ಬೆಂಗಳೂರು,ಮೇ25 –ರಾಜಕೀಯ ಅಕಾಡೆಮಿ ತೆರೆಯಲು ಚಿಂತಿಸಲಾಗುತ್ತಿದೆ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ತಿಳಿಸಿದರು. ಸಿಬ್ಬಂದಿ ಆಡಳಿತ ಸುಧಾರಣಾ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ವಿಧಾನಸಭೆ ಸಚಿವಾಲಯದ ಸಹಭಾಗಿತ್ವದಲ್ಲಿ ವಿಧಾನಸೌಧದ ಬಾಂಕ್ವೆಟ್ ಹಾಲ್‌ನಲ್ಲಿ ಹಮ್ಮಿಕೊಂಡಿದ್ದ ಮಾರ್ಗದರ್ಶಿ ನಡಿಗೆ ಪ್ರವಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜಕೀಯ ಕಾಲೇಜು ಆರಂಭಿಸಿ ತರಬೇತಿ ನೀಡುವ ಬಗ್ಗೆ ಕಾನೂನಾತ್ಮಕವಾಗಿ ಚರ್ಚೆ ಮಾಡಿ ಅನುಷ್ಠಾನದ ಬಗ್ಗೆ ನಿರ್ಧಾರ ಮಾಡುತ್ತೇವೆ. ವೈದ್ಯರಿಗೆ, ಇಂಜಿನಿಯರ್‌ಗಳಿಗೆ ಕಾಲೇಜುಗಳಿವೆ. ಆದರೆ ರಾಜಕಾರಣಿಯಾಗಲು ಕಾಲೇಜಿಲ್ಲ, ಅದಕ್ಕೊಂದು ಅಕಾಡೆಮಿ ಇದ್ದರೆ ಉತ್ತಮ ರಾಜಕಾರಣಿಯಾಗಲು ಅನುಕೂವಾಗಲಿದೆ ಎಂದರು.
ಮಾರ್ಗದರ್ಶಿ ಪ್ರವಾಸದ ಮೂಲಕ ವಿದ್ಯಾರ್ಥಿಗಳಿಗೆ ನಮ್ಮ ನಾಡಿನ ಇತಿಹಾಸ ಅರ್ಥಮಾಡಿಸುವ ಕೆಲಸವಾಗಲಿದೆ. ವಿದ್ಯಾರ್ಥಿಗಳು ಹಾಗೂ ಯುವ ಸಮುದಾಯ ದೇಶದ ಇತಿಹಾಸ ಅರ್ಥ ಮಾಡಿಕೊಳ್ಳಬೇಕು. ರಾಜ್ಯದ ಜನರು ವಿಧಾನಸೌಧ ನಮ್ಮದು ಎಂಬ ಭಾವನೆ ಮೂಡುವಂತೆ ಕಾರ್ಯಕ್ರಮ ರೂಪಿಸಿದ್ದೇವೆ ಎಂದು ಹೇಳಿದರು.
ವಿಧಾನಸೌಧ 70 ವರ್ಷದ ಹಳೆಯ ಕಟ್ಟಡವಾಗಿದ್ದು, ಇದರ ಬಗ್ಗೆ ಸಾರ್ವಜನಿಕರಲ್ಲಿ ಗೌರವದ ಭಾವನೆ ಮೂಡಬೇಕು. ನಮ್ಮ ದೇಶದ ಸಂವಿಧಾನ ಕೇವಲ ಕಾನೂನು ಗ್ರಂಥವಲ್ಲ. ಅದು ನಮ್ಮ ದೇಶದ ಧರ್ಮ ಗ್ರಂಥ, ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ವಿಧಾನಸೌಧದಿಂದಲೇ ಆಗಲಿದೆ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಮೂಲಕ ಹೇಗೆ ದೇಶ ನಡೆಯುತ್ತದೆ ಎಂಬುದನ್ನು ಜನರಿಗೆ ತಿಳಿಸುವ ಕಾರ್ಯಕ್ರಮವಾಗಲಿದೆ. 50 ರೂ. ಶುಲ್ಕ ಪಾವತಿಸಲಾಗದವರಿಗೆ ಉಚಿತ ಪ್ರವೇಶ ಕಲ್ಪಿಸುತ್ತೇವೆ ಎಂದರು.
ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ನಾನು ವಿದ್ಯಾರ್ಥಿಯಾಗಿದ್ದಾಗ ವಿಧಾನಸೌಧ ವೀಕ್ಷಣೆಗೆ ಬಂದಿದ್ದೆ. ಪ್ರವಾಸಿಗರಿಗೆ ವಿಧಾನಸೌಧ ವೀಕ್ಷಣೆಗೆ ಅವಕಾಶ ಕಲ್ಪಿಸಿರುವುದು ಒಳ್ಳೆಯ ಬೆಳವಣಿಗೆ. ಶಕ್ತಿಸೌಧದ ಬಗ್ಗೆ ಜನರಿಗೆ ಸೂಕ್ತ ಮಾಹಿತಿ ನೀಡುವ ಕೆಲಸವಾಗಲಿದೆ ಎಂದು ಹೇಳಿದರು.
ಕಾನೂನು ಸಚಿವ ಎಚ್.ಕೆ.ಪಾಟೀಲ್ ಮಾತನಾಡಿ, ವಿಧಾನಸೌಧ ಪ್ರವಾಸ ಕಾರ್ಯಕ್ರಮವು ಮನೋರಂಜನೆಯ ಪ್ರವಾಸವಾಗಬಾರದು. ಶೈಕ್ಷಣಿಕ ಅಧ್ಯಯನದ ಪ್ರವಾಸವಾಗಬೇಕು. ಪ್ರಜಾಪ್ರಭುತ್ವದ ಮಹತ್ವವನ್ನು ತಿಳಿದುಕೊಳ್ಳುವಂತಾಗಬೇಕು ಎಂದರು. ವಿದ್ಯಾರ್ಥಿಗಳು ಮುಂದೆ ರಾಜಕೀಯ ಕ್ಷೇತ್ರಕ್ಕೂ ಬರಬೇಕು. ಉತ್ತಮ ರಾಜಕೀಯ ಪಟುಗಳಾಗಲು ಶಕ್ತಿಸೌಧ ಸ್ಫೂರ್ತಿ ನೀಡುವಂತಾಗಲಿದೆ ಎಂದು ಅವರು ಹಾರೈಸಿದರು.