Wednesday, March 26, 2025
Homeರಾಜ್ಯಇದು ಬೆಳಿಗ್ಗೆ 'ಮನಿ' ಸಂಜೆ 'ಹನಿ' ಸರ್ಕಾರ : ನಿಖಿಲ್ ಲೇವಡಿ

ಇದು ಬೆಳಿಗ್ಗೆ ‘ಮನಿ’ ಸಂಜೆ ‘ಹನಿ’ ಸರ್ಕಾರ : ನಿಖಿಲ್ ಲೇವಡಿ

This is a morning 'money' , evening 'honey' governmen : Nikhil

ಬೆಂಗಳೂರು, ಮಾ.25– ಬೆಳಿಗ್ಗೆ ಮನಿ ಸಂಜೆ ಹನಿ ಸರ್ಕಾರವಾಗಿದೆ ಎಂದು ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಟೀಕಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹನಿಟ್ರಾಪ್ ಯತ್ನ ಆಗಿದೆ ಎಂದು ಸದನದಲ್ಲಿ ವಿಷಯ ಪ್ರಸ್ತಾಪಿಸಿರುವ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಏಕೆ ನಾಲೈದು ದಿನಗಳಿಂದ ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಒಂದು ಕುರ್ಚಿಗೋಸ್ಕರ ಈ ಮಟ್ಟದ ರಾಜಕಾರಣ ನಡೆಯುತ್ತಿದೆ. ಸಿಡಿ ಫ್ಯಾಕ್ಟರಿ ಮಾಲೀಕ ಯಾರು?, ಆ ಮಹನೀಯ ಯಾರು? ಎಂಬುದನ್ನು ಹೊರಗಡೆ ತನ್ನಿ. ನಾವು ಆ ಪುಣ್ಯಾತ್ಮನನ್ನು ನೋಡಲು ಕಾತರದಿಂದ ಕಾಯುತ್ತಿದ್ದೇವೆ. ದೂರು ಕೊಡಿ ಎಂದು ಸಚಿವ ರಾಜಣ್ಣ ಅವರನ್ನು ಆಗ್ರಹಿಸಿದರು.

ವಿಧಾನಸೌಧ ದೇವಾಲಯವಿದ್ದಂತೆ. ಅಲ್ಲಿ ವಿಷಯಾಧಾರಿತ ಚರ್ಚೆಗಳಾಗಬೇಕು. ನಮ್ಮಂತಹ ಯುವಕರಿಗೆ ಮಾರ್ಗದರ್ಶನವಾಗುವ ಚರ್ಚೆಯಾಗಬೇಕು. ಆದರೆ ಹನಿಟ್ರಾಪ್ ವಿಚಾರ ಪ್ರಸ್ತಾಪವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸೌಹಾರ್ದಯುತವಾಗಿ ಬಗೆಹರಿಸಿ :
ಮೇಕೆದಾಟು ಯೋಜನೆಗೆ ತಕರಾರು ತೆಗೆದಿರುವ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಜೊತೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತುಕತೆ ನಡೆಸಿ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಮುಂದಡಿ ಇಡಬೇಕು. ಈ ನಿಟ್ಟಿನಲ್ಲಿ ವೇದಿಕೆ ಸಿದ್ಧಪಡಿಸಬೇಕು. ನಾವು ನೆಲ, ಜಲ, ಭಾಷೆ ವಿಚಾರದಲ್ಲಿ ಎಲ್ಲದಕ್ಕೂ ಸಿದ್ಧವಿದ್ದೇವೆ. ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ಗುತ್ತಿಗೆ ಕಾಮಗಾರಿಗಳಲ್ಲಿ ಒಂದು ಸಮುದಾಯಕ್ಕೆ ಮೀಸಲಾತಿ ಕಲ್ಪಿಸಿ ಓಲೈಕೆ ರಾಜಕಾರಣ ಮಾಡುವುದನ್ನು ಸರ್ಕಾರ ಬಿಟ್ಟು ಹಿಂದುಳಿದಿರುವ ಎಲ್ಲಾ ಸಮುದಾಯಗಳಿಗೂ ಕಾರ್ಯಕ್ರಮ ರೂಪಿಸಬೇಕು ಎಂದು ಅವರು ಆಗ್ರಹಿಸಿದರು.

ಧರ್ಮಾಧರಿತ ಮೀಸಲಾತಿ ಕೊಡಬಾರದು ಎಂದು ನ್ಯಾಯಾಲಯದ ತೀರ್ಪುಗಳಿವೆ. ಆದರೆ ಕಾಂಗ್ರೆಸ್ ಸರ್ಕಾರ ಇತರ ಅಲ್ಪಸಂಖ್ಯಾತ ಸಮುದಾಯಗಳನ್ನು ಕಡೆಗಣಿಸಿ ಒಂದು ಸಮುದಾಯಕ್ಕೆ ಮಾತ್ರ ಮೀಸಲು ಕಲ್ಪಿಸಲು ಮುಂದಾಗಿದೆ. ಧರ್ಮಾಧರಿತ ಮೀಸಲಾತಿ ವಿಚಾರದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಒಗ್ಗಟ್ಟಿನ ಹೋರಾಟ ಮಾಡಿವೆ.

