ಬೆಂಗಳೂರು,ಸೆ.23– ನಿಮ್ಮ ಹೆಸರಿನಲ್ಲಿ ಕೊರಿಯರ್ ಪಾರ್ಸಲ್ ಬಂದಿದ್ದು, ಅದರಲ್ಲಿ ಮಾದಕ ವಸ್ತು ಇದೆ, ಹಾಗಾಗಿ ನಿಮ ಮೇಲೆ ಕೇಸ್ ಬುಕ್ ಮಾಡುತ್ತೇವೆ ಎಂದು ಹೆದರಿಸಿ ಹೌಸ್ ಅರೆಸ್ಟ್ ಮಾಡಿ 30 ಲಕ್ಷ ರೂ. ಪಡೆದು ವಂಚನೆ ಮಾಡುತ್ತಿದ್ದ ಮೂವರನ್ನು ದಕ್ಷಿಣ ವಿಭಾಗದ ಸಿ.ಇ.ಎನ್ ಠಾಣೆ ಪೊಲೀಸರು ಬಂಧಿಸಿ 11.75 ಲಕ್ಷ ರೂ. ನಗದು, ಕೃತ್ಯಕ್ಕೆ ಬಳಸಿದ್ದ ಎಟಿಎಂ ಕಾರ್ಡ್ ಹಾಗೂ ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಸುಬ್ರಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಅಪಾರ್ಟ್‌ಮೆಂಟ್‌ವೊಂದರಲ್ಲಿ ವಾಸವಿರುವ ವ್ಯಕ್ತಿಯೊಬ್ಬರ ಮೊಬೈಲ್‌ಗೆ ಅಪರಿಚಿತ ವ್ಯಕ್ತಿ ಕರೆ ಮಾಡಿ, ತಾನು ಡಿ.ಎಚ್.ಎಲ್‌ಕೋರಿಯರ್ ಉದ್ಯೋಗಿ ಎಂದು ಪರಿಚಯಿಸಿಕೊಂಡು ನಿಮ ಹೆಸರಿಗೆ ಶಾಂಘೈ ನಿಂದ ಕೋರಿಯರ್ ಪಾರ್ಸೆಲ್ ಮುಂಬೈಗೆ ತಲುಪಿದ್ದು, ಈ ಕೋರಿಯರ್‌ಪಾರ್ಸೆಲ್‌ನಲ್ಲಿ 5 ಪಾಸ್‌ಪೋರ್ಟ್, 3 ಬ್ಯಾಂಕ್ ಕ್ರೆಡಿಟ್‌ಕಾರ್ಡ್ಸ್ , 140 ಗ್ರಾಂ ಮಾದಕವಸ್ತು ಹಾಗೂ 4 ಕೆ.ಜಿ ಬಟ್ಟೆಗಳು ಇರುತ್ತದೆಂದು ಹೆದರಿಸಿ ನಿಮ ವಿರುದ್ಧ ಮುಂಬೈ ಕ್ರೈಂ ಪೊಲೀಸರು ಮತ್ತು ಸಿ.ಬಿ.ಐ ನವರು ತನಿಖೆ ಮಾಡುತ್ತಾರೆ ಎಂದು ಹೆದರಿಸಿದ್ದಾರೆ.
ಅಲ್ಲದೆ, ಮುಂಬೈ ಕ್ರೈಂ ಪೊಲೀಸರೊಂದಿಗೆ ಮಾತನಾಡಿ ಎಂದು ಹೇಳಿದ್ದು, ಆ ವ್ಯಕ್ತಿ ಸಿ.ಬಿ.ಐ ಅಧಿಕಾರಿಯೊಬ್ಬರು ನಿಮನ್ನು ಸ್ಕೈಪ್‌ನಲ್ಲಿ ಸಂಪರ್ಕಿಸುತ್ತಾರೆಂದು ತಿಳಿಸಿ ಕೆಲಸಮಯದ ನಂತರ ಅಪರಿಚಿತ ವ್ಯಕ್ತಿಯು ಸ್ಕೈಪ್ ಮೂಲಕ ಸಂಪರ್ಕಿಸಿ ತಾನು ಸಿ.ಬಿ.ಐ ಆಫೀಸರ್ ಎಂದು ಪರಿಚಯ ಮಾಡಿಕೊಂಡಿದ್ದಾನೆ.
ನಿಮ ಬ್ಯಾಂಕ್ ಖಾತೆಯಿಂದ ಹಣವು ಹಾವಾಲಾದಲ್ಲಿ ವ್ಯವಹರಿಸಿರುವ ಬಗ್ಗೆ ತಿಳಿದು ಬಂದಿರುತ್ತದೆಂದು ಏರುಧ್ವನಿಯಲ್ಲಿ ಮಾತನಾಡುತ್ತಾ, ಈ ಕೂಡಲೇ ನಿಮನ್ನು ಹೌಸ್ ಅರೆಸ್ಟ್ ಮಾಡಿರುವುದಾಗಿ ತಿಳಿಸುತ್ತಾ ನೀವು ಹೋಂ ಸ್ಟೇಗೆ ಹೋಗಿ ಹೌಸ್ ಅರೆಸ್ಟ್ ಆಗಿರುವ ಬಗ್ಗೆ ತಿಳಿಸಬೇಕೆಂದು ಹೆದರಿಸಿ, 30 ಲಕ್ಷ ರೂ. ಹಣವನ್ನು ತನ್ನ ಬ್ಯಾಂಕ್ ಅಕೌಂಟಿಗೆ ವರ್ಗಾವಣೆ ಮಾಡಿಸಿಕೊಂಡು ಮತ್ತೆ ಅದೇ ರೀತಿ ಹೆದರಿಸಿದ್ದರಿಂದ ಅವರು ಸಿ.ಇ.ಎನ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡು ಹಣವನ್ನು ವರ್ಗಾವಣೆ ಮಾಡಿಸಿಕೊಂಡಿದ್ದ ಬಗ್ಗೆ ಮಾಹಿತಿ ಕಲೆ ಹಾಕಿ ಮೂವರನ್ನು ಬಂಧಿಸಿ ಬ್ಯಾಂಕ್‌ನ ಹಣವನ್ನು ಫ್ರೀಜ್ ಮಾಡಿ ವಿಚಾರಣೆಗೊಳಪಡಿಸಿ ಇನ್ನಷ್ಟು ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ.