ತಿರುಪತಿ,ಅ.25- ಕಳೆದ ಕೆಲ ದಿನಗಳಿಂದ ವಿಮಾನಗಳಲ್ಲಿ ಬಾಂಬ್ ಇಟ್ಟಿರುವ ಬೆದರಿಕೆ ಪ್ರಕರಣಗಳು ಪದೇ ಪದೇ ಹೆಚ್ಚಾಗುತ್ತಿದ್ದು, ಇದೀಗ ಇಂತಹುದೇ ಪ್ರಕರಣ ವಿಶ್ವಪ್ರಸಿದ್ಧ ತಿರುಪತಿಯಲ್ಲಿ ಕೇಳಿ ಬಂದಿದೆ.ಆಂಧ್ರಪ್ರದೇಶದ ತಿರುಪತಿಯಲ್ಲಿ ಬಾಂಬ್ ಬೆದರಿಕೆ ಇರುವ ಬಗ್ಗೆ ಆಘಾತಕಾರಿ ದೂರು ಕೇಳಿ ಬಂದಿದ್ದು, ರಾಜ್ಯ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದಾರೆ.
ಹೋಟೆಲ್ಲ್ಲಿ ಬಾಂಬ್ ಇರಿಸಿರುವ ಬಗ್ಗೆ ಕರೆ ಮತ್ತು ಇಮೇಲ್ ಮೂಲಕ ಮಾಹಿತಿ ನೀಡಲಾಗಿತ್ತು ಎಂದು ಹೇಳಲಾಗುತ್ತಿದೆ. ಹೋಟೆಲ್ಗಳಲ್ಲಿ ಬಾಂಬ್ ಸ್ಫೋಟದ ಸುದ್ದಿ ತಿಳಿದ ತಕ್ಷಣ ತಿರುಪತಿ ಪೊಲೀಸರು ನಗರದ ಹೋಟೆಲ್ಗಳಲ್ಲಿ ತೀವ್ರ ಶೋಧ ನಡೆಸಿದ್ದಾರೆ.
ಬಾಂಬ್ ನಿಷ್ಕಿಯ ದಳ ನಿನ್ನೆ ರಾತ್ರಿ 10ರಿಂದ ಬೆಳಗಿನಜಾವ 2 ಗಂಟೆವರೆಗೆ ವಿವಿಧ ಹೋಟೆಲ್ಗಳಲ್ಲಿ ಶೋಧ ನಡೆಸಿತು. ಲೀಲಾಮಹಾಲ್ ಬಳಿ ಮೂರು ಹೋಟೆಲ್ಗಳನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಲಾಗಿತ್ತು. ಸದ್ಯ ಬೆದರಿಕೆ ಕರೆಗಳ ವಿವರಗಳನ್ನು ಪತ್ತೆಹಚ್ಚುವಲ್ಲಿ ಪೊಲೀಸರು ನಿರತರಾಗಿದ್ದಾರೆ ಮತ್ತು ಸಾರ್ವಜನಿಕ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದ್ದಾರೆ.
ಈ ಬೆದರಿಕೆಯ ಇಮೇಲ್ನಲ್ಲಿ ಈ ವರ್ಷದ ಫೆಬ್ರವರಿಯಲ್ಲಿ ಬಂಧಿಸಲಾದ ಡ್ರಗ್ ಕಿಂಗ್ಪಿನ್ ಜಾಫರ್ ಸಿದ್ದಿಕ್ ಹೆಸರು ಕೂಡ ಇದೆ ಎಂದು ಹೇಳಲಾಗುತ್ತಿದೆ. ತಿರುಪತಿ ಪೂರ್ವ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಶ್ರೀನಿವಾಸುಲು ಬಾಂಬ್ ಬೆದರಿಕೆಯ ಘಟನೆಯನ್ನು ದೃಢಪಡಿಸಿದ್ದಾರೆ ಮತ್ತು ಈ ಬೆದರಿಕೆಗಳಿಗೆ ಕಾರಣರಾದವರನ್ನು ಗುರುತಿಸಲಾಗುತ್ತಿದೆ ಎಂದು ಜನರಿಗೆ ಭರವಸೆ ನೀಡಿದರು.
ಮೂರು ಹೊಟೇಲ್ಗಳಿಗೆ ಬಾಂಬ್ ಬೆದರಿಕೆ ಎಚ್ಚರಿಕೆ ಬಂದಿದ್ದು, ಇಮೇಲ್ಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ವಿವಿಧ ಕೋನಗಳಲ್ಲಿ ತನಿಖೆ ನಡೆಸಲಾಗುತ್ತಿದೆ, ಶೀಘ್ರವೇ ಆರೋಪಿಗಳನ್ನು ಪತ್ತೆ ಮಾಡುತ್ತೇವೆ ಎಂದು ಇನ್ಸ್ಪೆಕ್ಟರ್ ಶ್ರೀನಿವಾಸುಲು ತಿಳಿಸಿದ್ದಾರೆ.
ಕಳೆದ ಕೆಲ ದಿನಗಳಿಂದ ದೇಶದಲ್ಲಿ ಆರಂಭವಾದ ಬಾಂಬ್ ಬೆದರಿಕೆಗಳ ಸರಣಿ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ.
ವಿಮಾನಕ್ಕೆ ಬೆದರಿಕೆ ಹಾಕುವ ಮೂಲಕ ಬಾಂಬ್ ಬೆದರಿಕೆ ಆರಂಭವಾಗಿತ್ತು. ಕಳೆದ 20 ದಿನಗಳಲ್ಲಿ ಸುಮಾರು 80ರಿಂದ 90 ದೇಶೀಯ ಮತ್ತು ಅಂತರಾಷ್ಟ್ರೀಯ ವಿಮಾನಗಳಿಗೆ ಬಾಂಬ್ ಬೆದರಿಕೆಗಳು ಬಂದಿವೆ. ಇದರಿಂದಾಗಿ ಹಲವು ವಿಮಾನಗಳು ದಿಕ್ಕು ತಪ್ಪಿಸಿದ್ದು, ಹಲವರು ತುರ್ತು ಭೂಸ್ಪರ್ಶ ಮಾಡಿದ್ದಾರೆ.