ಬೆಂಗಳೂರು,ಜು.8- ಬೆಡ್‌ಶೀಟ್ ಸುತ್ತಿಕೊಂಡು ಎಟಿಎಂನೊಳಗೆ ನುಗ್ಗಿದ ದರೋಡೆಕೋರರು ಎಟಿಎಂನಿಂದ 16.56 ಲಕ್ಷ ರೂ. ದರೋಡೆ ಮಾಡಿ ಪರಾರಿಯಾಗಿರುವ ಘಟನೆ ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೆಳ್ಳಂದೂರಿನ ದೊಡ್ಡಕನ್ನಳ್ಳಿಯಲ್ಲಿರುವ ಆಕ್ಸಿಸ್ ಬ್ಯಾಂಕ್ ಎಟಿಎಂಗೆ ಮೊನ್ನೆ ಬೆಳಗಿನ ಜಾವ 3.30ರ ಸುಮಾರಿನಲ್ಲಿ ನುಗ್ಗಿದ ದರೋಡೆಕೋರರು ಒಳಬರುತ್ತಿದ್ದಂತೆ ತಮ ಚಹರೆ ಕಾಣಬಾರದು ಎಂದು ಸಿಸಿ ಕ್ಯಾಮರಾಗೆ ಕಪ್ಪು ಸ್ಪ್ರೇ ಸಿಂಪಡಿಸಿದ್ದಾರೆ.
ನಂತರ ಗ್ಯಾಸ್ ಕಟರ್ ಬಳಸಿ ಎಟಿಎಂ ಮಿಷಿನ್ ಅನ್ನು ಕತ್ತರಿಸಿ ಅದರಲ್ಲಿದ್ದಂತಹ 16,56,800 ರೂ. ಹಣ ಕದ್ದೊಯ್ದಿದ್ದಾರೆ.ದರೋಡೆಕೋರರು ಬೆಡ್‌ಶೀಟ್ ಸುತ್ತಿಕೊಂಡು ಎಟಿಎಂನೊಳಗೆ ಬಂದಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ದರೋಡೆಕೋರರು ಹೊಸೂರಿನಲ್ಲಿ ಮತ್ತೊಂದು ಎಟಿಎಂನಲ್ಲಿ ದರೋಡೆ ಮಾಡಿರುವುದು ಗೊತ್ತಾಗಿದೆ.
ಸುದ್ದಿ ತಿಳಿದು ಬೆಳ್ಳಂದೂರು ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ದರೋಡೆಕೋರರ ಪತ್ತೆಗೆ ಬಲೆ ಬೀಸಿದ್ದಾರೆ.ದರೋಡೆಕೋರರು ಯಾವ ರಸ್ತೆ ಮೂಲಕ ಎಟಿಎಂ ಬಳಿ ಬಂದಿದ್ದಾರೆ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಲು ಸುತ್ತಮುತ್ತಲಿನ ರಸ್ತೆಗಳಲ್ಲಿನ ಸಿಸಿ ಕ್ಯಾಮರಾಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.