ಈ ಸಂಬಂಧ ರಾಜ್ಯಪಾಲರಿಗೂ ಜಂಟಿಯಾಗಿ ಮನವಿ ಸಲ್ಲಿಸಲಾಗಿದೆ. ಕಾಂಗ್ರೆಸ್ ಹಾಗೂ ಸರ್ಕಾರದ ವಿರುದ್ಧ ಸದನದ ಒಳಹೊರಗೆ ಹೋರಾಟ ನಡೆಸಿದ್ದು, ಯಾವುದೇ ಗೊಂದಲವಿಲ್ಲ ಎಂದರು.

ಲೋಕಸಭೆ ವಿರೋಧಪಕ್ಷದ ನಾಯಕ ರಾಹುಲ್‌ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರು ಸಂವಿಧಾನ ಪುಸ್ತಕವನ್ನು ಕೈಯಲ್ಲಿ ಹಿಡಿದರೆ ಸಾಲದು. ಅದನ್ನು ಅನುಷ್ಠಾನ ಮಾಡಲು ತಿಳಿವಳಿಕೆ ಪಡೆಯಬೇಕು. ಲೋಕಸಭೆ ಚುನಾವಣೆಯಲ್ಲಿ ನಮ್ಮ ವಿರುದ್ಧ ಸಂವಿಧಾನ ಬದಲಾವಣೆ ಮಾಡುತ್ತಾರೆ ಎಂಬ ಅಪಪ್ರಚಾರ ಮಾಡಿದರು. ಈಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೇ ಸಂವಿಧಾನ ಬದಲಾವಣೆ ಮಾತನ್ನಾಡಿದ್ದಾರೆ ಎಂದು ವ್ಯಂಗ್ಯವಾಡಿದರು.

ನಟ್ಟು, ಬೋಲ್ಟು ಟೈಟು :
ಡಿ.ಕೆ.ಶಿವಕುಮಾರ್ ಅವರ ಮನಃಸ್ಥಿತಿ ಏನೆಂಬುದು ಜನರಿಗೆ ಗೊತ್ತಿದೆ. ಸಂವಿಧಾನ ಬದಲಾವಣೆ ಬಗ್ಗೆ ಅವರು ಮಾತನಾಡಿದ್ದಾರೆ. ನಾಲಿಗೆ ಮತ್ತು ತಲೆಯ ನಡುವೆ ನಟ್ಟು, ಬೋಲ್ಟು ಸಡಿಲವಾಗಿವೆ. ಸ್ಪ್ಯಾನರ್ ಅವರ ಪಕ್ಷದಲ್ಲಿದೆ. ಆ ಪಕ್ಷ ಟೈಟು ಮಾಡದಿದ್ದರೆ ಮುಂದಿನ ದಿನಗಳಲ್ಲಿ ನಾಡಿನ ಜನರೇ ನಟ್ಟು, ಬೋಲ್ಟು ಟೈಟು ಮಾಡುತ್ತಾರೆ ಎಂದು ಟೀಕಿಸಿದರು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ 2 ವರ್ಷದಲ್ಲಿ 2.25 ಲಕ್ಷ ಕೋಟಿ ರೂ. ಸಾಲ ಮಾಡಿದೆ. ಮಾಡಿರುವ ಸಾಲವನ್ನು ತೀರಿಸುವ ಸಾಲ ಮಾಡಿರುವ ಸರ್ಕಾರವಿದೆ. ಪ್ರತಿಯೊಬ್ಬರ ಮೇಲೆ 14 ಸಾವಿರ ರೂ. ಸಾಲದ ಹೊರೆಯನ್ನು ಹೊರೆಸಿದೆ ಎಂದು ಆರೋಪಿಸಿದರು.

