Monday, November 25, 2024
Homeಇದೀಗ ಬಂದ ಸುದ್ದಿಸಬ್ ಇನ್‌ಸ್ಪೆಕ್ಟರ್‌ಗೆ ಧಮ್ಕಿ ಹಾಕಿದ ಯುವಕನ ಬಂಧನ

ಸಬ್ ಇನ್‌ಸ್ಪೆಕ್ಟರ್‌ಗೆ ಧಮ್ಕಿ ಹಾಕಿದ ಯುವಕನ ಬಂಧನ

ಬೆಂಗಳೂರು, ಅ.18- ಬುದ್ದಿವಾದ ಹೇಳಿದ್ದಕ್ಕೆ ಕೋಪಗೊಂಡು ಕರ್ತವ್ಯ ನಿರತ ಪ್ರೊಬೆಷನರಿ ಮಹಿಳಾ ಸಬ್ ಇನ್ಸ್‍ಪೆಕ್ಟರ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಅವರನ್ನು ಕೆಳಗೆ ಬೀಳಿಸಿ ಧಮ್ಕಿ ಹಾಕಿ ಪರಾರಿಯಾಗಿದ್ದ ಯುವಕನನ್ನು ಗೋವಿಂದರಾಜನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಾಲಗಾಳ ನಿವಾಸಿ ಭರತ್ (32) ಬಂಧಿತ ಯುವಕ. ಈತ ವಾಟರ್ ಫ್ಯೂರಿಫೈನಲ್ಲಿ ಕೆಲಸ ಮಾಡುತ್ತಿದ್ದಾನೆ.
ಪ್ರೊಬೆಷನರಿ ಮಹಿಳಾ ಸಬ್ ಇನ್ಸ್‍ಪೆಕ್ಟರ್ ಅಶ್ವಿನಿ ಹಿಪ್ಪರಗಿ ಅವರು ಅ.15ರಂದು ಮಧ್ಯಾಹ್ನ ಸುಬ್ಬಣ್ಣ ಗಾರ್ಡನ್‍ನಲ್ಲಿ ಗಸ್ತಿನಲ್ಲಿದ್ದರು. ಆ ವೇಳೆ ಅತಿವೇಗವಾಗಿ ಬೈಕ್‍ನಲ್ಲಿ ಹೋಗುತ್ತಿದ್ದ ಭರತ್‍ನನ್ನು ಗಮನಿಸಿ ಅಶ್ವಿನಿಯವರು ತಡೆದು ಬುದ್ದಿವಾದ ಹೇಳಿ ತಮ್ಮ ದ್ವಿಚಕ್ರ ವಾಹನ ತೆಗೆದುಕೊಂಡು ಮುಂದೆ ಹೋಗುತ್ತಿದ್ದರು.

ಸಬ್‍ಇನ್ಸ್‍ಪೆಕ್ಟರ್ ಮಾತಿನಿಂದ ಕೋಪಗೊಂಡ ಯುವಕ ತನ್ನ ಬೈಕ್ ತೆಗೆದುಕೊಂಡು ಹಿಂದಿನಿಂದ ಅಶ್ವಿನಿಯವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಅವರನ್ನು ಬೀಳಿಸಿ ನನಗೆ ಬುದ್ದಿವಾದ ಹೇಳ್ತಿರಾ, ನನ್ನ ಹತ್ರ ಇದೆಲ್ಲಾ ಇಟ್ಕೋಬೇಡಿ ಎಂದು ಧಮ್ಕಿ ಹಾಕಿ ಪರಾರಿಯಾಗಿದ್ದನು.

ದ್ವಿಚಕ್ರ ವಾಹನದಿಂದ ಬಿದ್ದು ಗಾಯಗೊಂಡ ಅಶ್ವಿನಿಯವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ಗೋವಿಂದರಾಜನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಘಟನಾ ಸ್ಥಳದಲ್ಲಿನ ಸಿಸಿ ಟಿವಿಗಳನ್ನು ಪರಿಶೀಲಿಸಿ ಆರೋಪಿ ಯುವಕನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News