ಬೆಂಗಳೂರು,ಮಾ.10- ಲೈಸೆನ್ಸ್ ಯುಕ್ತ ಗಿರವಿದಾರ ಮತ್ತು ಲೈಸೆನ್ಸ್ ರಹಿತ ಗಿರವಿದಾರರು ನೀಡುವ ದುಬಾರಿ ಬಡ್ಡಿದರಗಳ ಅನುಚಿತ ತೊಂದರೆ ಮತ್ತು ಬಲವಂತದ ವಸೂಲಾತಿ ವಿಧಾನಗಳಿಂದ ಆರ್ಥಿಕವಾಗಿ ದುರ್ಬಲ ಗುಂಪುಗಳನ್ನು ಹಾಗೂ ವ್ಯಕ್ತಿಗಳನ್ನು ರಕ್ಷಿಸುವ ಉದ್ದೇಶದ 2025ನೇ ಸಾಲಿನ ಕರ್ನಾಟಕ ಗಿರವಿದಾರರ (ತಿದ್ದುಪಡಿ ವಿಧೇಯಕ) ಸೇರಿದಂತೆ ಮೂರು ವಿಧೇಯಕಗಳನ್ನು ವಿಧಾನಸಭೆಯಲ್ಲಿಂದು ಅಂಗೀಕರಿಸಲಾಯಿತು.
ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಅಂಗೀಕರಿಸಬೇಕೆಂದು ಕೋರಿದ 2025ನೇ ಸಾಲಿನ ಕರ್ನಾಟಕ ಗಿರವಿದಾರರ ತಿದ್ದುಪಡಿ ವಿಧೇಯಕವನ್ನು ತಿದ್ದುಪಡಿಯೊಂದಿಗೆ, 2025ನೇ ಸಾಲಿನ ಮಿತಿಮೀರಿದ ಬಡ್ಡಿ ವಿಧಿಸುವಿಕೆ ನಿಷೇಧ (ತಿದ್ದುಪಡಿ) ವಿಧೇಯಕ ಹಾಗೂ 2025ನೇ ಸಾಲಿನ ಕರ್ನಾಟಕ ಲೇವಾದೇವಿದಾರರ (ತಿದ್ದುಪಡಿ) ವಿಧೇಯಕವನ್ನು ತಿದ್ದುಪಡಿಯೊಂದಿಗೆ ವಿಧಾನಸಭೆ ಸರ್ವಾನುಮತದಿಂದ ಅಂಗೀಕರಿಸಿತು.
ಇದಕ್ಕೂ ಮುನ್ನ ವಿಧೇಯಕಗಳನ್ನು ಕುರಿತು ಮಾತನಾಡಿದ ಕೆ.ಎನ್.ರಾಜಣ್ಣ, ಗಿರವಿದಾರರ ತಿದ್ದುಪಡಿ ವಿಧೇಯಕವು ಬಲವಂತದ ವಸೂಲಿಗೆ ತೊಂದರೆ ಕೊಡುವುದನ್ನು ನಿಷೇಧಿಸಲಾಗಿದೆ. 1 ಸಾವಿರ ದಂಡ ಇರುವುದನ್ನು 5 ಲಕ್ಷ ರೂ.ವರೆಗೆ ಹೆಚ್ಚಿಸಲಾಗಿದೆ. 6 ತಿಂಗಳ ಶಿಕ್ಷೆಯನ್ನು 10 ವರ್ಷಗಳಿಗೆ ಹೆಚ್ಚಿಸಲಾಗಿದೆ. 1 ತಿಂಗಳು ಎಂಬುದರ ಬದಲಾಗಿ 3 ವರ್ಷ ಎಂದು ತಿದ್ದುಪಡಿ ಮಾಡಲಾಗಿದೆ ಎಂದರು.
ಮಿತಿಮೀರಿದ ಬಡ್ಡಿ ವಿಧಿಸುವಿಕೆಯ ತಿದ್ದುಪಡಿಯ ವಿಧೇಯಕವು ಮೈಕ್ರೋ ಫೈನಾನ್ಸ್ ಕಾಯ್ದೆಯಲ್ಲಿನ ಶಿಕ್ಷೆ ಪ್ರಮಾಣವನ್ನೇ ಒಳಗೊಂಡಿರುತ್ತದೆ ಎಂದು ಹೇಳಿದರು.ಲೇವಾದೇವಿದಾರರ ತಿದ್ದುಪಡಿ ವಿಧೇಯಕವು ಸಹಕಾರ ಇಲಾಖೆಯ ಅಧಿಕಾರಿಗಳಿಗೆ ಮಾತ್ರ ಇದ್ದ ಅಧಿಕಾರವನ್ನು ಇತರೆ ಇಲಾಖೆಗಳಿಗೂ ಅವಕಾಶ ನೀಡಲಾಗಿದೆ. ಓಂಬುಡ್ಸನ್ ನೇಮಕಕ್ಕೂ ಅವಕಾಶವಿದೆ. ಕುಂದು ಕೊರತೆಗೆ ಕುಂದು ಕೊರತೆ ನಿವಾರಣಾ ಘಟಕ ತೆರೆಯಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಈ ಮೂರು ವಿಧೇಯಕಗಳಿಗೂ ಪ್ರತ್ಯೇಕವಾಗಿ ಅಂಗೀಕರಿಸಬೇಕೆಂದು ಸಚಿವರು ಕೋರಿದರು. ಆಗ ಸಭಾಧ್ಯಕ್ಷ ಯು.ಟಿ.ಖಾದರ್‌ರವರು, ಮೂರು ವಿಧೇಯಕಗಳನ್ನೂ ಪ್ರತ್ಯೇಕವಾಗಿ ಮತಕ್ಕೆ ಹಾಕಿದಾಗ ಧ್ವನಿಮತದ ಅಂಗೀಕಾರ ದೊರೆಯಿತು.