ಸ್ಟಾರ್ಟ್ ಮೀಟರ್ : ಮರು ಟೆಂಡರ್ ಕರೆಯಲು ನಿಖಿಲ್ ಆಗ್ರಹ
ರಾಜ್ಯದಲ್ಲಿ ಸ್ಟಾರ್ಟ್ ಮೀಟರ್ ಅಳವಡಿಕೆ ವಿಚಾರದಲ್ಲಿ ಅಕ್ರಮವಾಗಿದೆ ಎಂದು ಆರೋಪಿಸಿದ ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮರು ಟೆಂಡರ್ ಕರೆಯಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಂತ್ರಿಕ ಹಾಗೂ ಆರ್ಥಿಕ ಅರ್ಹತೆ ಇಲ್ಲದ ಕಂಪನಿಗೆ ಸ್ಟಾರ್ಟ್ ಮೀಟರ್ ಅಳವಡಿಕೆ ಟೆಂಡರ್ ನೀಡಲಾಗಿದೆ ಎಂದು ಆರೋಪಿಸಿದರು.
ಟೆಂಡ‌ರ್ ನೀಡುವ ವಿಚಾರದಲ್ಲಿ ಪಾರದರ್ಶಕತೆ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಲಾಗಿದೆ. ಹಲವು ಆಕ್ರಮಗಳು ನಡೆದಿವೆ ಎಂದು ದೂರಿದರು.

ಕೇಂದ್ರ ಇಂಧನ ಇಲಾಖೆ ಆರ್‌ಡಿಎಸ್‌ಎಸ್ ಯೋಜನೆಯಡಿ 3 ಲಕ್ಷ ಕೋಟಿ ರೂ.ಗೂ ಹೆಚ್ಚು ಹಣವಿಟ್ಟಿದ್ದು ರಾಜ್ಯಗಳಿಗೆ ಸಹಾಯಧನ, ಅನುದಾನ, ಸಾಲ ನೀಡುತ್ತಿದೆ. ಈಗಾಗಲೇ 19.79 ಕೋಟಿ ಸ್ಟಾರ್ಟ್ ಮೀಟರ್ ರಾಷ್ಟ್ರದಲ್ಲಿ ಅಳವಡಿಕೆಯಾಗಿದೆ. ಆದರೆ ರಾಜ್ಯಸರ್ಕಾರ ಈ ಯೋಜನೆಯಿಂದ ಹೊರಬಂದಿದೆ. ಯಾವ ಕಾರಣಕ್ಕಾಗಿ ಈ ಯೋಜನೆಯಿಂದ ಹೊರಬಂದಿದೆ ಎಂಬುದನ್ನು ಇಂಧನ ಸಚಿವರು ಹಾಗೂ ಇಲಾಖಾಧಿಕಾರಿಗಳು ಉತ್ತರಿಸಬೇಕು ಎಂದು ಒತ್ತಾಯಿಸಿದರು.

ಇದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಸಿಂಗಲ್ ಫೇಸ್ ಸ್ಟಾರ್ಟ್ ಮೀಟರ್ ದರ ಮಾರುಕಟ್ಟೆಯಲ್ಲಿ 900 ರೂ. ಇದೆ. ಕೇರಳ, ಆಸ್ಸಾಂ, ತೆಲಂಗಾಣ, ಹಿಮಾಚಲ ಪ್ರದೇಶದಲ್ಲಿ ಇದೇ ದರ ಇದೆ. ಆದರೆ ಕರ್ನಾಟಕದಲ್ಲಿ 4,998 ರೂ. ಇದೆ. ಸಿಂಗಲ್ ಫೇಸ್ -2 ಸ್ಟಾರ್ಟ್ ಮೀಟರ್‌ನ ಮಾರುಕಟ್ಟೆ ದರ 2.400 ರೂ. ಇದ್ದು, ರಾಜ್ಯದಲ್ಲಿ ಸಾವಿರ ರೂ. ಇದೆ. ಅದೇ ರೀತಿ ತ್ರಿ ಫೇಸ್ ಮೀಟರ್ ದರ 2,500 ರೂ. ಮಾರುಕಟ್ಟೆ ದರವಿದ್ದರೆ 28 ಸಾವಿರ ರೂ. ರಾಜ್ಯದಲ್ಲಿದೆ ಎಂದು ಮಾಹಿತಿ ನೀಡಿದರು.

ಛತ್ತೀಸ್‌ಗಢದಲ್ಲಿ ಸ್ಟಾರ್ಟ್ ಮೀಟರ್ ಅಳವಡಿಕೆಗೆ ಶುಲ್ಕ ವಿಧಿಸುತ್ತಿಲ್ಲ. ನಿರ್ವಹಣೆ ಶುಲ್ಕ 57 ರೂ. ಇದೆ. ಮಾಸಿಕ ನಿರ್ವಹಣಾ ವೆಚ್ಚ 68.4 ರೂ. ಇದೆ. ತೆಲಂಗಾಣದಲ್ಲಿ 66.50 ರೂ.ಗಳಿದ್ದರೆ ಕರ್ನಾಟಕದಲ್ಲಿ ಸ್ಟಾರ್ಟ್ ಮೀಟರ್ ನಿರ್ವಹಣಾ ವೆಚ್ಚ ಪ್ರತಿ ತಿಂಗಳು 71 ರೂ. ಇದೆ. ಪ್ರತಿ ಗ್ರಾಹಕರಿಗೆ ಇದರಿಂದ 8,520 ರೂ. ಹೊರೆಯಾಗಲಿದೆ ಎಂದು ಆರೋಪಿಸಿದರು.

