ಮೈಸೂರು,ಮಾ.26– ರಾಜಕಾರಣಿಗಳಿಗೆ ಸಾಕಷ್ಟು ಜನರು ಫೋನ್ ಮಾಡುತ್ತಾರೆ, ಕೆಲವೊಂದು ಬಾರಿ ಯಾರು ಎಂದು ಗೊತ್ತಿಲ್ಲದಿದ್ದರೂ ಸಹ ಫೋನನ್ನು ರಿಸೀವ್ ಮಾಡುತ್ತೇವೆ, ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಂಡು ಹನಿಟ್ರ್ಯಾಪ್ ಮೂಲಕ ಬ್ಲಾಕ್‌ಮೇಲ್ ಮಾಡುವವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದನದಲ್ಲಿ ನಮ ಪಕ್ಷದ ಸಚಿವರೇ ಆದ ಕೆ.ಎನ್.ರಾಜಣ್ಣ ಅವರು ಹನಿಟ್ರ್ಯಾಪ್ ವಿಚಾರ ಪ್ರಸ್ತಾಪ ಮಾಡಿದ್ದಾರೆ. ಎಲ್ಲಾ ಪಕ್ಷದ ಶಾಸಕರು ಹಾಗೂ ಸಚಿವರ ಮೇಲೆ ಹನಿಟ್ರ್ಯಾಪ್ ಪ್ರಯತ್ನ ನಡೆದಿದೆ. ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲೂ ಸಹ 17 ಶಾಸಕರು ಹಾಗೂ ಸಚಿವರ ಮೇಲೆ ಹನಿಟ್ರ್ಯಾಪ್ ನಡೆದಿತ್ತು ಎನ್ನಲಾಗಿದೆ.
ಈ ವೇಳೆ ಬಹಿರಂಗವಾಗದಂತೆ ನ್ಯಾಯಾಲಯದಿಂದ ತಡೆಯಾಜ್ಞೆಯನ್ನೂ ಸಹ ತರಲಾಗಿತ್ತು. ಆಗ ಬಿಜೆಪಿಯವರೇ ಈ ರೀತಿ ಹನಿಟ್ರ್ಯಾಪ್ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ರಾಜಣ್ಣ ಅವರು ಇಂತಹ ಪಕ್ಷದವರೇ ಹನಿಟ್ರ್ಯಾಪ್ ಮಾಡಿದ್ದಾರೆಂದು ಎಲ್ಲಿಯೂ ಹೇಳಿಲ್ಲ. ಅವರು ದೂರು ಕೊಟ್ಟರೆ ತನಿಖೆ ಮಾಡಲಾಗುವುದು. ಈ ಹಿಂದೆ ಬಿಜೆಪಿ ಸರ್ಕಾರದಲ್ಲೂ ಹನಿಟ್ರ್ಯಾಪ್ ನಡೆದಿತ್ತು. ಈಗಲೂ ಅಂತಹ ಪ್ರಯತ್ನ ನಡೆದಿದೆ. ಇದರ ಹಿಂದೆ ದೊಡ್ಡ ಜಾಲವೇ ಇದ್ದು ತನಿಖೆಯ ಮೂಲಕವೇ ಜಾಲವನ್ನು ಪತ್ತೆ ಹಚ್ಚಬೇಕಿದೆ ಎಂದರು.
ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಳ್ಳುವವರು ವಿಡಿಯೋ ಕಾಲ್ ಆನ್ ಮಾಡಿದ ತಕ್ಷಣ ಎಐ ಮೂಲಕ ತಪ್ಪು ವಿಡಿಯೋ ಕಳುಹಿಸಲಾಗುತ್ತದೆ. ನಂತರ ಹನಿಟ್ರ್ಯಾಪ್ ಮಾಡಲಾಗುತ್ತದೆ. ಅಂತವರಿಗೆ ಶಿಕ್ಷೆಯಾಗಬೇಕು. ಹಣ ಹಾಗೂ ಕೆಲಸ ಮಾಡಿಕೊಳ್ಳುವ ಉದ್ದೇಶದಿಂದ ಹನಿಟ್ರ್ಯಾಪ್ ಮಾಡುತ್ತಿದ್ದಾರೆ. ರಾಜಣ್ಣ ಅವರು ಯಾರ ಮೇಲೂ ಆರೋಪ ಮಾಡುತ್ತಿಲ್ಲ. ತನಿಖೆಯಿಂದಷ್ಟೇ ಸತ್ಯಾಸತ್ಯತೆ ಹೊರಬರಬೇಕು. ಆದರೆ ಬಿಜೆಪಿಯವರು ಏಕೆ ಊಹೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಹೈಕಮಾಂಡ್‌ಗೆ ನಮ ಪಕ್ಷದ ನಾಯಕರು ಈ ವಿಚಾರವನ್ನು ತಿಳಿಸುತ್ತಾರೆ. ಕೇಂದ್ರ ನಾಯಕರಿಗೆ ನಮ ನಾಯಕರು ದೂರು ಕೊಟ್ಟಿರುವ ಬಗ್ಗೆ ತಿಳಿದಿಲ್ಲ. ರಾಜಣ್ಣ ಅವರು ಸಹ ದೆಹಲಿಗೆ ಹೋಗಿ ದೂರು ಕೊಡಬಹುದು. ಯಾರಾದರೂ ಅವರನ್ನು ಟಾರ್ಗೆಟ್ ಮಾಡಿದರೆ ಅವರ ಮೇಲೆಯೂ ದೂರು ಕೊಡಲಿ ಎಂದರು.