ತಿ.ನರಸೀಪುರ,ಫೆ.10- ಕಾವೇರಿ, ಕಪಿಲ ಮತ್ತು ಸ್ಪಟಿಕ ನದಿಗಳ ಸಂಗಮ ಸ್ಥಳವಾದ ತಿರುಮಕುಡಲು ನರಸೀಪುರದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿರುವ ದಕ್ಷಿಣ ಭಾರತದ ಕುಂಭಮೇಳಕ್ಕೆ ಇಂದು ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.
ಶ್ರೀ ಅಗಸ್ತ್ಯೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಬೆಳಗ್ಗೆ 6 ಗಂಟೆಗೆ ತರಹೇವಾರಿ ಪುಷ್ಪಗಳಿಂದ ಅಲಂಕರಿಸಿದ ಅಗಸ್ತ್ಯಶ್ವರ ಸ್ವಾಮಿಗೆ ಅನುಜ್ನೆ, ಪುಣ್ಯಾಹ, ಕಳಶ ಸ್ಥಾಪನೆ, ಗಣಹೋಮ, ಅಭಿಷೇಕ, ದೇವತಾರಾಧನೆ ಹಾಗು ರಾಷ್ಟ್ರಾಶೀರ್ವಾದ ಮಾಡುವ ಮೂಲಕ 13 ನೇ ಕುಂಭ ಮೇಳಕ್ಕೆ ಚಾಲನೆ ದೊರೆಯಿತು.
ನೆರದಿದ್ದ ಹಲವು ಗಣ್ಯರು, ಸಾರ್ವಜನಿಕರ ಸಮುಖದಲ್ಲಿ ಮಹಾಮಂಳಾರತಿ ನೆರವೇರಿಸಿ ವೇದ ಘೋಷ ಮಂತ್ರಗಳ ಪಠಿಸಲಾಯಿತು. ಪವಿತ್ರ 13ನೇ ಕುಂಭಮೇಳದ ಆರಂಭಕ್ಕೆ ಮುನ್ನುಡಿ ಬರೆಯಲಾಯಿತು.
ರಾಜ್ಯದ ವಿವಿಧ ಮೂಲೆಗಳಿಂದ ಬಂದಿದ್ದ ಭಕ್ತರು, ಹೊರ ರಾಜ್ಯದಿಂದ ಆಗಮಿಸಿದ ಭಕ್ತರ ದಂಡು ನಡುಹೊಳೆ ಬಸಪ್ಪ ದರ್ಶನ ಪಡೆದು ಸ್ನಾನ ಘಟ್ಟಗಳಲ್ಲಿ ಪುಣ್ಯಸ್ನಾನ ಮಾಡಿ ಅಗಸ್ತ್ಯಶ್ವರ, ಗುಂಜಾನರಸಿಂಹ ಸ್ವಾಮಿ, ಬಲ್ಲೇಶ್ವರ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿದರು.
ಹಲವು ಭಕ್ತರು ಮಾತನಾಡಿ, ಕಾಶಿಯನ್ನು ಬಿಟ್ಟರೆ ಇದು ಅತ್ಯಂತ ಪುಣ್ಯ ಸ್ಥಳ. ಇಲ್ಲಿ ನಡೆಯುವ ಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡಿದರೆ ಎಲ್ಲ ಪಾಪಗಳು ನಶಿಸಿ ಪುಣ್ಯ ಸ್ನಾನ ಪ್ರಾಪ್ತಿಯಾಗುತ್ತದೆ ಎಂಬ ಪ್ರತೀತಿ ಇದೆ. ಹಾಗಾಗಿ ನಾವು ಬೆಂಗಳೂರು, ಮೈಸೂರು, ತುಮಕೂರು, ಸೇಲಂ ಕಡೆಗಳಿಂದ ಬಂದಿರುವುದಾಗಿ ತಿಳಿಸಿದರು.
ದಕ್ಷಿಣದ ಪ್ರಯಾಗ್ ರಾಜ್ ಎಂದೇ ಖ್ಯಾತಿ ಪಡೆದ ತಿ.ನರಸೀಪುರ ತಿರುಮಕೂಡಲಿನ ತ್ರಿವೇಣಿ ಸಂಗಮದಲ್ಲಿ ಇಂದಿನಿಂದ ಕುಂಭಮೇಳ ಕಾರ್ಯಕ್ರಮ ಆರಂಭವಾಗಿದ್ದು ಮೊದಲ ದಿನವೇ ಸಾವಿರಾರು ಭಕ್ತಾಧಿಗಳು ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದರು.
ಮಹೋದಯದ ಕಾಲದ ಮಹಾ ಮಾಘದ ಪುಣ್ಯಸ್ನಾನಕ್ಕೆ ಬುಧವಾರ ಪ್ರಶಸ್ತ ಕಾಲವಾಗಿದ್ದು ಬೆಳಿಗ್ಗೆ 11 ರಿಂದ 11.30 ಮದ್ಯಾನ್ಹ 1.30 ರಿಂದ 2 ಗಂಟೆ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತಾಧಿಗಳು ಪುಣ್ಯ ಸ್ನಾನ ಮಾಡಲಿದ್ದಾರೆ ಎಂಬ ನಿರೀಕ್ಷೆಯನ್ನು ಜಿಲ್ಲಾಡಳಿತ ಹೊಂದಿದೆ.
ತ್ರಿವೇಣಿ ಸಂಗಮಕ್ಕೆ ಎಲ್ಲ ರೀತಿಯ ವಾಹನಗಳನ್ನು ನಿಷೇಧಿಸಲಾಗಿದ್ದು, ಭಕ್ತಾಧಿಗಳು ಪಿಟೀಲು ಚೌಡಯ್ಯ ವೃತ್ತದಿಂದ ಕಾಲ್ನಡಿಗೆಯಿಂದಲೇ ಬಂದು ಕುಂಭಮೇಳ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.
ಜಿಲ್ಲಾಡಳಿತ ಬರುವ ಭಕ್ತಾಧಿಗಳಿಗೆ ಸಕಲ ಸಿದ್ದತೆ ಕೈಗೊಂಡಿದ್ದು, ವಯೋವೃದ್ಧರು ಮತ್ತು ವಿಶೇಷ ಚೇತನರಿಗೆ ತ್ರಿವೇಣಿ ಸಂಗಮಕ್ಕೆ ಕರೆದೊಯ್ಯಲು ವಿದ್ಯುತ್ ಚಾಲಿತ ವಾಹನದ ವ್ಯವಸ್ಥೆ ಕಲ್ಪಿಸಲಾಗಿದೆ. ಬುಧವಾರ ಕುಂಭಮೇಳದ ಅಂತಿಮ ದಿನವಾಗಿರುವ ಹಿನ್ನೆಲೆಯಲ್ಲಿ ಟೌನ್ ವ್ಯಾಪ್ತಿಯ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಮೂರು ದಿನಗಳ ಕಾಲ ಪಟ್ಟಣ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ. ಕುಂಭಮೇಳ ನಡೆಯುವ ತ್ರಿವೇಣಿ ಸಂಗಮಕ್ಕೆ ವಿವಿಧೆಡೆಯಿಂದ ಭಕ್ತಾಧಿಗಳನ್ನು ಕರೆದೊಯ್ಯಲು ಜಿಲ್ಲಾಡಳಿತದ ವತಿಯಿಂದ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.