ಜಾಗತಿಕ ಟೆಂಡ‌ರ್ ಕರೆದಾಗ ಕನಿಷ್ಠ 45 ದಿನ ಸಮಯ ನೀಡಲಾಗುತ್ತದೆ. ಆದರೆ 34 ದಿನಕ್ಕೆ ಸ್ಟಾರ್ಟ್ ಮೀಟರ್ ಟೆಂಡರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿದೆ. ದಾವಣಗೆರೆ ಮೂಲದ ರಾಜಶ್ರೀ ಎಲೆಕ್ಟಿಕಲ್ಸ್ ಗೆ ಟೆಂಡರ್ ನೀಡಲಾಗಿದೆ. ಅದು ಕಂಬ ನಿರ್ಮಾಣ ಮಾಡುವ ಸಂಸ್ಥೆಯಾಗಿದೆ. ಹಣಕಾಸು ವಿಚಾರದಲ್ಲೂ ಅರ್ಹತೆ ಇಲ್ಲ, ಅಲ್ಲದೆ ಈ ಟೆಂಡರ್ ಬಗ್ಗೆ ಸಾರ್ವಜನಿಕ ಪ್ರಕಟಣೆಯೂ ನೀಡಿಲ್ಲ ಎಂದು ವಾಗ್ದಾಳಿ ನಡೆಸಿದರು.

ಸ್ಟಾರ್ಟ್ ಮೀಟರ್ ಟೆಂಡರ್ ಅಳವಡಿಕೆ ಮೌಲ್ಯ 4,800 ಕೋಟಿ ರೂ. ಆಗಿದ್ದು, ಇದರ ಎರಡರಷ್ಟು ವಹಿವಾಟನ್ನು ಟೆಂಡರ್ ಪಡೆಯುವ ಸಂಸ್ಥೆ ಹೊಂದಿರಬೇಕು. ಶೇ.30 ರಷ್ಟು ಹಣಕಾಸು ಸಾಮರ್ಥ್ಯ ಹೊಂದಿರಬೇಕು ಎಂದಿದೆ. ಆ ಸಾಮರ್ಥ ಟೆಂಡರ್ ಪಡೆದ ಸಂಸ್ಥೆಗಿಲ್ಲ. ಸ್ಟಾರ್ಟ್ ಮೀಟರ್ ಸಾಫ್ಟ್‌ವೇರ್ ನಿರ್ವಹಣೆಗೆ ಉತ್ತರಪ್ರದೇಶದಲ್ಲಿ ಕಪ್ಪು
ಪಟ್ಟಿಗೆ ಸೇರಿದ ಕಂಪನಿಗೆ ರಾಜಶ್ರೀ ಎಲೆಕ್ಟಿಕಲ್ಸ್ ಉಪಗುತ್ತಿಗೆ ನೀಡಿದೆ.

ಇಂಧನ ಇಲಾಖೆಯಲ್ಲಿ ಐಟಿ ಘಟಕವಿಲ್ಲವೇ?, ಪರಿಣಿತ ಎಂಜಿನಿಯರ್‌ಗಳಿಲ್ಲವೇ? ಎಂದು ಪ್ರಶ್ನಿಸಿದ ಅವರು, 15,500 ಕೋಟಿಗಳಷ್ಟು ಲೂಟಿಯಾಗಿದೆ. ಪಾರದರ್ಶಕವಾಗಿ ಮರು ಟೆಂಡರ್ ಕರೆಯಬೇಕು. ಇಲ್ಲದಿದ್ದರೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆ ವಿರೋಧಪಕ್ಷದ ನಾಯಕ ಆರ್.ಅಶೋಕ್ ರೊಂದಿಗೆ ಮಾತನಾಡಿ ದೊಡ್ಡಮಟ್ಟದಲ್ಲಿ ನಡೆದಿರುವ ಸ್ಟಾರ್ಟ್ ಮೀಟರ್ ಅಕ್ರಮವನ್ನು ತಾರ್ಕಿಕ ಹಂತಕ್ಕೆ ಕೊಂಡೊಯ್ಯಲಾಗುವುದು ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ವಿಧಾನಪರಿಷತ್ ಸದಸ್ಯ ಜವರಾಯಿಗೌಡ, ಜೆಡಿಎಸ್ ಮಾಧ್ಯಮ ಸಂಯೋಜಕ ಎಲ್.ಗಂಗಾಧರ ಮೂರ್ತಿ, ರಾಜ್ಯ ವಕ್ತಾರ ಎಂ.ಎನ್.ದೇವರಾಜು ಮತ್ತಿತರರು ಉಪಸ್ಥಿತರಿದ್ದರು.

RELATED ARTICLES

Latest News