ನು ಕೇಳುತ್ತಿಲ್ಲ ಎಂದು ಕಿಡಿಕಾರಿದರು.
ಹಟ್ಟಿ ಚಿನ್ನದ ಗಣಿಯಿಂದ ಸರ್ಕಾರಕ್ಕೆ ಕೊಟ್ಯಾಂತರ ರೂಪಾಯಿ ಲಾಭ ಇದೆ. ಆದರೆ ಅಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಸ್ಥಳೀಯರಿಗೆ ಉದ್ಯೋಗ ಸಿಗುತ್ತಿಲ್ಲ. ಇದರಿಂದ ರಾಯಚೂರು ಜಿಲ್ಲೆಯಿಂದ ಪ್ರತಿ ವರ್ಷ 45 ರಿಂದ 50 ಸಾವಿರ ಮಂದಿ ಗುಳೇ ಹೋಗುತ್ತಿದ್ದಾರೆ. ಈ ವೇಳೆ ಅಪಘಾತವಾಗಿ ಹತ್ತಾರು ಮಂದಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಸತ್ತವರಿಗೆ ಪರಿಹಾರ ಕೊಟ್ಟು ಸರ್ಕಾರ ಕೈತೊಳೆದುಕೊಳ್ಳುತ್ತಿದೆ ಎಂದು ಆರೋಪಿಸಿದರು.
ಸಮಸ್ಯೆ ಶಾಶ್ವತ ಪರಿಹಾರ ಕಲ್ಪಿಸಿ, ಕ್ಷೇತ್ರಕ್ಕೆ ಒಂದರಂತೆ ಕಾರ್ಖಾನೆ ಆರಂಭಿಸಿ. ಐದು ಸಾವಿರ ಮಹಿಳೆಯರಿಗೆ ಕೆಲಸ ಕೊಡಿ. ಗೃಹಲಕ್ಷ್ಮೀ ಯೋಜನೆಯಿಂದ ಸಮಸ್ಯೆ ಬಗೆ ಹರಿಯುವುದಿಲ್ಲ. ಉದ್ಯೋಗ ಸೃಷ್ಟಿಯ ಮೂಲಕ ಶಾಶ್ವತ ಪರಿಹಾರ ಕಲ್ಪಿಸಿ ಎಂದು ಒತ್ತಾಯಿಸಿದರು.
371 ಜೆ ತಿದ್ದುಪಡಿಯಿಂದ ಸ್ಥಳೀಯರಿಗೆ ಅನುಕೂಲವಾಗುತ್ತಿಲ್ಲ. ಬೆಂಗಳೂರು ತುಮಕೂರಿನ ಜನ ಕಲ್ಯಾಣ ಕರ್ನಾಟಕ ಮೀಸಲಾತಿ ಸೌಲಭ್ಯ ಪಡೆದು ನೇಮಕವಾಗುತ್ತಾರೆ. ಒಂದೆರಡು ವರ್ಷ ಕೆಲಸ ಮಾಡಿ ತಮ ಜಿಲ್ಲೆಗೆ ವರ್ಗಾವಣೆಯಾಗುತ್ತಿದ್ದಾರೆ. ಇಲ್ಲಿ ಕೆಲಸ ಮಾಡಲು ಸರ್ಕಾರಿ ಉದ್ಯೋಗಿಗಳೇ ಇಲ್ಲವಾಗಿದ್ದಾರೆ ಎಂದು ವಿವರಿಸಿದರು.
ಅತಿಥಿ ಶಿಕ್ಷಕರಿಗೆ, ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ವೈದ್ಯಕೀಯ ಸಿಬ್ಬಂದಿಗಳಿಗೆ ನೌಕರಿ ಭದ್ರತೆ ಇಲ್ಲವಾಗಿದೆ. ಕಲ್ಯಾಣ ಕರ್ನಾಟಕ ಭಾಗಕ್ಕೆ 5 ಸಾವಿರ ಕೋಟಿ ರೂಪಾಯಿ ಕೊಡುತ್ತಿದ್ದೇವೆ ಎಂದು ಹೇಳಿಕೆ ನೀಡುತ್ತಿದೆ. ಆದರೆ ಅದರಲ್ಲಿ ಯಾವ ಕೆಲಸಗಳೂ ಆಗುತ್ತಿಲ್ಲ. ಷರತ್ತುಗಳು ತುಂಬಾ ಕಠಿಣವಾಗಿವೆ.
ಇನ್ನೂ ಐದು ಸಾವಿರ ಕೋಟಿ ರೂಪಾಯಿ ಅನುದಾನ ಸೇರಿಸಿ ಒಟ್ಟು 10 ಸಾವಿರ ಕೋಟಿ ರೂಪಾಯಿಯಲ್ಲಿ ಪ್ರತ್ಯೇಕ ಸಚಿವಾಲಯ ಆರಂಭಿಸಿ. ಸರ್ಕಾರಿ ಶಾಲೆಗಳು ಮಳೆ ಬಂದರೆ ಸೋರುತ್ತಿವೆ ಎಂದು ದೂರಿದರು.ಸರ್ಕಾರ ಯುವ ನಿಧಿಯಡಿ ಯುವ ಸಮುದಾಯಕ್ಕೆ ಮಾಸಾಶನ ನೀಡುತ್ತಿದೆ. ಅದರ ಜೊತೆಗೆ ಉದ್ಯೋಗ ಸೃಷ್ಟಿಗಳಿಗೂ ಒತ್ತು ನೀಡಿ ಎಂದು ಆಗ್ರಹಿಸಿದರು.