ಥಾಣೆ, ಮಾ. 18: ಔರಂಗಜೇಬನನ್ನು ಈಗಲೂ ಹೊಗಳುತ್ತಿರುವವರು ದೇಶದ್ರೋಹಿಗಳು ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿದ್ದಾರೆ. ಮತ್ತೊಂದೆಡೆ, ಮರಾಠಾ ರಾಜ ಛತ್ರಪತಿ ಶಿವಾಜಿ ಮಹಾರಾಜ್ ಶೌರ್ಯ, ತ್ಯಾಗ ಮತ್ತು ಹಿಂದುತ್ವದ ಸ್ಫೂರ್ತಿಗಾಗಿ ನಿಂತ ದೈವಿಕ ಶಕ್ತಿ ಎಂದು ಶಿಂಧೆ ಶಿವ ಜಯಂತಿ ಸಂದರ್ಭದಲ್ಲಿ ಹೇಳಿದರು. ಮರಾಠಾ ರಾಜನ ಪರಂಪರೆ, ಅವರ ಧೈರ್ಯ ಮತ್ತು ನಾಯಕತ್ವವನ್ನು ಗೌರವಿಸಲು ಸ್ಥಾಪಿಸಲಾದ ಥಾಣೆ ಜಿಲ್ಲೆಯ ಡೊಂಬಿವಿಲಿ ಪ್ರದೇಶದ ಘರ್ಡಾ ಚೌಕ್‌ನಲ್ಲಿ ಶಿವಾಜಿ ಮಹಾರಾಜ್ ಅವರ ಅಶ್ವಾರೋಹಿ ಪ್ರತಿಮೆಯನ್ನು ಅನಾವರಣಗೊಳಿಸಿದ ಸಂದರ್ಭದಲ್ಲಿ ಶಿವಸೇನೆ ಮುಖ್ಯಸ್ಥರು ಮಾತನಾಡುತ್ತಿದ್ದರು.
ರಾಜ್ಯದ ಛತ್ರಪತಿ ಸಂಭಾಜಿನಗರ ಜಿಲ್ಲೆಯಲ್ಲಿರುವ ಔರಂಗಜೇಬ್ ಸಮಾಧಿಯನ್ನು ತೆಗೆದುಹಾಕುವಂತೆ ಕೆಲವು ಬಲಪಂಥೀಯ ಸಂಘಟನೆಗಳು ಒತ್ತಾಯಿಸುತ್ತಿರುವ ಮಧ್ಯೆ ಅವರ ಹೇಳಿಕೆ ಬಂದಿದೆ.
ವಿಶೇಷವೆಂದರೆ, ಔರಂಗಜೇಬ್ ಸಮಾಧಿಯನ್ನು ತೆಗೆದುಹಾಕುವಂತೆ ಬಲಪಂಥೀಯ ಸಂಘಟನೆಯೊಂದು ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಒಂದು ಸಮುದಾಯದ ಪವಿತ್ರ ಪುಸ್ತಕವನ್ನು ಸುಟ್ಟುಹಾಕಲಾಗಿದೆ ಎಂಬ ವದಂತಿಗಳ ನಂತರ ನಾಗುರದಲ್ಲಿ ಹಿಂಸಾಚಾರ ಭುಗಿಲೆದ್ದಿದೆ.