ಬೆಂಗಳೂರು,ಆ.20- ಕಳೆದ 2024ನೇ ಸಾಲಿನ ಕರ್ನಾಟಕ ಸಹಕಾರ ಸಂಘಗಳ (ತಿದ್ದುಪಡಿ) ವಿಧೇಯಕ, 2024ನೇ ಸಾಲಿನ ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ ವಿಧೇಯಕ) ಹಾಗೂ 2024ರ ನೋಂದಣಿ (ಕರ್ನಾಟಕ ತಿದ್ದುಪಡಿ) ವಿಧೇಯಕಗಳನ್ನು ವಿಧಾನಸಭೆಯಲ್ಲಿಂದು ಹಿಂದಕ್ಕೆ ಪಡೆಯಲಾಯಿತು.
ಶಾಸನ ರಚನಾ ಕಲಾಪದಲ್ಲಿ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಈ ಮೂರೂ ವಿಧೇಯಕಗಳನ್ನು ಮಂಡಿಸಿ ಹಿಂದಕ್ಕೆ ಪಡೆಯಲು ಮನವಿ ಮಾಡಿದರು.ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರವಾಗಿ ಸಹಕಾರ ಸಂಘಗಳ (ತಿದ್ದುಪಡಿ) ವಿಧೇಯಕ, ಸೌಹಾರ್ದ ಸಹಕಾರಿ (ತಿದ್ದುಪಡಿ) ವಿಧೇಯಕ ಹಾಗೂ ಕಂದಾಯ ಸಚಿವ ಕೃಷ್ಣಭೇರೇಗೌಡರ ಪರವಾಗಿ ನೋಂದಣಿ (ಕರ್ನಾಟಕ ತಿದ್ದುಪಡಿ) ವಿಧೇಯಕವನ್ನು ಹಿಂದಕ್ಕೆ ಪಡೆಯಲು ಅನುಮತಿ ಕೋರಿದರು.
ಈ ಮೂರೂ ವಿಧೇಯಕಗಳಿಗೆ ಸಂಬಂಧಿಸಿದಂತೆ ಈಗಾಗಲೇ ಹೊಸದಾಗಿ ಹಲವಾರು ಸುಧಾರಣೆ ಕ್ರಮಗಳು, ಅನೇಕ ವಿಚಾರಗಳನ್ನೊಳಗೊಂಡ ವಿಧೇಯಕಗಳನ್ನು ತರಲಾಗಿದ್ದು, ಈ ವಿಧೇಯಕಗಳು ಅಗತ್ಯವಿರಲಿಲ್ಲ. ಹೀಗಾಗಿ ಇವುಗಳನ್ನು ಹಿಂದಕ್ಕೆ ಪಡೆಯಬೇಕೆಂದು ಕೋರಿದರು. ಬಳಿಕ ಸಭಾಧ್ಯಕ್ಷರು ಈ ವಿಧೇಯಕಗಳನ್ನು ಹಿಂದಕ್ಕೆ ಪಡೆಯಲಾಗಿದೆ ಎಂದು ಪ್ರಕಟಿಸಿದರು.