ಹಾಸನ, ಫೆ.16- ಕಳೆದ ಕೆಲ ದಿನಗಳ ಹಿಂದೆಯಷ್ಟೇ ನಗರದಲ್ಲಿ ಕಳ್ಳರು ಎಟಿಎಂ ಯಂತ್ರವನ್ನು ಹೊತ್ತೊಯ್ದು ನಾಲೆಯಲ್ಲಿ ಎಸೆದು ಹೋಗಿದ್ದ ಪ್ರಕರಣ ಮಾಸುವ ಮುನ್ನವೇ ಚನ್ನರಾಯಪಟ್ಟಣ ತಾಲೂಕಿನ ಉದಯಪುರದಲ್ಲಿ ಹಣದ ಸಮೇತ ಯಂತ್ರವನ್ನು ಕದ್ದೊಯ್ದಿರುವ ಘಟನೆ ತಡರಾತ್ರಿ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ 75ರ ಬೆಂಗಳೂರು-ಮಂಗಳೂರು ರಸ್ತೆಯ ಉದಯಪುರ ಗ್ರಾಮದಲ್ಲಿದ್ದ ಇಂಡಿಯನ್ ಬ್ಯಾಂಕ್‌ನ ಎಟಿಎಂ ಮೆಷಿನ್‌ನ್ನು ಚೋರರು ಹೊತ್ತೊಯ್ದಿದ್ದಾರೆ. ಕಳೆದ ಜ.29 ರಂದು ಹಾಸನದ ಹನುಮಂತಪುರದಲ್ಲಿ ಎಟಿಎಂ ಯಂತ್ರ ಕಳೆದು ಹೋಗಿದ್ದು, ಇಲ್ಲಿಯವರೆಗೂ ಚೋರರನ್ನು ಹಿಡಿಯುವಲ್ಲಿ ಪೊಲೀಸರು ವಿಫಲರಾಗಿದ್ದಾರೆ.
ಇದೀಗ ಮತ್ತೊಂದು ಅದೇ ಕಂಪನಿಯ ಎಟಿಎಂ ಯಂತ್ರ ಕಳುವಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮನೆಮಾಡಿದೆ. ಇಂದು ಬೆಳಿಗ್ಗೆ ಸ್ಥಳೀಯರು ಹಣ ಡ್ರಾ ಮಾಡಿಕೊಳ್ಳಲು ಕೇಂದ್ರಕ್ಕೆ ಹೋದಾಗ ಯಂತ್ರ ಕಾಣದಿದ್ದಾಗ ಆತಂಕಗೊಂಡಿದ್ದಾರೆ.
ಕೂಡಲೇ ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆಗೆ ಸುದ್ದಿ ತಿಳಿಸಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಹಾಸನದಲ್ಲಿ ಚೋರರು ಬರೀ ಇಂಡಿಯನ್ ಬ್ಯಾಂಕ್‌ನ ಎಟಿಎಂ ಯಂತ್ರಗಳನ್ನೇ ಕದ್ದೊಯ್ಯುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.