ಬೆಳಗಾವಿ,ಜ.15- ರಾಯಭಾಗ ತಾಲೂಕು ಸವಸುದ್ದಿ ಗ್ರಾಮ ಹೊರವಲಯದ ಗುಡ್ಡಗಾಡು ಪ್ರದೇಶದಲ್ಲಿ ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರಗೈದ ಮೂವರು ಆರೋಪಿಗಳನ್ನು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್ಪಿ ಡಾ. ಭೀಮಾಶಂಕರ ಗುಳೇದ ಅವರು, ಆರೋಪಿ ಅಭೀಷೇಕ ಎಂಬುವವನು ಇನ್ಸ್ಟಾಗ್ರಾಮ್ ಮೂಲಕ ಒಬ್ಬ ಬಾಲಕಿಯನ್ನು ಪರಿಚಯಿಸಿ ಕೊಂಡಿದ್ದು ಕೆಲ ದಿನಗಳ ಹಿಂದೆ ಸವದತ್ತಿಗೆ ಹೋಗುತ್ತಿದ್ದೇವೆ ಬಾ ಎಂದು ಬಾಲಕಿಯನ್ನು ಪುಸಲಾಯಿಸಿದ್ದಾನೆ.
ನಂತರ ಬಾಲಕಿ ತನ್ನ ಗೆಳತಿಯೊಂದಿಗೆ ತನ್ನೂರು ಸಮೀಪದ ಹಾರೂಗೆರೆ ಪಟ್ಟಣದ ವರೆಗೆ ಬಂದಿದ್ದಾರೆ. ಆಗ ಅಲ್ಲಿಂದ ಬಂಧಿತ ಆರೋಪಿತರು ಬಾಲಕಿಯರಿಬ್ಬರನ್ನು ತಮ ಎರಟಿಗಾ ಕಾರಿನಲ್ಲಿ ಕರೆದೊಯ್ದಿದ್ದರು. ಸವಸುದ್ದಿ ಬಳಿಯ ಗುಡ್ಡದ ಸಮೀಪ ಇಬ್ಬರೂ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ್ದಾರೆ. ದೂರು ಕೊಟ್ಟ ಯುವತಿ ಮೇಲೆ ಅಭಿಷೇಕ ಮತ್ತು ಕೌತುಕ ಬಡಿಗೇರ ಅತ್ಯಾಚಾರ ಮಾಡಿದರೆ, ಕಾರಿನಲ್ಲಿದ್ದ ಬಾಲಕಿಯ ಮೇಲೆ ಆದಿಲ್ ಜಮಾದಾರ ಅತ್ಯಾಚಾರ ಎಸಗಿದ್ದಾನೆಂದು ತಿಳಿದು ಬಂದಿದೆ.
ಈ ಕೃತ್ಯವನ್ನು ವಿಡಿಯೋ ಮಾಡಿಕೊಂಡು ಆರೋಪಿಗಳು ಬಾಲಕಿಯರಿಗೆ ಬ್ಲಾಕಮೇಲ್ ಶುರು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಬಾಲಕಿಯರಿಂದ ಮಾಹಿತಿ ಪಡೆದ ಪೋಷಕರು ಹಾರೂಗೆರೆ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿದ್ದ ಪೊಲೀಸರು ತನಿಖೆ ಕೈಗೊಂಡು ಮೂವರು ಆರೋಪಿತರನ್ನು ಬಂಧಿಸಲಾಗಿದೆ ಎಂದು ಎಸ್ಪಿ ಡಾ. ಗುಳೇದ ಅವರು ತಿಳಿಸಿದ್ದಾರೆೆ.